ಸೋತ ಬಳಿಕವೂ ದುಡ್ಡು ಮಾಡುವ ಕಲೆ ಯಾವಗಲ್ಲರಿಂದ ಕಲಿಯಬೇಕು: ಮಾಜಿ ಸಚಿವ ಸಿ.ಸಿ. ಪಾಟೀಲ
ಯಾವಗಲ್ಲ ದುಡ್ಡು ಮಾಡುವ ಕಲೆಯು ಹೇಗಿದೆ ಎಂಬುದನ್ನು ಬೆಳಗಾ ವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಮೊದಲು ಊರಿನ ದಾರಿಗಳಿಗೆ ಕರ ವಸೂಲಿಗಾಗಿ ನಾಕಾಬಂದಿ ಇದ್ದವು. ಅದೇ ರೀತಿ ಮಾಜಿ ಶಾಸಕ ಯಾವಗಲ್ಲ ಕ್ಷೇತ್ರದಲ್ಲಿ ಎಲ್ಲ ಕಡೆ ಹಣ ವಸೂಲಿಗೆ ಇಳಿದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಶಾಸಕ ಸಿ.ಸಿ. ಪಾಟೀಲ
ನರಗುಂದ(ಡಿ.06): ಚುನಾವಣೆಯಲ್ಲಿ ಸೋತ ರಾಜಕಾರಣಿಯೊಬ್ಬ ದುಡ್ಡು ಮಾಡೋದು ಹೇಗೆ ಎಂಬುದನ್ನು ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಅವರಿಂದ ಕಲಿಯಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವಗಲ್ಲ ದುಡ್ಡು ಮಾಡುವ ಕಲೆಯು ಹೇಗಿದೆ ಎಂಬುದನ್ನು ಬೆಳಗಾ ವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಮೊದಲು ಊರಿನ ದಾರಿಗಳಿಗೆ ಕರ ವಸೂಲಿಗಾಗಿ ನಾಕಾಬಂದಿ ಇದ್ದವು. ಅದೇ ರೀತಿ ಮಾಜಿ ಶಾಸಕ ಯಾವಗಲ್ಲ ಕ್ಷೇತ್ರದಲ್ಲಿ ಎಲ್ಲ ಕಡೆ ಹಣ ವಸೂಲಿಗೆ ಇಳಿದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ದುಡ್ಡು ಮಾಡುವುದಕ್ಕಾಗಿ, ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿ ಎಂದು ಹೇಳಿ ಗುತ್ತಿಗೆದಾರರ ಬಿಲ್ ತಡೆ ಹಿಡಿದು ಅವರ ಜತೆ ಸಭೆ ನಡೆಸಿ ಹೊಂದಾಣಿಕೆ ಮಾಡಿಕೊಂಡು ಐದಾರು ಕೋಟಿ ಹಣ ಪಡೆದಿರುವ ವಿಷಯ ಗುತ್ತಿಗೆದಾರರ ಬಾಯಿಯಿಂದಲೇ ಕೇಳಿದ್ದೇನೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ತಂದು ಜನತೆಗೆ ಪೇಚಾಡುವಂತಾಗಿದೆ: ಸಿ.ಸಿ. ಪಾಟೀಲ
ನಾಲ್ಕು ಬಾರಿ ಸೋಲಿಸಿರುವೆ:
