Bidadi Township Row: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಿಡದಿ ಟೌನ್‌ಶಿಪ್ ಯೋಜನೆ ಇದೀಗ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಯೋಜನೆ ಕುರಿತು ನಡೆಯುತ್ತಿರುವ..
ಬೆಂಗಳೂರು (ಜೂ.22): ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಿಡದಿ ಟೌನ್‌ಶಿಪ್ ಯೋಜನೆ ಇದೀಗ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಯೋಜನೆ ಕುರಿತು ನಡೆಯುತ್ತಿರುವ ಆರೋಪ-ಪ್ರತ್ಯಾರೋಪಗಳ ನಡುವೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕೃತವಾಗಿ ಮುಖಾಮುಖಿ ಚರ್ಚೆಗೆ ಆಹ್ವಾನ ನೀಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಕಚೇರಿಯಿಂದ ಪತ್ರವೊಂದನ್ನು ಕಳುಹಿಸಲಾಗಿದ್ದು, ಜೂನ್ 26ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಗೆ ಆಗಮಿಸುವಂತೆ ಕೋರಲಾಗಿದೆ. ಅಲ್ಲದೆ, ಕುಮಾರಸ್ವಾಮಿ ಅವರು ತಮ್ಮ ತಂಡದ ಐದು ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಬಿಡದಿ ಟೌನ್‌ಶಿಪ್ ಯೋಜನೆ ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷ ನಾಯಕರ ನಡುವೆ ವಾಕ್ಸಮರ ತೀವ್ರಗೊಂಡಿತ್ತು. ಯೋಜನೆಯ ಅನುಷ್ಠಾನ, ಭೂಸ್ವಾಧೀನ ಹಾಗೂ ರಾಜಕೀಯ ಆರೋಪಗಳ ಕುರಿತು ಎರಡೂ ಕಡೆಯಿಂದ ನಿರಂತರ ಹೇಳಿಕೆಗಳು ಕೇಳಿಬರುತ್ತಿದ್ದವು. ಈ ಬೆಳವಣಿಗೆಗಳ ನಡುವೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೇರ ಚರ್ಚೆಯ ಪ್ರಸ್ತಾಪ ಮುಂದಿಟ್ಟಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಪತ್ರದಲ್ಲಿ ಏನಿದೆ?
ತಾವು ಪ್ರಾರಂಭಿಸಿದ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ, ತಮ್ಮ ಜೊತೆ ನಾನು ಚರ್ಚಿಸಲು ಉತ್ಸುಕನಾಗಿದ್ದು, ದಿನಾಂಕ: 26.06.2026 ರಂದು ಬೆಳಗ್ಗೆ 11.00 ಗಂಟೆಗೆ ವಿಧಾನಸೌಧಕ್ಕೆ ತಾವು ಮತ್ತು ತಮ್ಮ ತಂಡದ ಐದು ಪ್ರತಿನಿಧಿಗಳೊಂದಿಗೆ ನನ್ನ ಕಚೇರಿಗೆ ಆಗಮಿಸುವಂತೆ ತಮ್ಮನ್ನು ಕೋರುತ್ತೇನೆ.


