Asianet Suvarna News Asianet Suvarna News

ಕಲಬುರಗಿ: ಶತ್ರುವಿನ ಶತ್ರು ಮಿತ್ರ: ಭೀಮಾ ತೀರದ ರಾಜಕೀಯದಲ್ಲಿ ಹೊಸ ಅಲೆ..!

ನಿನ್ನೆ ಮೊನ್ನೆಯ ವರೆಗೂ ಅಫಜಲ್ಪುರ, ಕಲಬುರಗಿ ರಾಜಕಾರಣದಲ್ಲಿ ಉತ್ತರ, ದಕ್ಷಿಣ ಮುಖವಾಗಿದ್ದ ಎಂವೈ ಪಾಟೀಲ್‌, ಮಾಲೀಕಯ್ಯಾ ಗುತ್ತೇದಾರ್‌ ಇದೀಗ ಕಳೆದೆರಡು ದಿನದಿಂದ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಸಾರ್ವಜನಿಕವಾಗಿ ಗಮನ ಸೆಳೆಯುತ್ತಿದ್ದಾರೆ.

New Politics Wave in the Banks of Bhima at Kalaburagi in Lok Sabha Elections 2024 grg
Author
First Published Apr 24, 2024, 2:52 PM IST

ಶೇಷಮೂರ್ತಿ ಅವಧಾನಿ

ಕಲಬುರಗಿ(ಏ.24):  ರಾಜಕೀಯದಲ್ಲಿ ಶತ್ರುವಿನ ಶತ್ರು ಮಿತ್ರ ಎಂಬ ಮಾತಿದೆ. ಹಾಗೆ ನೋಡಿದರೆ ಇದು ಸಹಜ ಎನ್ನಬಹುದು. ಇದೀಗ ಈ ಮಾತು ಭೀಮಾ ತೀರದ ಅಫಜಲ್ಪೂರದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಗೊಳ್ಳುವ ಹೊಸ್ತಿಲಲ್ಲಿದೆ. ನಿನ್ನೆ ಮೊನ್ನೆಯ ವರೆಗೂ ಅಫಜಲ್ಪುರ, ಕಲಬುರಗಿ ರಾಜಕಾರಣದಲ್ಲಿ ಉತ್ತರ, ದಕ್ಷಿಣ ಮುಖವಾಗಿದ್ದ ಎಂವೈ ಪಾಟೀಲ್‌, ಮಾಲೀಕಯ್ಯಾ ಗುತ್ತೇದಾರ್‌ ಇದೀಗ ಕಳೆದೆರಡು ದಿನದಿಂದ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಸಾರ್ವಜನಿಕವಾಗಿ ಗಮನ ಸೆಳೆಯುತ್ತಿದ್ದಾರೆ.

ಬಿಜೆಪಿ ತೊರೆದು ಕೈ ಹಿಡಿದಿರುವ ಮಾಲೀಕಯ್ಯಾ ಗುತ್ತೇದಾರ್‌ ಅವರೊಂದಿಗೆ ಒಗ್ಗಟ್ಟು ಪ್ರದರ್ಶನದ ಸ್ವರೂಪದಲ್ಲಿ ಹಾಲಿ ಅಫಜಲ್ಪುರ ಸಾಸಕರಾದ ಎಂವೈ ಪಾಟೀಲರು ಒಂದೇ ವೇದಿಕೆ ಹಂಚಿಕೊಂಡು ಪರಸ್ಪರ ಕೈ ಹಿಡಿದುಕೊಂಡು ತೋರುತ್ತಿರುವ ಒಗಟ್ಟು ಶತ್ರುವಿನ ಶತ್ರು ಮಿತ್ರ ರಾಜಕಾರಣಕ್ಕೆ ಭೀಮಾ ತೀರದಲ್ಲಿ ಮುನ್ನುಡಿ ಬರೆದಂತಾಗಿದೆ.

ರಾಧಾಕೃಷ್ಣ ಗೆದ್ರೆ ಕಲಬುರಗಿಗೆ ತ್ರಿಬಲ್‌ ಗ್ಯಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ

ಅಭಿವೃದ್ಧಿ ವಿಚಾರದಲ್ಲಿ ಅನೇಕ ಬಾರಿ ಪರಸ್ಪರ ತೀಕ್ಷ್ಣ ಟೀಕೆ ಮಾಡುತ್ತಿದ್ದ ಈ ನಾಯಕರು ಇವಾಗ ಪರಸ್ಪರ ಕೈ ಹಿಡಿದುಕೊಂಡು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಅದರಲ್ಲೂ ಓಬಿಸಿ ನಾಯಕ ಮಾಲೀಕಯ್ಯಾ ಗುತ್ತೇದಾರ್‌ ಕೈ ಹಿಡಿದಿದ್ದು, ಅವರೊಟ್ಟಿಗೆ ಎಂವೈ ಪಾಟೀಲರು ಕೈ ಜೋಡಿಸಿರೋದು ನೋಡಿದರೆ ಇದು ಯಾಕೋ ಕಲಬುರಗಿ ಜಿಲ್ಲೆಯಲ್ಲಿ, ಅಫಜಲ್ಪುರದ ಭೀಮಾ ತೀರದ ರಾಜಕಾರಣದಲ್ಲಿ ಹೊಸ ದಿಕ್ಕನ್ನು ತೋರಿಸಲಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.

