ಕೆಲ ಬಿಜೆಪಿ ರಾಷ್ಟ್ರೀಯ ನಾಯಕರಿಂದ ನನ್ನ ಟಾರ್ಗೆಟ್: ಶಾಸಕ ಎಸ್.ಟಿ.ಸೋಮಶೇಖರ್
ಬಿಜೆಪಿಯ ಕೆಲ ರಾಷ್ಟ್ರೀಯ ನಾಯಕರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ ಬಿಡಿ ಎಂದು ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಇದರಿಂದಾಗಿ ನಾನು ಅಸಮಾಧಾನ ಸ್ಫೋಟಿಸುವುದು ಅನಿವಾರ್ಯವಾಯಿತು. ಆ ರಾಷ್ಟ್ರೀಯ ನಾಯಕರು ಯಾರೆಂಬುದನ್ನು ಮುಂದೆ ಹೇಳುತ್ತೇನೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಬೆಂಗಳೂರು (ನ.17): ಬಿಜೆಪಿಯ ಕೆಲ ರಾಷ್ಟ್ರೀಯ ನಾಯಕರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ ಬಿಡಿ ಎಂದು ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಇದರಿಂದಾಗಿ ನಾನು ಅಸಮಾಧಾನ ಸ್ಫೋಟಿಸುವುದು ಅನಿವಾರ್ಯವಾಯಿತು. ಆ ರಾಷ್ಟ್ರೀಯ ನಾಯಕರು ಯಾರೆಂಬುದನ್ನು ಮುಂದೆ ಹೇಳುತ್ತೇನೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡಿ, ನಾನು ಏಕವಚನದಲ್ಲಿ ಮಾತನಾಡಿಸಿಕೊಳ್ಳುವ ರೀತಿಯಲ್ಲಿ ಬೆಳೆದಿಲ್ಲ. ಕ್ಷೇತ್ರದಲ್ಲಿ ಆರು ಬಾರಿ ಸ್ಪರ್ಧೆ ಮಾಡಿದ್ದೇನೆ. ನಾಲ್ಕು ಬಾರಿ ಜನ ಗೆಲ್ಲಿಸಿದರೆ, 2 ಬಾರಿ ಸೋಲಿಸಿದ್ದಾರೆ.
ಯಾರೋ ಲೀಡರ್ ಬಂದು ಏಕವಚನದಲ್ಲಿ ಹೋಗಿ ಅಂದ್ರೆ ಆಗಲ್ಲ. ಅವರಪ್ಪನ ರೀತಿ ಮಾತನಾಡುವ ಶಕ್ತಿಯನ್ನು ದೇವರು ನನಗೂ ಕೊಟ್ಟಿದ್ದಾನೆ ಎಂದು ವಾಗ್ದಾಳಿ ನಡೆಸಿದರು. ನಾನು ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದು ವಿಧಾನಸಭಾ ಚುನಾವಣೆ ಪೂರ್ವದಿಂದಲೂ ಹೇಳುತ್ತಿದ್ದಾರೆ. ಈಗಲೂ ಅದೇ ರಾಗ ಹಾಡುತ್ತಿದ್ದಾರೆ. ನಾನು ಕಾಂಗ್ರೆಸ್‌ಗೆ ಹೋಗುವುದರಿಂದ ಅವರಿಗೆ ಏನು ಲಾಭ ಇದೆ ಎಂಬುದು ನನಗೆ ಗೊತ್ತಿಲ್ಲ. ಆಗಲೂ, ಈಗಲೂ ನಾನು ಬಿಜೆಪಿಯಲ್ಲೇ ಇದ್ದೇನೆ ಎಂದು ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಗೆಲ್ಲುವ ಅಪೇಕ್ಷೆ: ಶಾಸಕ ಲಕ್ಷ್ಮಣ ಸವದಿ
ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳಲು ಕಾಂಗ್ರೆಸ್ ಸಚಿವರನ್ನು ಭೇಟಿ ಆಗುತ್ತೇನೆ. ಇದಕ್ಕೆ ಯಾವ ಅರ್ಥವನ್ನೂ ಕಲ್ಪಿಸಬೇಕಿಲ್ಲ. ನಾನು ಯಶವಂತಪುರ ಕ್ಷೇತ್ರಕ್ಕೆ ಸೀಮಿತನಾಗಿದ್ದೇನೆ. ನನ್ನ ಕ್ಷೇತ್ರದಲ್ಲಿ ಚುನಾವಣೆ ಮುಗಿದ ಬಳಿಕ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತ ಎಂಬ ಭೇದವಿಲ್ಲ. ಚುನಾವಣೆ ವೇಳೆ ಮಾತ್ರ ಅವರ ಪಕ್ಷ ಅವರಿಗೆ, ನನ್ನ ಪಕ್ಷ ನನಗೆ. ಚುನಾವಣೆ ಬಳಿಕ ಎಲ್ಲರನ್ನೂ ಅಭಿವೃದ್ಧಿ ವಿಚಾರವಾಗಿ ಜೊತೆಯಲ್ಲೇ ಕರೆದೊಯ್ಯುತ್ತಿದ್ದೇನೆ. ಬಿಜೆಪಿ ಬಿಡುವ ಕುರಿತು ನನ್ನ ಕ್ಷೇತ್ರದ ಕಾರ್ಯಕರ್ತ, ಮುಖಂಡರು ನಿರ್ಧರಿಸುತ್ತಾರೆ. ಆದರೆ ಈವರೆಗೂ ಯಾವ ಕಾರ್ಯಕರ್ತನೂ ನನ್ನನ್ನು ಬಿಜೆಪಿ ಬಿಟ್ಟು ಹೋಗಿ ಎಂದು ಹೇಳಿಲ್ಲ. ಹೇಳಲು ಸಾಧ್ಯವೂ ಇಲ್ಲ ಎಂದು ತಿಳಿಸಿದರು.
