Bidadi Township ಯೋಜನೆ ವಿಚಾರವಾಗಿ ಡಿ.ಕೆ.ಶಿವಕುಮಾರ್‌ಗೆ ನಿಖಿಲ್ ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ. ರೈತರ ಸಮ್ಮುಖದಲ್ಲೇ ಚರ್ಚೆ ನಡೆಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಹಾರೋಹಳ್ಳಿ (ಜೂ.23): ಬಿಡದಿ ಟೌನ್‌ಶಿಪ್ ಯೋಜನೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ ಅವರು, ರೈತರ ಸಮ್ಮುಖದಲ್ಲೇ ಚರ್ಚೆ ನಡೆಸುವಂತೆ ಸವಾಲು ಹಾಕಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾರೋಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, "ವಿಧಾನಸೌಧದ ಎಸಿ ಕೊಠಡಿಯಲ್ಲಿ ಕುಳಿತು ಕಾಫಿ ಕುಡಿಯುತ್ತಾ ರೈತರ ಭೂಮಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಾರದು. ರೈತರೇ ಅಂತಿಮ ತೀರ್ಪುಗಾರರು. ಬಿಡದಿ ಟೌನ್‌ಶಿಪ್ ಯೋಜನೆ ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ ನಿರ್ಧಾರ ಮಾಡುವ ವಿಷಯವಲ್ಲ. ಇದು ಸಾವಿರಾರು ರೈತರ ಬದುಕಿಗೆ ಸಂಬಂಧಿಸಿದ ಪ್ರಶ್ನೆ" ಎಂದು ಹೇಳಿದರು.

"ಕುಮಾರಣ್ಣ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಚರ್ಚೆ ಮಾಡಬೇಕಾದರೆ ಬೈರಮಂಗಲ ಸರ್ಕಲ್‌ಗೆ ಬನ್ನಿ. ಬಾಧಿತ ರೈತರ ಸಮ್ಮುಖದಲ್ಲೇ ಬಹಿರಂಗವಾಗಿ ಚರ್ಚೆ ನಡೆಸೋಣ. ಈ ವಿವಾದಕ್ಕೆ ಅಂತ್ಯ ಹಾಡಬೇಕಾದರೆ ಮುಖ್ಯಮಂತ್ರಿ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಬೇಕು" ಎಂದು ಆಗ್ರಹಿಸಿದರು. ಟೌನ್‌ಶಿಪ್ ಯೋಜನೆಗೆ ಸ್ಥಳೀಯ ರೈತರು ಒಪ್ಪಿಗೆ ನೀಡಿದರೆ ಸರ್ಕಾರ ಮುಂದುವರಿಯಲಿ. ಆದರೆ ರೈತರು ವಿರೋಧ ವ್ಯಕ್ತಪಡಿಸಿದರೆ, ಸರ್ಕಾರ ಜನರಿಗೆ ಉತ್ತರ ನೀಡಬೇಕಾಗುತ್ತದೆ ಎಂದು ನಿಖಿಲ್ ಹೇಳಿದರು.

ಇಲ್ಲಿಯವರೆಗೆ ಯಾವುದೇ ಜನಪ್ರತಿನಿಧಿ ಅಥವಾ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಿಲ್ಲ. ಸ್ಥಳೀಯ ರೈತರೊಂದಿಗೆ ಒಂದೇ ಒಂದು ಸುತ್ತಿನ ಚರ್ಚೆಯನ್ನೂ ನಡೆಸಿಲ್ಲ. ರೈತರನ್ನು ಸಂಪೂರ್ಣ ಕತ್ತಲಲ್ಲಿಟ್ಟು ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಇದೇ ಮೊದಲು

ರಾಜ್ಯ ಸರ್ಕಾರ ರೈತರ ಒಗ್ಗಟ್ಟನ್ನು ಒಡೆಯಲು ವ್ಯವಸ್ಥಿತ ಸಂಚು ರೂಪಿಸಿದೆ ಎಂದು ಆರೋಪಿಸಿದ ನಿಖಿಲ್ ಕುಮಾರಸ್ವಾಮಿ, "25 ಕೋಟಿ ರೂಪಾಯಿ ವೆಚ್ಚ ಮಾಡಿ, ಒಟ್ಟು 755 ಬಾಧಿತ ರೈತರ ಪೈಕಿ ಕೇವಲ 7 ಜನರ ಬೆಂಬಲ ಪಡೆದು ಇಡೀ ಟೌನ್‌ಶಿಪ್ ಯೋಜನೆಗೆ ಅನುಮೋದನೆ ಪಡೆಯಲಾಗಿದೆ. ದೇಶದ ಇತಿಹಾಸದಲ್ಲೇ ಇಂತಹ ಘಟನೆ ನಡೆದಿರುವುದು ಇದೇ ಮೊದಲು" ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರ ಅಭಿಪ್ರಾಯಕ್ಕೆ ಗೌರವ ನೀಡಬೇಕು ಹಾಗೂ ಸರ್ಕಾರ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.