ಕಣ್ಣ ಕಣ್ಣ ಬಿಡುತ್ತಿರುವ ಪಾಟೀಲ್‌, ಗುತ್ತೇದಾರ್‌ ಅಭಿಮಾನಿಗಳು:

ಅಫಜಲ್ಪುರ ರಾಜಕಾರಣದಲ್ಲಿ ಈಚೆಗಿನ ದಶಕಗಳಲ್ಲಿ ಎಂವೈ ಪಾಟೀಲರು, ಮಾಲೀಕಯ್ಯಾ ಗುತ್ತೇದಾರ್‌ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಉದಾಹರಣೆಗಳು ಅತಿ ವಿರಳ. ಅದರಲ್ಲೂ ಪರಸ್ಪರ ಹ್ವಾನದಲ್ಲೇ ಹೆಸರು ಗಮನಿಸಿ ಸಮಾರಂಭದಿಂದಲೇ ವಿಮಖರಾದ ಉದಾಹರಣೆಗಳಿದ್ದವು. ಆದರೀಗ ಲೋಕ ಸಮರದ ಹೊಸ್ತಿಲಲ್ಲಿ ಕೈ ಹಿಡಿದ ಮಾಲೀಕಯ್ಯಾ ಗುತ್ತೇದಾರರು, ಕಾಂಗ್ರೆಸ್ಸಲ್ಲೇ ಇದ್ದು ಶಾಸಕರಾಗಿರುವ ಎಂವೈ ಪಾಟೀಲರು ಇಬ್ಬರು ಒಗ್ಗಟ್ಟು ತೋರಿರೋದು ಭೀಮಾ ತೀರದ ಅಹಂದ ರಾಜಕೀಯದೊಂದಿಗೆ ಗುರುತಿಸಿಕೊಂಡವರು, ಮೇಲ್ವರ್ಗದ ಜೊತ ಇದ್ದು ರಾಜಕೀಯ ದಾಳ ಉರುಳಿಸುವವರಂತೂ ಕಣ್ ಕಣ್ ಬಿಡುವಂತೆ ಆಗಿದೆ.

ರಾಜಕೀಯ ವೈರಿಗಳು, ವೈಯಕ್ತಿಕವಾಗಿ ಯಾವ ದ್ವೇಷವೂ ಇಲ್ಲ:

ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರು ಬಯಸಿ ಬಿಜೆಪಿಗೆ ಹೋದವರಲ್ಲ, ಪಕ್ಷಾಂತರದ ಈ ವಿಚಾರದಲ್ಲಿ ನಾನು ಜಾರಿಕೊಂಡೆ ಮಾಲಿಕಯ್ಯ ಅವರು ಬಿಜೆಪಿ ಹೋಗಿ ಸಿಗಿಬಿದ್ದರು. ಅವರು ಮೂಲತಃ ಕಾಂಗ್ರೆಸ್ನವರು ಹೆಚ್ಚು ಬಾರಿ ಕಾಂಗ್ರೆಸ್ ನಿಂದ ಶಾಸಕರಾಗಿ ಮಂತ್ರಿಗಳಾಗಿದ್ದವರು. ಚುನಾವಣೆಯಲ್ಲಿ ಮಾತ್ರ ನಮಗೂ ಮಾಲಿಕಯ್ಯನವರಿಗೂ ಮತಗಳ ವ್ಯತ್ಯಾಸವಾಗಿದೆ ಹೊರತು ವೈಯಕ್ತಿಕವಾಗಿ ಮನಸ್ಸುಗಳಲ್ಲಿ ಯಾವುದೇ ಕಲ್ಮಶವಿಲ್ಲ, ನಾವಿಬ್ಬರು ಮೊದಲಿನಿಂದಲೂ ಒಳ್ಳೆಯ ಸ್ನೇಹಿತರು ಎಂದು ಶಾಸಕ ಎಂ.ವೈ.ಪಾಟೀಲ್ ನೀಡಿರುವ ಹೇಳಿಕೆಯಂತೂ ಶತ್ರುವಿನ ಶತ್ರು ಮಿತ್ರ ಪಾಲಿಟಿಕ್ಸ್‌ ಭೀಮಾ ತೀರದಲ್ಲಿ ಚೆನ್ನಾಗಿಯೇ ಓಡಿಸಬೇಕೆಂಬ ಇವರಿಬ್ಬರ ಹಿಡನ್‌ ಅಜೆಂಡಾವನ್ನು ಸ್ಪಷ್ಟಪಡಿಸಿದಂತಾಗಿದೆ.