ಬಿಜೆಪಿಗೆ ಬಂದವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಬಹುತೇಕರನ್ನು ಸಚಿವ ಸ್ಥಾನದಿಂದ ತೆಗೆದರು. ಇದರ ಬಗ್ಗೆ ನಾನು ಪಕ್ಷಕ್ಕೆ ಬರುವವರೆಗೆ ಜಾಮೂನು ನೀಡುತ್ತಾರೆ. ಬಳಿಕ ವಿಷ ನೀಡುತ್ತಾರೆ ಎಂದಿದ್ದೇನೆ. ವಲಸೆ ಬಂದ 17 ಮಂದಿಗೆ ಆದ ಅನ್ಯಾಯದ ಬಗ್ಗೆ ಮಾತನಾಡಿದ್ದೇನೆ. ನನ್ನ ಬಗ್ಗೆ ಎಂದೂ ಎಲ್ಲೂ ಹೇಳಿಲ್ಲ. ಎಲ್ಲರ ಪರವಾಗಿ ಮಾತನಾಡಿದ್ದೇನೆ. ರಮೇಶ್ ಜಾರಕಿಹೊಳಿ ಬಿಟ್ಟು ನನ್ನೊಂದಿಗೆ ಬಿಜೆಪಿ ಸೇರಿದ್ದ ಅನೇಕರಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂದು ಸೋಮಶೇಖರ್ ಬೇಸರ ಹೊರಹಾಕಿದರು.
ವಿಜಯೇಂದ್ರ ಕಾರ್ಯಕ್ರಮಕ್ಕೆ ಗೈರು: ಕುಂಬಳಗೋಡು ಪೊಲೀಸ್ ಠಾಣೆ ಉದ್ಘಾಟನೆ ಈ ಹಿಂದೆಯೇ ನಿಗದಿ ಆಗಿತ್ತು. ಹಾಗಾಗಿ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗಿದ್ದೇನೆ. ಈ ಬಗ್ಗೆ ಅವರಿಗೆ ಮೊದಲೇ ಮಾಹಿತಿ ನೀಡಿದ್ದೇನೆ. ಅವರೊಂದಿಗೆ ನನಗೆ ಯಾವುದೇ ದ್ವೇಷ ಇಲ್ಲ. ನನಗೆ ಹಲವು ವಿಷಯದಲ್ಲಿ ಅವರು ಬೆಂಬಲ ನೀಡಿದ್ದಾರೆ ಎಂದು ಸೋಮಶೇಖರ್ ಹೇಳಿದರು. ವಿಜಯೇಂದ್ರ ಅವರಿಗೆ ಪಟ್ಟ ಕಟ್ಟಿರುವುದು ಕುಟುಂಬ ರಾಜಕೀಯ ಅಲ್ಲ. ಯಡಿಯೂರಪ್ಪ ಅವರು ಚುನಾವಣೆಗೆ ನಿಲ್ಲುವುದಿಲ್ಲ ಎಂದ ಮೇಲೆ ಅವರ ಮಗನಿಗೆ ಪಕ್ಷದ ಜವಾಬ್ದಾರಿ ನೀಡಿದ್ದಾರೆ. ಅವರಿಗೆ ಅನುಭವ ಇದ್ದು, ಎಲ್ಲ ನಾಯಕರ ಪರಿಚಯವೂ ಇದೆ. ಹೀಗಾಗಿ ಮುಂಬರುವ ಚುನಾವಣೆಗೆ ಬಿಜೆಪಿಗೆ ಒಳ್ಳೆಯ ಬೆಳವಣಿಗೆ ಎಂದರು.
Ayodhya ರಾಮಮಂದಿರದಲ್ಲಿ ಸಾಮಾಜಿಕ ಸೇವೆಯೇ ಹರಕೆ: ಪೇಜಾವರ ಶ್ರೀ
ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ ಬಿಡಿ ಎಂದು ಏಕವಚನದಲ್ಲಿ ಕೆಲ ರಾಷ್ಟ್ರೀಯ ನಾಯಕರು ಹೇಳುತ್ತಾರೆ. ಹೀಗಾಗಿ ನಾನು ಅಸಮಾಧಾನ ಸ್ಫೋಟಿಸುವುದು ಅನಿವಾರ್ಯವಾಯಿತು. ಯಾರೋ ಲೀಡರ್ ಬಂದು ಏಕವಚನದಲ್ಲಿ ಹೋಗಿ ಎಂದು ಹೇಳಿದರೆ ಆಗಲ್ಲ. ಅವರಪ್ಪನ ರೀತಿ ಮಾತನಾಡುವ ಶಕ್ತಿಯನ್ನು ದೇವರು ನನಗೂ ಕೊಟ್ಟಿದ್ದಾನೆ.
- ಎಸ್.ಟಿ. ಸೋಮಶೇಖರ್