ನೂತನ ಸಚಿವರ ಹೆಸರು ಪ್ರಕಟವಾದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ...!
ನೂತನ ಸಚಿವರ ಹೆಸರು ಪ್ರಕಟವಾದ ಬೆನ್ನಲ್ಲೇ ಇದೀಗ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಇದರಿಂದ ಬಿಎಸ್‌ವೈಗೆ ಸಂಕಷ್ಟ ತಂದಿಟ್ಟಿದೆ.
ಬೆಂಗಳೂರು, (ಜ.13): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಅನೇಕ ಲೆಕ್ಕಾಚಾರಗಳ ನಂತರ ಕೊನೆಗೂ ಸಂಪುಟಕ್ಕೆ ಸೇರ್ಪಡೆಯಾಗಲಿರುವ ನೂತನ ಸಚಿವರ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿದ್ದಾರೆ.
ಇಂದು (ಗುರುವಾರ) ಸಂಜೆ 7 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಎಸ್ ವೈ ಸಂಪುಟಕ್ಕೆ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಸಿ.ಪಿ. ಯೋಗೇಶ್ವರ್, ಎಂ.ಟಿ.ಬಿ ನಾಗರಾಜ್, ಆರ್ ಶಂಕರ್, ಎಸ್. ಅಂಗಾರ, ಅರವಿಂದ ಲಿಂಬಾವಳಿ ಸಂಪುಟ ಸೇರಲಿದ್ದಾರೆ.
'ರೀ ಯಡಿಯೂರಪ್ಪನವರೇ...' ಸಂಪುಟ ಸರ್ಕಸ್ ಬೆನ್ನಲ್ಲೇ ಸಿಎಂ ವಿರುದ್ಧ ಗುಡುಗಿದ ಶಾಸಕ!
ಇತ್ತ ಸಿಎಂ ನೂತನ ಸಚಿವರ ಹೆಸರನ್ನು ಅಂತಿಮಗೊಳಿಸುತ್ತಿದ್ದಂತೆ ಮತ್ತೊಂದೆಡೆ ಅಸಮಾಧಾನ ಸ್ಪೋಟವಾಗಿದೆ. ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದ ಕೆಲವು ಶಾಸಕರು ಬಹಿರಂಗವಾಗಿಯೇ ತಮ್ಮ ಬೇಸರ ತೋಡಿಕೊಂಡಿದ್ದಾರೆ.
ರಾಮದಾಸ್ ಬೇಸರ
ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಶಾಸಕ ಎಸ್ ಎ ರಾಮದಾಸ್ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಶಾಸಕ ಎಸ್.ಎ ರಾಮದಾಸ್, ನಾನೊಬ್ಬ ನಿಜವಾದ ಸ್ವಯಂ ಸೇವಕ ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮಸಾಕ್ಷಿಗೆ ವಿರುದ್ದವಾದದ್ದು. ಇದು ಹಳೆಯ ಮೈಸೂರು ಪ್ರಾಂತ್ಯಕ್ಕೆ ಆದ ಅನ್ಯಾಯ. ಜಿಲ್ಲೆಯ ಬೇರೆ ಯಾರಾನ್ನಾದರೂ ಮಂತ್ರಿ ಮಾಡಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು 28 ವರ್ಷದಿಂದ ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ. ನಮ್ಮ ವಿಭಾಗದಲ್ಲಿ ಗೆದ್ದ 11 ಜನ ಬಿಜೆಪಿ ಶಾಸಕರಲ್ಲಿ 10 ಜನ ಪಕ್ಷ ಬಿಟ್ಟು ಅನ್ಯ ಪಕ್ಷಕ್ಕೆ ತೆರಳಿದ್ದರು. ಪಕ್ಷ ನನ್ನ ತಾಯಿ ಅದರ ಘನತೆ ನನ್ನ ಕರ್ತವ್ಯ ಎಂದು ನಾನು ತಿಳಿದಿದ್ದೇನೆ ಎಂದು ಟ್ವೀಟ್ ಮೂಲಕ ರಾಮದಾಸ್ ನೋವು ಹೊರಹಾಕಿದ್ದಾರೆ.