ಮುಸ್ಲಿಮರೇ ಕನಸಲ್ಲೂ ಬಿಜೆಪಿಗೆ ಮತ ಹಾಕಬೇಡಿ: ಸಿದ್ದರಾಮಯ್ಯ
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಮೋದಿ ಹೇಳುತ್ತಾರೆ. ಹಾಗಿದ್ದ ಮೇಲೆ ಮುಸ್ಲಿಮರಿಗೆ ಟಿಕೆಟ್ ಯಾಕೆ ನೀಡಿಲ್ಲ? ನೀವು ಕನಸು, ಮನಸಿನಲ್ಲೂ ಬಿಜೆಪಿಗೆ ಮತ ಹಾಕುವ ಯೋಚನೆಯನ್ನೂ ಮಾಡಬಾರದು ಎಂದು ಕರೆಕೊಟ್ಟ ಸಿದ್ದರಾಮಯ್ಯ
ಬಾಗಲಕೋಟೆ(ಮೇ.03): ಮೀಸಲಾತಿ ವಿಚಾರದಲ್ಲಿ ದ್ರೋಹ ಬಗೆಯುವುದರ ಜತೆಗೆ ಟಿಕೆಟ್ ಕೂಡ ನೀಡದ ಬಿಜೆಪಿಗೆ ಮುಸ್ಲಿಮರು ಕನಸಿನಲ್ಲೂ ಮತ ನೀಡಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಗರದ ರೋಟರಿ ಸರ್ಕಲ್‌ನಲ್ಲಿ ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಎಚ್.ವೈ.ಮೇಟಿ ಹಾಗೂ ಬೀಳಗಿ ಕ್ಷೇತ್ರದ ಅಭ್ಯರ್ಥಿ, ಮಾಜಿ ಶಾಸಕ ಜೆ.ಟಿ.ಪಾಟೀಲ ಅವರ ಪರ ಮತಯಾಚಿಸಲು ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಮೋದಿ ಹೇಳುತ್ತಾರೆ. ಹಾಗಿದ್ದ ಮೇಲೆ ಮುಸ್ಲಿಮರಿಗೆ ಟಿಕೆಟ್ ಯಾಕೆ ನೀಡಿಲ್ಲ? ನೀವು ಕನಸು, ಮನಸಿನಲ್ಲೂ ಬಿಜೆಪಿಗೆ ಮತ ಹಾಕುವ ಯೋಚನೆಯನ್ನೂ ಮಾಡಬಾರದು ಎಂದು ಕರೆಕೊಟ್ಟರು. ಮುಸ್ಲಿಮರಿಗಿದ್ದ ಶೇ.4 ಮೀಸಲಾತಿಯನ್ನು ಸರ್ಕಾರ ಕಿತ್ತುಕೊಂಡಿದೆ. ನಾವು ಅಧಿಕಾರಕ್ಕೆ ಬಂದರೆ ಶೇ.50 ಇರುವ ಮೀಸಲಾತಿ ಪ್ರಮಾಣವನ್ನು ಶೇ.75ಕ್ಕೆ ಹೆಚ್ಚಿಸಿ ಒಕ್ಕಲಿಗರು, ಲಿಂಗಾಯತರು, ಮುಸ್ಲಿಮರು ಸೇರಿ ಎಲ್ಲರಿಗೂ ನ್ಯಾಯ ಕೊಡುತ್ತೇವೆ ಎಂದರು.
ಬಾಗಲಕೋಟೆ ಜಿಲ್ಲೆಯಲ್ಲಿ ಸುದೀಪ್ ಅಬ್ಬರದ ಪ್ರಚಾರ: ಕಿಚ್ಚ ನೋಡಲು ನೆರೆದ ಸಾವಿರಾರು ಅಭಿಮಾನಿಗಳು
ಪಿಎಸ್‌ಐ ಹಗರಣದಲ್ಲಿ ಎಡಿಜಿಪಿ ಜೈಲಿಗೆ ಹೋಗಿ ನಡೆಯಬಾರದೆಲ್ಲ ನಡೆದಿದೆ. ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಮಂತ್ರಿಗಿರಿ ಕಳೆದುಕೊಂಡ, ಇಷ್ಟೆಲ್ಲ ನಡೆದ ನಂತರವೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟಾಚಾರಕ್ಕೆ ದಾಖಲೆಗಳನ್ನು ಕೇಳುತ್ತಾರೆ. ಇಂಥವರೆಲ್ಲ ಅಧಿಕಾರದಲ್ಲಿರುವುದು ನಿಮಗೆ ಬೇಕೆ ಎಂದು ಪ್ರಶ್ನೆ ಮಾಡಿದರು.
