ಬಿಜೆಪಿ ಗೆಲುವಿನ ಅಶ್ವಮೇಧ ಕುದುರೆ ನಿಲ್ಲಿಸಿ ತೋರಿಸಲಿ: ಕಟೀಲ್ ಸವಾಲು
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ತಾಕತ್ತಿದ್ದರೆ ಬಿಜೆಪಿ ಗೆಲುವಿನ ಅಶ್ವಮೇಧ ಕುದುರೆಯನ್ನು ನಿಲ್ಲಿಸಿ ತೋರಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸವಾಲು ಹಾಕಿದರು.
ರಾಮನಗರ (ಮಾ.05): ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ತಾಕತ್ತಿದ್ದರೆ ಬಿಜೆಪಿ ಗೆಲುವಿನ ಅಶ್ವಮೇಧ ಕುದುರೆಯನ್ನು ನಿಲ್ಲಿಸಿ ತೋರಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸವಾಲು ಹಾಕಿದರು. ಬಿಡದಿಯ ತಿಮ್ಮಪ್ಪನ ಕೆರೆ ಮೈದಾನದಲ್ಲಿ ವಿಜಯ ಸಂಕಲ್ಪ ರಥಯಾತ್ರೆ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಮೂರು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಕರ್ನಾಟಕದಲ್ಲಿಯೂ ಗೆದ್ದು ಅಧಿಕಾರಕ್ಕೆ ಬರಲಿದೆ. ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರುದ್ಯೋಗಿಗಳಾಗಲಿದ್ದಾರೆ. ರಾಮನಗರ ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿಲ್ಲ. ಆ ಪಕ್ಷ ಚನ್ನಪಟ್ಟಣದಲ್ಲಿ ಧೂಳಿಪಟವಾದರೆ, ಮಾಗಡಿಯಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.
ಮೊದಲು ದಳಪತಿಗಳು ಮಾಗಡಿ ಮತ್ತು ಚನ್ನಪಟ್ಟಣ ನಿಮ್ಮದಲ್ಲ ಅನ್ನುತ್ತಿದ್ದರು. ಈಗ ನಾನು ಹೇಳುತ್ತಿದ್ದೇನೆ. ಈ ಮೂರು ಕ್ಷೇತ್ರಗಳು ನಿಮ್ಮದಲ್ಲ, ಇಲ್ಲೆಲ್ಲ ಬಿಜೆಪಿ ಧ್ವಜ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಂದಿರಾ ಗಾಂಧಿ ಕಾಲದಲ್ಲಿ ಒಂದು ಲೈಟ್ ಕಂಬ ನಿಲ್ಲಿಸಿದರು ಕಾಂಗ್ರೆಸ್ ಗೆಲ್ಲುತ್ತದೆ ಎನ್ನುತ್ತಿದ್ದರು. ಈಗ ಕಾಲಘಟ್ಟಬದಲಾಗಿದ್ದು, ಇಂದಿರಾ ಕಾಂಗ್ರೆಸ್ ಉಳಿದಿಲ್ಲ. ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ವೈನಾಡಿಗೆ ಪಲಾಯನ ಮಾಡಿದರೆ, ಅನೇಕ ನಾಯಕರು ಸೋಲು ಕಂಡಿದ್ದಾರೆ. ಈಗ ಪರಿವರ್ತನೆ ಮೂಲಕ ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಅವಧಿಯಲ್ಲಿ ಬಡವರಿಗೆ ಅನುಕೂಲವಾಗಿಲ್ಲ: ನಳಿನ್ ಕುಮಾರ್ ಕಟೀಲ್
ಜೋಡೆತ್ತಲ್ಲ ಕಳ್ಳ ಮಳ್ಳ: ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಜೋಡೆತ್ತಲ್ಲ ಕಳ್ಳ ಮಳ್ಳ. ಅವರ ಮೈತ್ರಿ ಸರ್ಕಾರ 10 ತಿಂಗಳಿಗೆ ನೆಗೆದು ಬಿತ್ತು. ಅವರಿಗೆ ಸರ್ಕಾರ ಮಾಡುವ ಯೋಗ್ಯತೆ ಇಲ್ಲ. ಜೆಡಿಎಸ್ 123 ಸ್ಥಾನ ಗೆಲ್ಲುವುದಾಗಿ ಹೇಳುತ್ತಿದ್ದಾರೆ. ಅಷ್ಟುಸ್ಥಾನಗಳನ್ನು ಜೆಡಿಎಸ್ ಗೆಲ್ಲುತ್ತದೆ ಎಂದು ಯಾರಾದರು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ. ಲಾಟರಿ ಸರ್ಕಾರದಲ್ಲಿ ಕುಮಾರಸ್ವಾಮಿ ಲಾಟರಿ ಸಿಎಂ ಆಗಿದ್ದವರು. ಅವರನ್ನು ಜನರು ಗಂಭೀರವಾಗಿ ತೆಗೆದುಕೊಳ್ಳಬಾರದು. ಮೈಸೂರು - ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಸಂಸದ ಪ್ರತಾಪ್‌ಸಿಂಹ ಶ್ರಮ ಬಹಳಷ್ಟಿದೆ. ಇಲ್ಲಿನ ಸಂಸದರು ಶಾಸಕರು ಜಗಳ ಮಾಡುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ಟೀಕಿಸಿದರು.
ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ: ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ನಾನು ರಾಮನಗರ ಜಿಲ್ಲೆಗೆ ಮಾಗಡಿ ತಾಲೂಕಿಗೆ ಸೇರಿದವನು. ಈ ಜಿಲ್ಲೆಯಲ್ಲಿ ನಮ್ಮ ಸರ್ಕಾರದ ಒಬ್ಬ ಪ್ರತಿನಿಧಿ ಇರಲಿಲ್ಲ. ಹೀಗಾಗಿ ನನಗೆ ಜಿಲ್ಲೆಯ ಉಸ್ತುವಾರಿ ನೀಡಿದರು. ಜಿಲ್ಲೆಯ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಜಿಲ್ಲೆಯ ಪ್ರತಿ ಮನೆಗೆ ಕುಡಿಯುವ ನೀರು, ರಸ್ತೆಗಳ ಸಮಗ್ರ ಅಭಿವೃದ್ಧಿ, ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದೇವೆ. ಬಿಡದಿ ಅಭಿವೃದ್ಧಿಗಾಗಿಯೇ 100 ಕೋಟಿ ನೀಡಲಾಗಿದೆ. ನಮ್ಮ ರಾಮನಗರ ಮತ್ತಷ್ಟುಅಭಿವೃದ್ಧಿ ಆಗಬೇಕಿದೆ. ಇದಕ್ಕೆ ನೀವೆಲ್ಲ ಶಕ್ತಿ ತುಂಬಬೇಕು. ನಮಗೆ ಬಿಜೆಪಿ ಅಭ್ಯರ್ಥಿಗಳನ್ನು ಶಾಸಕರನ್ನಾಗಿ ಮಾಡಿಕೊಡಿ ಎಂದರು. ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ, ಮಾಗಡಿ ಕ್ಷೇತ್ರ ಸಂಭಾವ್ಯ ಅಭ್ಯರ್ಥಿ ಪ್ರಸಾದ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಮಕ್ಕಳಾಗಲ್ಲವೆಂದು ರಾಹುಲ್ ಗಾಂಧಿ ಇನ್ನೂ ಮದುವೆ ಆಗಿಲ್ಲ: ಕೊರೋನಾ ವೇಳೆ ಕೋವಿಡ್ ಲಸಿಕೆ ತೆಗೆದುಕೊಳ್ಳಬೇಡಿ ಮಕ್ಕಳಾಗಲ್ಲ ಎಂದು ಕಾಂಗ್ರೆಸ್ ನವರು ಹೇಳಿಕೊಂಡು ತಿರುಗಾಡಿದರು. ಬಹುಶಃ ಮಕ್ಕಳಾಗಲ್ಲ ಎಂಬ ಕಾರಣಕ್ಕಾಗಿ ಏನೊ ರಾಹುಲ್ ಗಾಂಧಿ ಇನ್ನೂ ಮದುವೆ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಲೇವಡಿ ಮಾಡಿದರು. ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕೋವಿಡ್ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರುಗಳೇ ರಾತ್ರಿ ಹೋಗಿ ಲಸಿಕೆ ಹಾಕಿಸಿಕೊಂಡರು.
