ಬೆಂಗಳೂರು (ಮೇ.02):  ಪಕ್ಷವನ್ನು ಸದೃಢಗೊಳಿಸಲು ಎರಡು ತಿಂಗಳಲ್ಲಿ ಹೊಸ ರೂಪರೇಷೆ ರೂಪಿಸಿ ಯುವ ಕಾರ್ಯಕರ್ತರನ್ನು ಒಗ್ಗೂಡಿಸುತ್ತೇವೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

ಪ್ರಧಾನಿಯಾಗಿ 25 ವರ್ಷವಾದ ಹಿನ್ನೆಲೆಯಲ್ಲಿ ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ನಾವು ಬೆಳೆಯುವ ಆತ್ಮವಿಶ್ವಾಸವಿದೆ. ಅದಕ್ಕೆ ಸಾಮೂಹಿಕ ನಾಯಕತ್ವದಲ್ಲೇ ಹೋಗುತ್ತೇವೆ. ಸಾಮೂಹಿಕ ನಾಯಕತ್ವದ ಬಗ್ಗೆ ಕುಮಾರಸ್ವಾಮಿ ಅವರ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದರು.

ನನ್ನ ಮುಂದೆ ಇರುವುದು ಪಕ್ಷದ ಶಕ್ತಿ ಉಳಿಸುವ ಕೆಲಸ ಮಾತ್ರ. ಮುಖಂಡರನ್ನು ಒಟ್ಟಾಗಿ ಸೇರಿಸಿ ಶಕ್ತಿ ತುಂಬುತ್ತೇನೆ. ಈ ನಿರ್ಣಯವನ್ನು ಕೈಗೊಳ್ಳುತ್ತೇನೆ. ನಮ್ಮದು ಪ್ರಾದೇಶಿಕ ಪಕ್ಷ. ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ನಾವು ಬೆಳೆಯಬೇಕಿದೆ. ಅವರ ಆರ್ಥಿಕ ಶಕ್ತಿಯ ಬಗ್ಗೆ ವಿಮರ್ಶಿಸುವುದಿಲ್ಲ. ಪ್ರತಿಯೊಂದೂ ಪಕ್ಷ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಅದಕ್ಕೆ ನಾನು ವಿರೋಧ ವ್ಯಕ್ತಪಡಿಸಲ್ಲ ಎಂದರು.

ಕೊರೋನಾ ವಿಚಾರದಲ್ಲಿ ರಾಜಕೀಯ ಇಲ್ಲ, ಒಗ್ಗಟ್ಟಾಗಿ ಹೋರಾಟ; ದೇವೇಗೌಡ! ...

ಶೀಘ್ರದಲ್ಲಿಯೇ ಘಟಕಗಳ ಬದಲಾವಣೆ: ಹಳೆಯ ಘಟಕಗಳನ್ನು ಮಾರ್ಪಾಡು ಮಾಡಲಾಗುವುದು. ಈಗಾಗಲೇ ಹಲವು ಘಟಕಗಳನ್ನು ವಿಸರ್ಜನೆ ಮಾಡಲಾಗಿದೆ. ಪಕ್ಷದಲ್ಲಿರುವ ವಿವಿಧ ಘಟಕಗಳನ್ನು ಜೂನ್‌ ಅಥವಾ ಜುಲೈನಲ್ಲಿ ಬದಲಾವಣೆ ಮಾಡುತ್ತೇವೆ. ಪ್ರತಿ ತಾಲೂಕು, ಜಿಲ್ಲಾ ಘಟಕ ಬಲಗೊಳಿಸುತ್ತೇವೆ. ರಾಜ್ಯ ಘಟಕವನ್ನೂ ಬಲಗೊಳಿಸುತ್ತೇವೆ. ಕುಮಾರಸ್ವಾಮಿ ಜತೆ ಚರ್ಚಿಸಿ ಅಂತಿಮಗೊಳಿಸಲಾಗುವುದು. ಅಲ್ಲದೇ, ಜುಲೈ ನಂತರ ಸದಸ್ಯತ್ವ ಅಭಿಯಾನ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ನಾನು ಪ್ರಧಾನಿಯಾಗಿ 25 ವರ್ಷವಾಗಿದ್ದು, ಬೆಳ್ಳಿಹಬ್ಬ ಆಚರಣೆ ನಡೆಯುತ್ತಿದೆ. ಮಾಧ್ಯಮಗಳು ನನ್ನ ರಾಜಕೀಯ ಜೀವನ ವಿಶ್ಲೇಷಣೆ ಮಾಡಿವೆ. ನನಗೆ ಸಹಕಾರ ಕೊಟ್ಟು ಶಕ್ತಿ ತುಂಬಿವೆ. ದೇಶದ ಪ್ರಧಾನಿಯಾಗಿ ನಾನು ಕೆಲವೇ ದಿನ ಅಧಿ​ಕಾರ ನಡೆಸಿದೆ. ಆದರೆ, ತುಂಬಾ ಕೆಲಸ ಮಾಡಿದ್ದೇನೆ. ಯಾರನ್ನೂ ದೂಷಣೆ ಮಾಡುವುದಿಲ್ಲ. ಪಕ್ಷಭೇದ ಮರೆತು ಹಲವು ನಾಯಕರು ನನ್ನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದರು.