'ರೀ ಯಡಿಯೂರಪ್ಪನವರೇ...' ಸಂಪುಟ ಸರ್ಕಸ್ ಬೆನ್ನಲ್ಲೇ ಸಿಎಂ ವಿರುದ್ಧ ಗುಡುಗಿದ ಶಾಸಕ!
ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗಧಿ| ಏಳು ಮಂದಿ ಹೆಸರು ಬಹಿರಂಗ| ಹೆಸರು ಬಹಿರಂಗವಾಗುತ್ತಿದ್ದಂತೆಯೇ ಭುಗಿಲೆದ್ದ ಅಸಮಾಧಾನ
ಬೆಂಗಳೂರು(ಜ.13): ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗಧಿಯಾಗಿದೆ. ಇದಕ್ಕೂ ಮೊದಲೇ ಸಿಎಂ ಯಡಿಯೂರಪ್ಪ ಇಂದು ಪ್ರಮಾಣವಚನ ಸ್ವೀಕರಿಸಲಿರುವ ಏಳು ಮಂದಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ಈ ಪಟ್ಟಿಯನ್ನು ರಾಜ್ಯಭವನಕ್ಕೂ ಕಳುಹಿಸಿದ್ದಾರೆ. ಸಚಿವ ಸ್ಥಾನ ಗಳಿಸಲು ಲಾಭಿ ನಡೆಸುತ್ತಿದ್ದ ಕೆಲವರಿಗೆ ನಿರಾಸೆಯಾಗಿದೆ. ಹೀಗಿರುವಾಗ ಸಚಿವರಾಗುವ ಕನಸು ಕಂಡಿದ್ದ ಅನೇಕರು ಸಿಎಂ ವಿರುದ್ಧ ಕಿಡಿ ಕಾರಿದ್ದಾರೆ.
ಹೌದು ಸಚಿವರಾಗುವವರ ಹೆಸರು ಬಹಿರಂಗವಾಗುತ್ತಿದ್ದಂತೆಯೇ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಬಹಿರಂಗವಾಗೇ ಸಿಎಂ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ ಶಾಸಕ ಸತೀಶ್ ರೆಡ್ಡಿ 'ರೀ ಯಡಿಯೂರಪ್ಪನವರೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ನಿಮಗೆ, ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳಿಗೆ ನಿಷ್ಟಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ಲವೆ? ನಮ್ಮ ಕಷ್ಟ ನಷ್ಟಗಳನ್ನು ಆಲಿಸುತ್ತಿದ್ದ ಶ್ರೀ ಅನಂತಕುಮಾರ್ ಜಿ ರವರ ಇಲ್ಲದಿರುವಿಕೆ ಎದ್ದು ಕಾಣುತ್ತಿದೆ' ಎಂದಿದ್ದಾರೆ.
ಅತ್ತ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೂಡಾ ಸಚಿವರಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೂ ಸ್ಥಾನ ಕೈತಪ್ಪಿದೆ. ಸಚಿವರಾಗುವವರ ಹೆಸರು ಬಹಿರಂಗಗೊಳ್ಳುತ್ತಿದ್ದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿದ್ದ ರೆಣುಕಾಚಾರ್ಯ ಅಲ್ಲೇ ಕಣ್ಣೀರು ಹಾಕಿದ್ದಾರೆ.
ಸಾಲದೆಂಬಂತೆ ಎಂಎಲ್‌ಸಿ ಆಗಿರುವ ಹಳ್ಳಿ ಹಕ್ಕಿ ವಿಶ್ವನಾಥ್ ಕೂಡಾ ಸಿಎಂ ವಿರುದ್ಧ ಗುಡುಗಿದ್ದು, 'ಯಡಿಯೂರು ಸಿದ್ಧಲಿಂಗೇಶ್ವರ ನಿಮಗೆ ಒಳ್ಳೆದು ಮಾಡಲ್ಲ. ಕೊಟ್ಟ ಮಾತು ಉಳಿಸಿಕೊಳ್ಳದ ನಿಮ್ಮನ್ನು ಸಿದ್ಧಲಿಂಗೇಶ್ವರನು ಕ್ಷಮಿಸಲ್ಲ. ಎಂಥ ಸರ್ಕಾರ ಮಾಡಿದ್ದೀರಿ ಯಡಿಯೂರಪ್ಪನವರೇ? 33 ಸಚಿವರಲ್ಲಿ 13 ವೀರಶೈವ- ಲಿಂಗಾಯತ, 11 ಒಕ್ಕಲಿಗ, 4 ಮಂದಿ ಕುರುಬರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದೀರಿ' ಎಂದಿದ್ದಾರೆ.