ರಾಜ್ಯದ ಕೃಷಿ ಸಚಿವರು ಕುಂಭಕರ್ಣ ನಿದ್ರೆಗೆ ಜಾರಿದ್ದಾರೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪ (ಚಿಕ್ಕಮಗಳೂರು) (ಜು.25): ರೈತರಿಗೆ ರಸಗೊಬ್ಬರ ಕೊಡಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಒಂದು ಚೀಲ ಗೊಬ್ಬರ ಬೇಕು ಅಂತ ಹೋದರೆ ನಾಲ್ಕೈದು ಗಂಟೆ ಕಾಯಿಸುತ್ತಾರೆ. ರಾಜ್ಯದ ಕೃಷಿ ಸಚಿವರು ಕುಂಭಕರ್ಣ ನಿದ್ರೆಗೆ ಜಾರಿದ್ದಾರೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿ ನಡೆದ ಜೆಡಿಎಸ್ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಮಾತನಾಡಿ, ‘ರಾಜ್ಯದ ಕೃಷಿ ಸಚಿವರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಒಂದು ಟಿಸಿ ಸಂಪರ್ಕ ಪಡೆಯಬೇಕಾದರೆ ಕುಮಾರಣ್ಣನ ಆಡಳಿತದಲ್ಲಿ ₹25000 ಇತ್ತು, ಈಗ ₹2.5 ಲಕ್ಷ ಆಗಿದೆ. ನೀವು ಏನ್ ಸರ್ಕಾರ ಮಾಡ್ತಿದ್ದೀರಾ ಅಂತ ರೈತರು ಪ್ರಶ್ನೆ ಮಾಡ್ತಿದ್ದಾರೆ’ ಎಂದರು. ಬಾಳೆಹೊನ್ನೂರಿನಲ್ಲೂ ಕಾರ್ಯಕರ್ತರನ್ನು ಭೇಟಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್‌, ‘ಮುಖ್ಯಮಂತ್ರಿಗಳು 5 ವರ್ಷ ನಾನೇ ಸಿಎಂ, ನಮ್ಮಲ್ಲಿ ಯಾವುದೇ ಒಳ ಒಪ್ಪಂದ ಆಗಿಲ್ಲ ಎಂದು ಹೇಳುತ್ತಾರೆ.

ಸಿಎಂ ತಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳುವಲ್ಲಿ ಕಾಲಹರಣ ಮಾಡುತ್ತಿದ್ದರೆ, ಡಿಸಿಎಂ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಒಟ್ಟಾರೆ ಕಾಂಗ್ರೆಸ್‌ನವರು ಕುರ್ಚಿ ಉಳಿಸಿಕೊಳ್ಳುವ ಜಂಜಾಟದಲ್ಲಿ ಜನ ಬೇಸತ್ತು ಹೋಗಿದ್ದಾರೆ ಎಂದು ನಿಖಿಲ್ ಆಕ್ರೋಶ ವ್ಯಕ್ತಪಡಿಸಿದರು. ‘ರಾಜ್ಯದ ಜನತೆ ಎಲ್ಲಿ ಹೋದರೂ ಅವರ ದುರಾಡಳಿತ, ಭ್ರಷ್ಟಾಚಾರ, ವೈಫಲ್ಯ, ಹಗರಣ, ಜನವಿರೋಧಿ ನೀತಿಗಳ ಬಗ್ಗೆ ಜನ ಆಕ್ರೋಶ ಭರಿತವಾಗಿ ಚರ್ಚೆ ಮಾಡುತ್ತಿದ್ದಾರೆ. ರಾಜ್ಯದ ಜನತೆ ಇಷ್ಟು ಬೇಗ ದೊಡ್ಡ ಬಹುಮತದ ರಾಜ್ಯ ಸರ್ಕಾರವನ್ನು ವಿರೋಧಿಸುತ್ತಿರುವುದು ಇದೇ ಮೊದಲು’ ಟೀಕಿಸಿದರು

