ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ಪಕ್ಷದ ಮುಖ್ಯ ಅಜೆಂಡಾ ಆಗಿದ್ದು, ಈ ನಿಟ್ಟಿನಲ್ಲಿ ಕಾರ್ಯಕರ್ತರ ಹಂತದಿಂದಲೇ ಪ್ರಚಾರ ಆರಂಭಿಸಲಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು. 

ಕೊಟ್ಟೂರು (ಫೆ.15): ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ಪಕ್ಷದ ಮುಖ್ಯ ಅಜೆಂಡಾ ಆಗಿದ್ದು, ಈ ನಿಟ್ಟಿನಲ್ಲಿ ಕಾರ್ಯಕರ್ತರ ಹಂತದಿಂದಲೇ ಪ್ರಚಾರ ಆರಂಭಿಸಲಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೇ ಪಕ್ಷದ ಎಲ್ಲ ಮುಖಂಡರ ಜತೆ ಚುನಾವಣೆ ಕುರಿತು ಚರ್ಚೆ ನಡೆಸಿದ್ದಾರೆ. 

ಜೆಡಿಎಸ್‌ನೊಂದಿಗೆ ಹೊಂದಾಣಿಕೆ ವಿರುದ್ಧವಾಗಲಿ ಅಥವಾ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತೆ ಯಾರೊಬ್ಬರೂ ಹೇಳಿಕೆ ನೀಡದಂತೆ ಸೂಚಿಸಿದ್ದಾರೆ ಎಂದರು. ಕೇಂದ್ರ ಸರ್ಕಾರ ಯೋಜನೆಗಳ ಕುರಿತಾಗಿ ಬೂತ್ ಮಟ್ಟದಲ್ಲಿ ನಮ್ಮ ಕಾರ್ಯಕರ್ತರು ಮಾಹಿತಿ ನೀಡಿ ಜಾಗೃತಿ ಮೂಡಿಸಲಿದ್ದಾರೆ. ದೇಶದಲ್ಲಿ ಬಿಜೆಪಿ ಪರ ಅಲೆ ಇದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವತ್ತ ಮುಂದಾಗಿದ್ದೇವೆ ಎಂದರು. ಬಿ.ವೈ. ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾದ ನಂತರ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತಂದಿದೆ. ಪಕ್ಷದ ಗೆಲುವಿಗಾಗಿ ಅವರು ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಎಂದರು.

ಅಭದ್ರತೆ ಕಾಡಿದಾಗಷ್ಟೇ ಬಿಜೆಪಿಗೆ ದೇಶಪ್ರೇಮ: ಆಯನೂರು ಮಂಜುನಾಥ್

ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಅವರು ಉತ್ತಮ ಕೆಲಸವನ್ನು ಮಾಡಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ನಾನೂ ಆಕಾಂಕ್ಷಿಯಾಗಿರುವುದು ನಿಜ. ಆದರೆ ಹೈಕಮಾಂಡ್ ನನಗೆ ಅಥವಾ ಇನ್ಯಾರಿಗೇ ಟಿಕೆಟ್ ನೀಡಿದರೂ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಪಕ್ಷದಲ್ಲಿ ಅಸಮಾಧಾನಿತರನ್ನು ಭೇಟಿಯಾಗಿ ಮನವೊಲಿಸುತ್ತಿದ್ದೇನೆ. ಎಲ್ಲರೂ ಒಗ್ಗಟ್ಟಾಗಿ ಲೋಕಸಭಾ ಚುನಾವಣೆ ಎದುರಿಸಲಿದ್ದೇವೆ ಎಂದರು.

ರಾಜ್ಯದಲ್ಲಿ ಮೋದಿ ಅಲೆ ವ್ಯಾಪಕ: ಪ್ರಧಾನಿ ನರೇಂದ್ರ ಮೋದಿಯವರ ಅಲೆ ರಾಜ್ಯದಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳತೊಡಗಿದೆ. ಅಲ್ಲದೇ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಂಪೂರ್ಣವಾಗಿ ವಿಫಲವಾಗಿದ್ದು, ಇದರ ಪರಿಣಾಮ ಮತದಾರರು ಬಿಜೆಪಿಯತ್ತ ವಾಲಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯಾಗಲು ಕ್ಷೇತ್ರಾದ್ಯಂತ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ತಮ್ಮ ಮೇಲೆ ಒತ್ತಡ ಹೇರುತ್ತಿದ್ದು, ಜನಬೆಂಬಲದ ಪರಿಣಾಮವಾಗಿ ಅಭ್ಯರ್ಥಿಯಾಗಲು ಇಚ್ಛಿಸಿರುವೆ. ಆದರೆ ಪಕ್ಷದ ವರಿಷ್ಠರು ಅಂತಿಮವಾಗಿ ಯಾರಿಗೆ ಟಿಕೆಟ್‌ ನೀಡುತ್ತಾರೋ ಅವರ ಪರ ಪ್ರಚಾರ ಕೈಗೊಳ್ಳುವೆ ಎಂದರು.

ರಾಮನ ಹೆಸರಿನಲ್ಲಿ ಬಿಜೆಪಿ ಮತಯಾಚನೆ, ನಾವು ಹಿಂದೂಗಳಲ್ಲವೇ?: ಡಿ.ಕೆ.ಶಿವಕುಮಾರ್

ನಾನು ಸ್ಪರ್ಧಾಕಾಂಕ್ಷಿಯಾಗಿದ್ದರೂ ಹಾಲಿ ಸಂಸದ ದೇವೇಂದ್ರಪ್ಪ ಅವರಿಗೆ ಪಕ್ಷ ಸ್ಪರ್ಧಿಸಲು ಅವಕಾಶ ನೀಡಿದರೆ ಅವರ ಪರವಾಗಿ ಪ್ರಚಾರ ಕೈಗೊಂಡು ಬಿಜೆಪಿ ಗೆಲುವಿಗೆ ಶ್ರಮಿಸುವೆ ಎಂದರು. ಲೋಕಸಭಾ ಚುನಾವಣೆಗೆ ಜೆಡಿಎಸ್‌ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆ ರಾಜ್ಯದ 28 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದೇವೆ ಎಂದರು. ಕೊಟ್ಟೂರು ಬಿಜೆಪಿ ಘಟಕಾಧ್ಯಕ್ಷ ಭರಮನಗೌಡ ಪಾಟೀಲ್‌, ಹರೀಶ್‌ಗೌಡ, ಪಪಂ ಸದಸ್ಯರಾದ ಮರಬದ ಕೊಟ್ರೇಶ್‌, ಸಿದ್ದಯ್ಯ, ಕೆಂಗರಾಜ್‌, ಚಂದ್ರು ಜಂಬೂರು, ಅಂಗಡಿ ಪಂಪಾಪತಿ, ಪ್ರಜ್ವಲ್‌, ಪ್ರಶಾಂತ, ಅಭಿಷೇಕ್‌ ಮತ್ತಿತರರು ಇದ್ದರು.