ಬಾಗಲಕೋಟೆಗೆ ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು, ತನ್ನ ಸಂಸ್ಥೆಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕಾಗಿ ಶಾಸಕ ಚರಂತಿಮಠ ತಡೆಹಿಡಿದಿದ್ದಾರೆ. ಕ್ಷೇತ್ರದ ಪ್ರಜಾಪ್ರಭುತ್ವದ ಮೌಲ್ಯಗಳೇ ಉಳಿಯದಂತೆ ಜನರನ್ನು ಭಯ, ಭೀತಿಯಲ್ಲಿ ಇರಿಸಿದ್ದಾರೆ. ಇಂಥ ಸರ್ವಾಧಿಕಾರಿ ಮತ್ತೊಮ್ಮೆ ಆಯ್ಕೆಯಾಗಬೇಕೆ ಎಂದು ವೇದಿಕೆಯಲ್ಲಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್, ಮನೆ ಯಜಮಾನತಿಗೆ ಪ್ರತಿ ತಿಂಗಳು .2 ಸಾವಿರ, ನಿರುದ್ಯೋಗ ಭತ್ಯೆ, ಮಹಿಳೆಯರಿಗೆ ಉಚಿತ ಬಸ್‌ಪಾಸ್ ಸೇರಿದಂತೆ ಕಾಂಗ್ರೆಸ್ ನೀಡಿರುವ ಪ್ರಣಾಳಿಕೆ ಜನರಿಗೆ ಒಪ್ಪಿಗೆ ಆಗಿದೆ. ಅಧಿಕಾರಕ್ಕೆ ಬಂದ ತಕ್ಷಣ ಮೊದಲು ಸರ್ಕಾರಿ ಮೆಡಿಕಲ್ ಕಾಲೇಜು ಕಾರ್ಯಕ್ಕೆ ಚಾಲನೆ ನೀಡಿ ನಾನೇ ಬಂದು ಉದ್ಘಾಟಿಸುತ್ತೇನೆ ಎಂದು ಹೇಳಿದರು.
ಅನೈತಿಕ ಸರ್ಕಾರ:
ನೇಕಾರರ ವಿದ್ಯುತ್ ಕೈಮಗ್ಗ ಬಳಕೆಗೆ ಪ್ರತಿ ಯೂನಿಟ್‌ಗೆ ಇದ್ದ .4.25ಗಳನ್ನು .1.25ಗಳಿಗೆ ಇಳಿಸಿದ್ದೆ. ಈ ಬಾರಿ ಅಧಿಕಾರಕ್ಕೆ ಬಂದರೆ ಆ ಮೊತ್ತವನ್ನೂ ಕೈ ಬಿಡುತ್ತೇನೆ. ಸಕಲರ ಅಭಿವೃದ್ಧಿಗಾಗಿ ಜನ ಕಾಂಗ್ರೆಸ್ ಬೆಂಬಲಿಸಬೇಕೆಂದು ಮನವಿ ಮಾಡಿದರು. ಕಬ್ಬು ಬೆಳೆಗಾರರಿಗೆ ಆಗ ಕಬ್ಬಿನ ಬೆಲೆ ಬಿದ್ದಾಗ .350ಗಳನ್ನು ಪ್ರತಿಟನ್‌ಗೆ ಸರ್ಕಾರದಿಂದ ನೀಡಿದ್ದೆ. ಈ ಸರ್ಕಾರ ಒಂದು ಪೈಸೆಯನ್ನಾದರೂ ನೀಡಿದೆಯಾ ಎಂದು ಪ್ರಶ್ನಿಸಿ ರಾಜ್ಯದಲ್ಲಿರುವುದು ಅನೈತಿಕ ಸರ್ಕಾರ. ಇದು ಜನ ಬೆಂಬಲ ಹೊಂದಿರುವ ಸರ್ಕಾರವಲ್ಲ. ದುಡ್ಡು ಕೊಟ್ಟು ಶಾಸಕರನ್ನು ಖರೀದಿಸಿ ಮಾಡಿರುವ ಸರ್ಕಾರವಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಎಸ್.ಆರ್.ಪಾಟೀಲ ಮಾತನಾಡಿ, ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತರ ಸಾಲಮನ್ನಾ ಮಾಡಿತ್ತು. ಬಿಜೆಪಿ ಸರ್ಕಾರ ಎಷ್ಟುಬಾರಿ ಮನ್ನಾ ಮಾಡಿದೆ ಎಂಬುವುದನ್ನು ಹೇಳಲಿ. ಕಾಂಗ್ರೆಸ್‌ನಷ್ಟುಪ್ರಗತಿಪರವಾದ ಮತ್ತೊಂದು ಸರ್ಕಾರವನ್ನು ಕಾಣಲು ಸಾಧ್ಯವಿಲ್ಲ. ಈ ಬಾರಿ ಕ್ಷೇತ್ರದ ಜನ ಎಚ್.ವೈ.ಮೇಟಿ ಅವರನ್ನ ಬೆಂಬಲಿಸಬೇಕೆಂದು ಕರೆ ನೀಡಿದರು.