ಬಿ.ಆರ್. ಯಾವಗಲ್ಲ ನನ್ನ ವಿರುದ್ಧ 6 ಬಾರಿ ಸ್ಪರ್ಧಿಸಿ ನಾಲ್ಕು ಬಾರಿ ಸೋತಿದ್ದಾರೆ. ಮೊದಲ ಬಾರಿ ನಾನು ಜೆಡಿಎಸ್ ಪಕ್ಷದಲ್ಲಿದ್ದಾಗ ಮತ್ತು 2013 ರಲ್ಲಿ ಗುಂಡೇಟು ಬಿದ್ದು ಆಸ್ಪತ್ರೆಯಲ್ಲಿದ್ದಾಗ ಸೋತಿದ್ದೇನೆ. ಅವರ ವಿರುದ್ಧ ಸದಾ ಗೆಲುವನ್ನೇ ಕಂಡಿದ್ದೇನೆ. ಹಿರಿಯರಾದ ಇವರಿಗೆ ಗೌರವ ಕೊಟ್ಟು ಯಾವುದೇ ಟೀಕೆ ಟಿಪ್ಪಣಿ ಮಾಡದೇ ನಿಷ್ಕ್ರಿಯ ರಾಜ್ಯ ಸರ್ಕಾರದಲ್ಲಿ ಜನರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
ನವಲಗುಂದ ತಾಲೂಕಿನ ಜಾವೂರಿನಿಂದ ನರಗುಂದ ಮತಕ್ಷೇತ್ರಕ್ಕೆ ಬಂದಾಗ ಹಿರಿಯರಾದ ಎಲ್.ಎಸ್.ಪಾಟೀಲ ನಿಮ್ಮನ್ನು ಕರೆದುಕೊಂಡು ನರಗುಂದ ಜನತೆಯ ಪರಿಚಯ ಮಾಡಿಸಿ ಕೊಟ್ಟು ಚುನಾವಣೆಯಲ್ಲಿ ಗೆಲ್ಲಿಸಿ 5 ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ಅವರ ಆಶೀರ್ವಾದ ಇಲ್ಲದಿದ್ದರೆ ತಾವು ಶಾಸಕರಾಗುತ್ತಿರಲಿಲ್ಲ. ನಿಮಗಾಗಿ ಹಗಲಿರಳು ಕೆಲಸ ಮಾಡಿದ ಕಾರ್ಯಕರ್ತರನ್ನು ಅಧ್ಯಕ್ಷ ಮಾಡುವ ಬದಲು ನಿಮ್ಮ ಮಕ್ಕಳನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದೀರಿ ಎಂದು ಹರಿಹಾಯ್ದರು.
ಕಳೆದ ಒಂದೂವರೆ ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿದ್ದೇನೆ ಎಂದು ಯಾವಗಲ್ಲ ಅವರು ನನ್ನನ್ನು ಕೇಳುವ ಬದಲು ರಾಜ್ಯ ಸರ್ಕಾರವನ್ನು ಕೇಳಿದ್ದರೆ ಸರಿಯಾದ ಉತ್ತರ ಸಿಗುತ್ತಿತ್ತು. ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ತಮ್ಮ ಅಭಿವೃದ್ಧಿ ಒಪ್ಪುತ್ತೇನೆ. ಆದರೆ, ಜಿಟಿಟಿಸಿ ಕಾಲೇಜು ಎಚ್.ಕೆ. ಪಾಟೀಲರಿಂದ ಗದಗ ನಗರಕ್ಕೆ ವರ್ಗಾವಣೆಗೊಂಡಿತ್ತು. ಅದನ್ನು ನಾನೇ ಮರಳಿ ನರಗುಂದಕ್ಕೆ ತಂದಿದ್ದೇನೆ. ಈ 1800 ಕೋಟಿ ಅನುದಾನ ತಂದು ಮತಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸ ಕಾರ್ಯ ಮಾಡಿಸಿದ್ದೇನೆ. ಪಟ್ಟಣದಲ್ಲಿನ ಮಿನಿ ವಿಧಾನಸೌಧ, 100 ಹಾಸಿಗೆಯ ತಾಲೂಕಾಸ್ಪತ್ರೆ, ಕೆಂಪಗಸಿ, ಮೊರಾರ್ಜಿ ಶಾಲೆ, ವಸತಿ ನಿಲಯ, ಕೆರೆಗಳ ಹೂಳೆತ್ತುವ ಕಾರ್ಯ, ಮಠಗಳ ಅಭಿವೃದ್ಧಿಗೆ ತಲಾ ಒಂದು ಕೋಟಿ ಅನುದಾನ, ಕ್ಷೇತ್ರದ ತುಂಬೆಲ್ಲ ಹೊಲಗಳಿಗೆ ಮತ್ತು ಗ್ರಾಮಗಳಿಗೆ ರಸ್ತೆ ನಿರ್ಮಾಣ ಹೀಗೆ ಹಲವಾರು ಅಭಿವೃದ್ಧಿ ಕೆಲಸ ಕಾರ್ಯ ಮಾಡಿದ ತೃಪ್ತಿ ನನಗೆ ಇದೆ ಎಂದರು.