ರಾಜ್ಯಕ್ಕೆ ಸುರ್ಜೆವಾಲಾ ಸೂಪರ್‌ ಸಿಎಂ: ಕಾಂಗ್ರೆಸ್ ಶಾಸಕರು ಅನುದಾನ ಪಡೆಯಬೇಕಾದರೆ, ಸಿಎಂ ಕಡೆ ಮುಖ ಮಾಡ್ತಿಲ್ಲ, ಬದಲಾಗಿ ಸುರ್ಜೆವಾಲಾ ಭೇಟಿ ಮಾಡ್ತೀವಿ ಅಂತಿದಾರೆ. ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುವುದಕ್ಕೆ ಇದು ಸಣ್ಣ ಉದಾಹರಣೆ. ಸಿದ್ದರಾಮಯ್ಯ ಸಾಂವಿಧಾನಿಕ ಹುದ್ದೆ ಅಲಂಕರಿಸಿ ಕುಳಿತಿದ್ದಾರೆ. ಸೂಪರ್ ಸಿಎಂ ಸುರ್ಜೆವಾಲಾ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು. ನಾವೆಲ್ಲ ಏಳೂವರೆ ಕೋಟಿ ಕನ್ನಡಿಗರು ಸಿದ್ದರಾಮಯ್ಯ ಸಿಎಂ ಎಂದು ಅಂದುಕೊಂಡಿದ್ದೆವು. ಆದರೆ, ಕಾಂಗ್ರೆಸ್‌ನ ಕೇಂದ್ರ ನಾಯಕರು, ಅದರಲ್ಲೂ ಸುರ್ಜೆವಾಲಾ ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ನೀವು (ಜನ) ನೋಡುತ್ತಿದ್ದಿರಿ.

ಸುರ್ಜೆವಾಲಾ, ಕಾಂಗ್ರೆಸ್ ಕೇಂದ್ರ ನಾಯಕರೊಂದಿಗೆ ಸಿಎಂ ಸ್ಥಾನದ ಅಗ್ರಿಮೆಂಟ್ ಮಾಡಿಕೊಂಡಿದ್ದಾರಾ ಎಂಬ ಅನುಮಾನ ಜನರಲ್ಲಿ ಕಾಡುತ್ತಿದೆ ಎಂದು ದೂರಿದರು. ಸಿಎಂ ಸಿದ್ದರಾಮಯ್ಯ ತಾವೇ ಐದು ವರ್ಷ ಮುಂದುವರೆಯುತ್ತೇನೆಂಬ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು, ಮಾಧ್ಯಮಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಡಿಸಿಎಂ ಶಿವಕುಮಾರ್ ಜೊತೆಗೆ ಇಬ್ಬರು ಮೂವರು ಶಾಸಕರು ಇದ್ದರೆ ಹೆಚ್ಚು ಎಂದು. ಇದನ್ನು ನಾವು ಹೇಳುತ್ತಿಲ್ಲ. ಸ್ವತಃ ಸಿಎಂ ಹೇಳುತ್ತಿದಾರೆ ಎಂದು ವ್ಯಂಗ್ಯವಾಡಿದರು.

ಸಿಎಂ ಸ್ಥಾನದಿಂದ ಯಾರು ಕೆಳಗಿಳಿಸುತ್ತಾರೆ? ಕೆಪಿಸಿಸಿ ಅಧ್ಯಕ್ಷರ ಕುರ್ಚಿ ಮೇಲೆ ಯಾರು ಕಣ್ಣಿಟ್ಟಿದ್ದಾರೆ ? ಅದು ನಮಗೆ ಬೇಕಿಲ್ಲದ ವಿಚಾರ. ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದಿಂದ ಸರ್ಕಾರ ರಚನೆ ಮಾಡಿದೆ. ಮಾತೆತ್ತಿದರೆ ಗ್ಯಾರಂಟಿ ಅಂತಾರೆ. ಪ್ರಣಾಳಿಕೆಯಲ್ಲಿ ಅವರೇ ಗ್ಯಾರಂಟಿ ಹೇಳಿದ್ರು, ಇದುವರೆಗೂ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿಲ್ಲ. ಧಾರ್ಮಿಕ ಗುರುಗಳು ಒಂದಷ್ಟು ಸಂದರ್ಭದಲ್ಲಿ, ನಮ್ಮ ಸಮುದಾಯ ನಾಯಕರು ಮುಂದೆ ಬಂದು ಕುಳಿತ ಸಂದರ್ಭದಲ್ಲಿ ಅವಕಾಶ ಸಿಗಲಿ ಎನ್ನುವ ಉದ್ದೇಶಕ್ಕೆ ಭಾವನೆ ವ್ಯಕ್ತಪಡಿಸಿದ್ದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.