ಕೋವಿಡ್ ಲಸಿಕೆ ಕಂಡು ಹಿಡಿಯಲು ಜಗತ್ತಿನ ಯಾವ ದೇಶಗಳ ವಿಜ್ಞಾನಿಗಳಿಗೂ ಸಾಧ್ಯವಾಗಲಿಲ್ಲ. ಆದರೆ, ಭಾರತದ ವಿಜ್ಞಾನಿಗಳು ಲಸಿಕೆ ಕಂಡು ಹಿಡಿದು ಸಾಧಿಸಿ ತೋರಿಸಿದರು. ಪ್ರಧಾನಿ ಮೋದಿರವರು ಮೊದಲು ತಾವು ಲಸಿಕೆ ಪಡೆಯದೆ ಜನರಿಗೆ ಹಂತ ಹಂತವಾಗಿ ಕೊಡಿಸಿದರು. ಬೇರೆ ದೇಶಗಳಿಗೂ ಲಸಿಕೆ ಕಳುಹಿಸಿಕೊಟ್ಟರು. ಒಂದು ವೇಳೆ ಮೋದಿ ಜಾಗದಲ್ಲಿ ಮನಮೋಹನ್ಸಿಂಗ್ ಇದ್ದಿದ್ದರೆ ಮೊದಲ ಲಸಿಕೆಯನ್ನು ಸೋನಿಯಾ ಗಾಂಧಿ, ಎರಡನೇ ಲಸಿಕೆ ಪ್ರಿಯಾಂಕ ಗಾಂಧಿ, ನಂತರ ರಾಹುಲ್ ಗಾಂಧಿ, ಆನಂತರ ವಾದ್ರಾ ಅವರಿಗೆ ನೀಡಿ ಉಳಿದರೆ ಮನಮೋಹನ್ ಸಿಂಗ್, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರಿಗೆ ಕೊಡುತ್ತಿದ್ದರು. ಆದರೆ, ಪ್ರಧಾನಿ ಮೋದಿರವರು ಜನರಿಗೆ ಉಚಿತವಾಗಿ ಲಸಿಕೆ ನೀಡಿದರು ಎಂದು ಕಟೀಲ್ ಹೇಳಿದರು.
ಅಭಿವೃದ್ಧಿ ವಿರೋಧಿ ಸಿದ್ದರಾಮಯ್ಯ: ಸಂಸದ ಪ್ರತಾಪ್ ಸಿಂಹ ಕಿಡಿ
ನಾನು ಕುಟುಂಬ ರಾಜಕಾರಣ ಮಾಡಲು ಬಂದಿಲ್ಲ. ನಮಗೆ ಒಂದು ವರ್ಷ ಸಮಯ ಕೊಟ್ಟು ನೋಡಿ ರಾಮನಗರವನ್ನು ಸ್ಮಾರ್ಚ್ ಸಿಟಿ ಮಾಡಿ ತೋರಿಸುತ್ತೇವೆ. ಬೇರೆಯವರು 10 ವರ್ಷ ಇದ್ದರು ಏನೂ ಪ್ರಯೋಜನ ಆಗಿಲ್ಲ. ಅಂದು ಕೆಂಪೇಗೌಡರು ದೇಶಕ್ಕೆ ಬೆಂಗಳೂರನ್ನು ಕೊಟ್ಟರು. ಅದೇ ರೀತಿ ರಾಜ್ಯಕ್ಕೆ ರಾಮನಗರವನ್ನು ಅಭಿವೃದ್ಧಿ ಮಾಡಿ ಕೊಡುತ್ತೇವೆ.
-ಅಶ್ವತ್ಥ ನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವರು, ರಾಮನಗರ