₹200 ಕೋಟಿ ಬಿಡುಗಡೆ:
ನನ್ನನ್ನು ಆಯ್ಕೆ ಮಾಡಿದ ಜನತೆಯ ಋಣ ತೀರಿಸಲು ಎಚ್.ಕೆ. ಪಾಟೀಲ ಹಾಗೂ ಸಿಎಂ ಬಳಿ ಅನುದಾನಕ್ಕಾಗಿ ಅಲೆದಾಡಿದ ಮಾತ್ರಕ್ಕೆ ಇದು ಹೊಂದಾಣಿಕೆ ರಾಜಕಾರಣ ಹೇಗೆ ಆಗುತ್ತದೆ? ಕಾಂಗ್ರೆಸ್ ಶಾಸಕ ರಾಜು ಕಾಗೆ, ಗವಿಯಪ್ಪ ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಜಮೀರ ಅಹ್ಮದ್ ಅವರ ಬಳಿ, ನಮ್ಮ ಕ್ಷೇತ್ರಕ್ಕೆ ಒಂದಾದರೂ ಮನೆ ನೀಡುವಂತೆ ಕೇಳಿದರೆ 2025 ರ ನಂತರ ಕೇಳಿ ಅನ್ನುತ್ತಾರೆ. ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸ ಕಾರ್ಯ ಮಾಡದೇ ಸಂದಿಗ್ಧ ಸ್ಥಿತಿಯಲ್ಲಿದೆ ಎಂದು ಸಿ.ಸಿ.ಪಾಟೀಲ ಲೇವಡಿ ಮಾಡಿದರು. ಬೆಣ್ಣಿಹಳ್ಳದ ಅಗಲೀಕರಣ ಮತ್ತು ಹೂಳೆತ್ತುವ ಕಾಮಗಾರಿಗೆ ಶಿಗ್ಗಾಂವಿ ಸವಣೂರದಿಂದ ನರಗುಂದ ಮತಕ್ಷೇತ್ರದ ಮೆಣಸಗಿವರೆಗೆ ₹1681 ಕೋಟಿ ವೆಚ್ಚದ ಡಿಪಿಆರ್‌ಸಿದ್ದಗೊಂಡಿದೆ. ಅದರಲ್ಲಿ ₹200 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ವಿವರಿಸಿದರು.
ಬಿಜೆಪಿಯಲ್ಲಿ ಹರಿದಾಡ್ತಿದೆ 'ಅಸಮಾಧಾನ'ದ ಆಡಿಯೋ: ಮಾಜಿ ಸಚಿವರ ಪುತ್ರನ ವಿರುದ್ಧ 'ಧ್ವನಿ' ಬಾಂಬ್ ಸ್ಫೋಟ..!
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಯಲಿಗಾರ, ಅಜ್ಜಪ್ಪ ಹುಡೇದ, ಬಿ.ಬಿ. ಐನಾಪೂರ, ಸೋಮಾಪುರ, ಎಸ್. ಆರ್. ಪಾಟೀಲ, ಚಂದ್ರು ದಂಡಿನ, ಗುರಣ್ಣ ಆದೆಪ್ಪನವರ, ಸಂಗನಗೌಡ ಪಾಟೀಲ, ದೇವಣ್ಣ ಕಲಾಲ, ಬಸಪ್ಪ ಮಳಗಿ, ಕಿರಣ ಮುಧೋಳೆ, ನವೀನ ಪಾಟೀಲ, ರಾಚನಗೌಡ ಪಾಟೀಲ, ನಾಗನಗೌಡ ತಿಮ್ಮನಗೌಡ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ದುಡ್ಡು ಮಾಡುವುದಕ್ಕಾಗಿ, ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿ ಎಂದು ಹೇಳಿ ಗುತ್ತಿಗೆದಾರರ ಬಿಲ್ ತಡೆ ಹಿಡಿದು ಅವರ ಜತೆ ಸಭೆ ನಡೆಸಿ ಹೊಂದಾಣಿಕೆ ಮಾಡಿಕೊಂಡು ಐದಾರು ಕೋಟಿ ಹಣ ಪಡೆದಿರುವ ವಿಷಯ ಗುತ್ತಿಗೆದಾರರ ಬಾಯಿಯಿಂದಲೇ ಕೇಳಿದ್ದೇನೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದ್ದಾರೆ.