ಮೋದಿ ಮತ್ತೊಮ್ಮೆ ಪ್ರಧಾನಿಯಾಗೋದು ಖಚಿತ: ಎಸ್.ಎಲ್.ಭೈರಪ್ಪ ಭವಿಷ್ಯ
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗೋದು ಖಚಿತ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲೋದಿಲ್ಲ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಭವಿಷ್ಯ ನುಡಿದರು.
ಮೈಸೂರು (ಏ.01): ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗೋದು ಖಚಿತ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲೋದಿಲ್ಲ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಭವಿಷ್ಯ ನುಡಿದರು. ಮೈಸೂರಿನ ಕುವೆಂಪುನಗರಲ್ಲಿರುವ ತಮ್ಮ ನಿವಾಸದಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ. ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಆದರೆ, ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಗೆಲ್ಲೋದು ಅರ್ಧದಷ್ಟು ಮಾತ್ರ ಎಂದರು.
ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲೋದು ಕಷ್ಟ. ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಆಗಿದೆ. ಇಲ್ಲಿ ಬಿಜೆಪಿ ಬಹಳ ವೀಕ್ ಆಗಿದೆ. ಉತ್ತರಪ್ರದೇಶದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದಿದ್ದರೇ ಹೆಚ್ಚಿನ ಸೀಟು ಗೆಲ್ಲಬಹುದಿತ್ತು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತ ಇರಲಿಲ್ಲ. ಅದೇ ಕಾರಣದಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿತು. ಆದರೀಗ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಸಂಪೂರ್ಣ ಹಿಡಿತವಿದೆ. ಈ ಬಾರಿಯ ಚುನಾವಣೆಯಲ್ಲಿ ಮೋದಿ ಅಲೆ ಕಡಿಮೆ ಆಗಿದೆಯಾ ಎಂಬುದು ಗೊತ್ತಿಲ್ಲ ಎಂದು ಅವರು ತಿಳಿಸಿದರು.
ದುರಂಕಾರದ ಮಾತು ಬಿಟ್ಟು, ಕೊಡುಗೆ ನೀಡಿ: ಸಿಎಂ ಸಿದ್ದರಾಮಯ್ಯಗೆ ಎಚ್‌ಡಿಕೆ ಸಲಹೆ
ಮೋದಿ ವ್ಯಾಪಾರಿಯಾದರೂ ಪ್ರಾಮಾಣಿಕರು: ಗುಜರಾತಿನವರು ಆಕ್ಟೀವ್ ಹಾಗೂ ಹಾನೆಸ್ಟ್ ಆಗಿ ಕೆಲಸ ಮಾಡುತ್ತಾರೆ. ನಮ್ಮಲ್ಲಿ ಅಂಗಡಿ ವ್ಯಾಪಾರಿಗಳು ಅಂದರೆ ಪೂರ್ಣ ಪ್ರಾಮಾಣಿಕರು ಅಂತ ಹೇಳೋಕೆ ಆಗಲ್ಲ. ಆದರೆ, ಗುಜರಾತಿನಲ್ಲಿ 6 ವರ್ಷದ ಮಗು ಕೈಯಲ್ಲಿ ಹಣ ಕೊಟ್ಟು ಕಳುಹಿಸಿದ್ರೂ ವ್ಯಾಪಾರಸ್ಥರು ಪ್ರಾಮಾಣಿಕವಾಗಿ ಚಿಲ್ಲರೆ ಕೊಟ್ಟು ಕಳುಹಿಸುತ್ತಾರೆ. ಗುಜರಾತಿಗಳು ಸುಳ್ಳು ಹೇಳೋಕೆ ಹೋಗೋದಿಲ್ಲ. ಅದಿಲ್ಲ ಅಂದರೆ ಯಾವ ದೇಶ ಉದ್ದಾರ ಆಗೋಕೆ ಸಾಧ್ಯ ಹೇಳಿ? ಮೋದಿ ಅವರಿಗೂ ಅದೇ ಇದೆ. ಅವರು ವ್ಯಾಪಾರಿಯಾದರೂ ಪ್ರಾಮಾಣಿಕರಾಗಿದ್ದಾರೆ ಎಂದು ಅವರು ಹೇಳಿದರು.