ಮಾಜಿ ಸಚಿವ ಎಚ್.ವೈ.ಮೇಟಿ ಅವರು ಮಾತನಾಡಿದರು. ಎಐಸಿಸಿ ಕಾರ್ಯದರ್ಶಿ ಕ್ರಿಸ್ಟೋಫರ್ ತಿಲಕ್, ಲೋಕ ತಾಂತ್ರಿಕ ಜನತಾದಳ ಪಕ್ಷದ ಮುಖಂಡ ಡಾ.ಮಲ್ಲಣ್ಣ ನಾಡಗೌಡ, ಮುಧೋಳ ಕ್ಷೇತ್ರದ ಅಭ್ಯರ್ಥಿ, ಮಾಜಿ ಸಚಿವ ಆರ್.ಬಿ.ತಿಮ್ಮಾಪುರ, ಬೀಳಗಿ ಕ್ಷೇತ್ರದ ಅಭ್ಯರ್ಥಿ ಜೆ.ಟಿ. ಪಾಟೀಲ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಕೆಪಿಸಿಸಿ ಸಂಯೋಜಕ ಬಸವಪ್ರಭು ಸರನಾಡಗೌಡ, ಮಾಜಿ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮುಖಂಡರಾದ ಅಶೋಕ ಲಾಗಲೋಟಿ, ಪರಶುರಾಮ ಮಹಾರಾಜನವರ, ರವೀಂದ್ರ ಕಲಬುರಗಿ, ಹೊಳೆಬಸು ಶೆಟ್ಟರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಎಸ್‌ಸಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಆರ್.ಎಚ್.ಪೆಂಡಾರಿ, ಆಯುಬ ಪುಣೆಕಾರ, ಎಸ್.ಎನ್.ರಾಂಪೂರ, ಬಲರಾಂ ನಾಯಕ, ಶಫೀಕ ಜಮಾದಾರ, ಅಕ್ಬರ್ ಮುಲ್ಲಾ, ದುಂಡಪ್ಪ ಏಳಮ್ಮಿ, ಮಂಜುನಾಥ ವಾಸನದ, ಚೆನ್ನವೀರ ಅಂಗಡಿ, ಸಿಕಂದರ್ ಅಥಣಿ, ಗೋವಿಂದ ಬಳ್ಳಾರಿ ಮತ್ತಿತರರು ಇದ್ದರು.
ಬಿಜೆಪಿ ಲಿಂಗಾಯತರನ್ನು ಸಿಎಂ ಮಾಡಲ್ಲ: ಎಚ್.ಡಿ.ಕುಮಾರಸ್ವಾಮಿ
ದೇಶಕ್ಕೆ ಸಿದ್ದರಾಮಯ್ಯ ನಾಯಕತ್ವ ಅಗತ್ಯ
ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಲೋಕತಾಂತ್ರಿಕ ಜನತಾದಳ ಪಕ್ಷದ ಹಿರಿಯ ನಾಯಕ ಡಾ.ಎಂ.ಪಿ.ನಾಡಗೌಡ ಅವರು, ಸಿದ್ದರಾಮಯ್ಯ ಅವರು ಜನರಿಂದ ನಾಯಕರಾದವರು. ಈ ಬಾರಿ ಪಕ್ಷಾತೀತ ಶಕ್ತಿಗಳು ಒಂದಾಗಬೇಕೆಂದು ನಿಶ್ಚಿಯಿಸಿ ನಾನು ಕಾಂಗ್ರೆಸ್ ಬೆಂಬಲಿಸುತ್ತಿದ್ದೇನೆ. ಶ್ರೀಲಂಕಾ, ಪಾಕಿಸ್ತಾನದಂತೆ ಈ ದೇಶದಲ್ಲಿ ಅಧ್ಯಕ್ಷರನ್ನು ಓಡಿಸಲು ಆಗುವುದಿಲ್ಲ. ಇಲ್ಲೇನಿದ್ದರೂ ಮತದಾನದ ಮೂಲಕವೇ ಉತ್ತರಿಸಬೇಕು ಎಂದು ಹೇಳಿದರು.
ಡಿಸಿ, ಪೊಲೀಸರಿಗೆ ಸಿದ್ದು ಅವಾಜ್
ಬವಿವ ಸಂಘದಲ್ಲಿ ಮತಯಾಚನೆಗೆ ಬಿಡುವುದಿಲ್ಲವಂತೆ ಈ ಬಗ್ಗೆ ದೂರು ನೀಡಿದರೂ ಡಿಸಿ ಕ್ರಮಕೈಗೊಂಡಿಲ್ಲವಂತೆ ನೋಡಪ್ಪಾ ಡಿಸಿ ಇನ್ನು 10 ದಿನ ಮಾತ್ರ ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ ಹುಷಾರ್ ಎಂದು ವೇದಿಕೆಯಿಂದಲೇ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು. ಅಲ್ಲದೇ ಪೊಲೀಸರಿಗೂ ಅದೇ ದಾಟಿಯ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ ಕಾನೂನು ರೀತಿಯಲ್ಲೇ ತಕ್ಕಪಾಠ ಕಲಿಸುತ್ತೇನೆ ಎಂದರು.