ಮೊದಲ ಬಾರಿ ಶಾಸಕನಾಗಿದ್ದಾಗ ಎಂವೈಪಿ, ನಾನು ಇಬ್ರೂ ಕಾಂಗ್ರೆಸ್‌ನಲ್ಲಿದ್ವಿ:

ಇತ್ತ ಮಾಲೀಕಯ್ಯಾ ಗುತ್ತೇದಾರ್‌ ತಾವು ಮೊದಲ ಬಾರಿಗೆ ಶಾಸಕನಾದಾಗ ಎಂವೈ ಪಾಟೀಲರು ಮತ್ತು ತಾವು ಕಾಂಗ್ರೆಸ್‌ನಲ್ಲಿಯೇ ಇರೋದನ್ನ ಸ್ಮರಿಸುತ್ತ ರಾಜಕೀಯದಲ್ಲಿ ಕೆಲವು ಬೆಳವಣಿಗೆಗಳಾಗಿ ಇಬ್ಬರು ನೇರಾನೇರ ಸ್ಪರ್ಧೆಗೆ ಇಳಿದೇವು. 4 ಬಾರಿ ಕಾಂಗ್ರೆಸ್‌ 2 ಬಾರಿ ಪಕ್ಷೇತರನಾಗಿ ಸ್ಪರ್ಧಿಸಿ ಶಾಸಕನಾಗಿದ್ದೇನೆ. ಇದೀಗ ಮತ್ತೆ ಎಂವೈ ಪಾಟೀಲ್‌ ಮತ್ತು ನಾನು ಒಂದಾಗಿದ್ದೇವೆ. ಯಾವತ್ತು ನಮ್ಮಿಬ್ಬರಲ್ಲಿ ವೈಯಕ್ತಿಕ ದ್ವೇಷ ಇರಲೇ ಇಲ್ಲ ಎಂದು ಹೇಳುತ್ತ ಈ ಬಂಧ ಬಿಡಿಸಲಾಗದ ಅನುಬಂಧ, ತಾವಿಬ್ಬರೂ ಅಟೂಟ್‌ ಜೋಡಿ ಎಂದು ಹೇಳಿರೋದು ಕೇಳಿದವರು ಶತ್ರುವಿನ ಶತ್ರು ಮಿತ್ರ ರಾಜಕಾರಣದ ಹೊಸ ಅಲೆ ಅಫಝಲ್ಪುರದಲ್ಲಿ ಮುಂದಿನ ದಿನಗಳಲ್ಲಿ ಅದ್ಯಾವ ತಿರುವು ಪಡೆಯುವುದೋ ಎಂದು ಚರ್ಚೆಯಲ್ಲಿ ಮುಳುಗಿದ್ದಾರೆ.

ಸಿದ್ದರಾಮಯ್ಯ ಕೆಳಗಿಳಿಸಲು ಡಿ.ಕೆ.ಶಿವಕುಮಾರ್‌ ಸಂಚು: ಬಸನಗೌಡ ಯತ್ನಾಳ ಆರೋಪ

ಮಹತ್ವ ಪಡೆದ ಎಂವೈಪಿ ಮನೆಯ ಉಪಹಾರ ಕೂಟ:

ಮಾಲೀಕಯ್ಯಾ ಗುತ್ತೇದಾರ್‌ ಕಲಬುರಗಿಗೆ ಆಗಮಿಸುತ್ತಿದ್ದಂತೆಯೇ ಶಾಸಕ ಎವೈ ಪಾಟೀಲರು ತಮ್ಮ ಮನಯಲ್ಲೇ ಉಪಹಾರ ಕೂಟ ಸೋಮವಾರ ಆಯೋಜಿಸಿ ಮಾಲೀಕಯ್ಯಾ ಸೇರಿದಂತೆ ಲೋಕಸಬೆ ಕಾಂಗ್ರೆಸ್‌ ಹುರಿಯಾಳು ರಾಧಾಕೃಷ್ಣ ದೊಡ್ಮನಿ, ಶಾಸಕ ಅಲ್ಲಂಪ್ರಭು ಪಾಟೀಲ್‌, ಶರಣಪ್ಪ ಮಟ್ಟೂರ್‌ ಸೇರಿದಂತೆ ಹಲವು ಪ್ರಮುಖರನ್ನು ಆಹ್ವಾನಿಸಿ ಜೊತೆಗೇ ಕ್ಷೇತ್ರದ ಹೋಬಳಿ ಮಟ್ಟದ ಪ್ರಮುಖರಿಗೂ ಆಮಂತ್ರಿಸಿ ನಡೆಸಿರುವ ಉಪಹಾರ ಸಭೆ ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ಗುತ್ತೇದಾರ್‌ ಜೊತೆಗಿನ ತಮ್ಮ ಪ್ರಚಾರ ವೈಖರಿ, ಸಭೆಗಳ ಬಗ್ಗೆಯೂ ಎಂವೈ ಪಾಟೀಲರು ಬೆಳಕು ಚೆಲ್ಲಿದರೆಂದು ಗೊತತಾಗಿದೆ.