ಮೋದಿ ಅವರು ವ್ಯಾಪಾರ ಕೇವಲ ಹಣಕ್ಕಾಗಿ ಅಲ್ಲ, ದೇಶಕ್ಕಾಗಿ ಮಾಡುತ್ತಾರೆ. ಅವರು ಮುಖ್ಯಮಂತ್ರಿ ಹುದ್ದೆ ಬಿಟ್ಟು ದೆಹಲಿಗೆ ಬರುವಾಗ ಅವರ ಖಾತೆಯಲ್ಲಿದ್ದ 23 ಲಕ್ಷ ಹಣವನ್ನು ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೊಟ್ಟು ಬಂದರು. ಅದೊಂದು ರೀತಿಯಲ್ಲಿ ಮಾದರಿ ಆಯ್ತು. ಕೇಂದ್ರ ಸರ್ಕಾರದಲ್ಲೂ ಮೋದಿ ಅದನ್ನು ಅಳವಡಿಸಿಕೊಂಡರು. ಇದನ್ನೆಲ್ಲ ಕ್ಯಾಪಿಟಲಿಸ್ಟ್ ಅನ್ನೋಕಾಗುತ್ತಾ? ಕಾರು, ವ್ಯಾಪಾರದಿಂದ ಹಣ ಬಂತು ಅಂದುಕೊಳ್ಳೋದು ಆರ್ಥಿಕತೆ ಅಲ್ಲ. ಅದರಿಂದ ಎಷ್ಟು ಕುಟುಂಬಕ್ಕೆ ನೆರವಾಯಿತು ಎನ್ನುವುದು ನಿಜವಾದ ಆರ್ಥಿಕತೆ. ಮತ್ತೊಮ್ಮೆ ಮೋದಿ ಪ್ರಧಾನಿ ಆಗುತ್ತಾರೆ ನೋಡಿ. ಅದರಲ್ಲಿ ಯಾವುದೇ ಅನುಮಾನ ಇಲ್ಲ ನೋಡಿ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೋಟಿ ಕೋಟಿ ಹಣ ಸಾಗಿಸಿದರೂ ಚುನಾವಣಾ ಆಯೋಗ ಏನು ಮಾಡುತ್ತಿದೆ: ಸಚಿವ ದಿನೇಶ್ ಗುಂಡೂರಾವ್
ಯದುವೀರ ಕೂಡ ಉತ್ತಮ: ಸಂಸದ ಪ್ರತಾಪ್ ಸಿಂಹ ಆಕ್ರಮಣಕಾರಿ ಸ್ವಭಾವದ ಲೀಡರ್. ಸಂಸದನಾಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಪ್ರತಾಪ್ ಸಿಂಹಗೆ ಮುಂದೆಯೂ ಸಾಕಷ್ಟು ಜವಾಬ್ದಾರಿಗಳು ಇವೆ. ಸಂಸದನಲ್ಲದಿದ್ದರೂ ಬೇರೆ ಕೆಲಸಗಳನ್ನು ಮಾಡಲು ಪ್ರತಾಪ್ ಸಿಂಹಗೆ ಅವಕಾಶಗಳಿವೆ. ಬಿಜೆಪಿ ಅಭ್ಯರ್ಥಿಯಾಗಿ ಯದುವೀರ ಅವರನ್ನು ಆಯ್ಕೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಯದುವೀರ ಕೂಡ ಉನ್ನತ ವಿದ್ಯಾಭ್ಯಾಸ ಮಾಡಿದ್ದಾರೆ. ಯದುವೀರ ಕೂಡ ಉತ್ತಮ ಆಯ್ಕೆಯಾಗಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ತಿಳಿಸಿದರು.