ನಿತೀನ್‌ ಗುತ್ತೇದಾರ್‌ ಇವರಿಬ್ಬರಿಗೂ ಕಾಮನ್‌ ವೈರಿ!

ಈಚೆಗಷ್ಟೇ ಬಿಜೆಪಿ ಸೇರಿರುವ ಅಫಜಲ್ಪುರ ಯುವ ಮುಖಂಡ ನಿತೀನ್‌ ಗುತ್ತೇದಾರ್‌ ಮಾಲೀಕಯ್ಯಾ ಹಾಗೂ ಎಂವೈ ಪಾಟೀಲರಿಗೆ ರಾಜಕೀಯವಾಗಿ ಕಾಮನ್‌ ವೈರಿಯಾಗಿದ್ದಾರೆ. 2023 ರ ಅಸೆಂಬ್ಲಿಯಲ್ಲಿ ಬಿಜೆಪಿ ಟಿಕೆಟ್‌ ದೊರಕದೆ ಪಕ್ಷೇತರರಾಗಿ ನಿಂತು 53 ಸಾವಿರಕ್ಕೂ ಹೆಚ್ಚು ಮತ ಪಡೆದು ಗಮನ ಸೆಳೆದಿದ್ದ ನಿತೀನ್‌ ಇದರಿಂದಾಗಿ ತಮ್ಮ ಹಿರಿಯ ಸಹೋದರ ಮಾಲೀಕಯ್ಯಾ ಅವರ ಕೆಂಗಣ್ಣಿಗೂ ಗುರಿಯಾಗಿದ್ದು ಗುಟ್ಟೇನಲ್ಲ. ನಿತೀನ್‌ ಬಿಜೆಪಿ ಸೇರೋದನ್ನ ಪಕ್ಷದ ಯಾರೊಬ್ಬರೂ ತಮ್ಮ ಗಮನಕ್ಕೆ ತಂದಿಲ್ಲವೆಂದು ಮುನಿಸಿಕೊಂಡೇ ಗುತ್ತೇದಾರ್‌ ಕೈ ಹಿಡಿದಿರೋದು. ಇದಲ್ಲದೆ ಕ್ಷೇತ್ರದಲ್ಲಿ ತಮ್ಮನಿಗೆ ಪಾಠ ಕಲಿಸುವ ಸಲುವಾಗಿ ರಾಜಕೀಯವಾಗಿ ದಶಕದ ಶತ್ರುವಾಗಿದ್ದ ಎಂವೈ ಪಾಟೀಲರ ಕೈ ಹಿಡಿದಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ತಕ್ಷಣಕ್ಕೆ ಲೋಕ ಸಮರದಲ್ಲಿ ಅಫಜಲ್ಪೂರ ಪ್ರದರ್ಶಿಸುವ ಮೂಡ್‌ ಮೇಲೆಯೇ ಶತ್ರು ಪಾಲೀಟಿಕ್ಸ್‌ನ ಗಟ್ಟಿತನ, ಜೊಳ್ಳುತನ, ಪ್ರಯೋಜನ ಎಲ್ಲವೂ ನಿರ್ಧಾರವಾಗಲಿದೆ. 2019 ರಲ್ಲಂತೂ ಭೀಮಾ ತೀರ ಕಮಲ ಮುಡಿದು ಅನೇಕರನ್ನ ದಿಗ್ಡೂಢರನ್ನಾಗಿಸಿತ್ತು. 2023 ರ ಲೋಕ ಸಮರದಲ್ಲಿ ಇಲ್ಲಿನ ಮತದಾರರ ಮೂಡ್‌ ಇನ್ನೂ ನಿಗೂಢ. ಶತ್ರುವಿನ ಶತ್ರು ಮಿತ್ರ ರಾಜಕೀಯಕ್ಕೆ ಮತದಾರ ಹೇಗೆ ಸ್ಪಂದಿಸುವನೋ ಎಬುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios