ಮಲ್ಲಿಕಾರ್ಜುನ ಖರ್ಗೆ ಹತ್ಯೆಗೆ ಸ್ಕೆಚ್ ಹಾಕಿದ ಬಿಜೆಪಿ ಅಭ್ಯರ್ಥಿ ಬಂಧಿಸಿ: ಸಿದ್ದರಾಮಯ್ಯ ಆಗ್ರಹ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರನ್ನು ಕೊಲೆ ಮಾಡುವುದಾಗಿ ಯೋಜನೆ ರೂಪಿಸಿದರುವ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರನ್ನು ಬಂಧಿಸುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬೆಂಗಳೂರು (ಮೇ 06): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕುಟುಂಬದ ಸದಸ್ಯರನ್ನು ಸಾಫ್ ಮಾಡ್ತೇನೆ" ಎಂದು ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಹತ್ಯೆಯ ಬೆದರಿಕೆ ಒಡ್ಡಿರುವುದು ಅತ್ಯಂತ ಖಂಡನೀಯ. ಪೊಲೀಸರು ತಕ್ಷಣ ಆರೋಪಿ ರಾಠೋಡ್‌ನನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು ಮತ್ತು ಖರ್ಗೆ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಬಗ್ಗ ಟ್ವೀಟ್ ಮೂಲಕ ಕರ್ನಾಟಕ ಪೊಲೀಸರು ಕೂಡಲೇ ಕಾಂಗ್ರೆಸ್ ಮುಖಂಡರ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರನ್ನು ಬಂಧಿಸಿ ಜೈಲಿಗಟ್ಟಬೇಕು. ಕೂಡಲೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬ ಸದಸ್ಯರ ಜೀವಕ್ಕೆ ಆಪತ್ತು ಇರುವುದರಿಂದ ಅವರಿಗೆ ಹೆಚ್ಚಿನ ಭದ್ರತೆಯನ್ನು ವ್ಯವಸ್ಥೆ ಮಾಡಬೇಕು. ಇನ್ನು ಮಣಿಕಂಠ ಮಾತನಾಡಿರುವ ಆಡಿಯೋದಲ್ಲಿ ಯಾರಾರ ಹೆಸರು ಹೇಳಲಾಗಿದೆಯೋ ಅವರೆಲ್ಲರಿಗೂ ಭದ್ರತೆ ನೀಡುವಂತೆ ಆಗ್ರಹ ಮಾಡಿದ್ದಾರೆ.
30 ಕೋಟಿ ಆಸ್ತಿ ಒಡೆಯ ಮಣಿಕಂಠ ರಾಠೋಡ ಮೇಲೆ 40 ಪೊಲೀಸ್ ಕೇಸ್!
ಮಲ್ಲಿಕಾರ್ಜುನ ಖರ್ಗೆ ಹತ್ಯೆಗೆ ಸಂಚು ಆರೋಪ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಫೆಬ್ರವರಿ 22ರಂದು ರಾಜಸ್ಥಾನ ಶಾಸಕ ಬಿಲಾವತ್ ಅವರು ಖರ್ಗೆ ಅವರಿಗೆ ಹೆಚ್ಚು ದಿನ ಇರಲ್ಲ ಎಂದಿದ್ದರು. ಇದೀಗ ರಾಜ್ಯದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರು ಖರ್ಗೆ, ಹೆಂಡತಿ ಮಕ್ಕಳನ್ನ ಸಾಫ್ ಮಾಡ್ತೇನೆ ಎಂದಿದ್ದಾರೆ. ಇದು ತುಂಬ ಅಪಾಯಕಾರಿ ನಡೆಯಾಗಿದ್ದು, ಖರ್ಗೆಯವರ ಕುಟುಂಬ ಆತಂಕದಲ್ಲಿದೆ. ಪ್ರಧಾನಿ, ಸಿಎಂ ಇದನ್ನ ಗಂಭೀರವಾಗಿ ಪರಿಗಣಿಸಿಲ್ಲ. ಮಲ್ಲಿಕಾರ್ಜುನ ಖರ್ಗೆ ಹತ್ಯೆಗೆ ಸಂಚು ನಡೆದಿದೆ. ದಲಿತ ನಾಯಕ ಖರ್ಗೆ ಅವರ ಹತ್ಯೆಗೆ ಬಿಜೆಪಿ ನಾಯಕರು ಹೊರಟಿದ್ದಾರೆ ಎಂದು ಆರೋಪ ಮಾಡಿದರು. ಇದೇ ವೇಳೆ ಮಣಿಕಂಠ ರಾಥೋಡ್ ಹಾಗೂ ರವಿ ಮಾತನಾಡಿದ್ದಾರೆನ್ನಲಾದ ಆಡಿಯೋ ಬಿಡುಗಡೆ ಮಾಡಿದರು.
ಮಣಿಕಂಠ ರಾಠೋಡ್ ವಿರುದ್ಧ ದೂರು ದಾಖಲು: ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಮತ್ತವರ ಕುಟುಂಬದವರ ಹತ್ಯೆಗೆ ಸಂಚು ರೂಪಿಸಲಾಗಿದ್ದು, ಅವರಿಗೆ ಜೀವ ಬೆದರಿಕೆ ಇದೆ. ಖರ್ಗೆ ಮತ್ತವರ ಕುಟುಂಬವನ್ನು ಸರ್ವನಾಶ ಮಾಡುತ್ತೇನೆ ಎಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ (Manikanta Rathod) ಅವರು ಬಿಜೆಪಿ ಮುಖಂಡರೊಬ್ಬರ ಜತೆ ಮಾತನಾಡಿರುವ ಆಡಿಯೊವನ್ನು ಶನಿವಾರ (ಮೇ 6) ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಈಗ ಮಣಿಕಂಠ ರಾಠೋಡ್ ವಿರುದ್ಧ ದೂರು ನೀಡಿದೆ. ಈ ಆಡಿಯೋದಲ್ಲಿ ಲೋಕಸಭಾ ಮಾಜಿ ಸ್ಪೀಕರ್ ಮೀರಾ ಕುಮಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್, ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಕಾಂಗ್ರೆಸ್ ಮುಖಂಡರಾದ ರಾಮಲಿಂಗಾರೆಡ್ಡಿ, ಕೃಷ್ಣ ಭೈರೇಗೌಡ ಸೇರಿ ಇನ್ನಿತರ ಹೆಸರನ್ನು ಕೂಡ ಹೇಳಲಾಗಿದ್ದು, ಅವರಿಗೂ ಜೀವ ಬೆದರಿಕೆ ಇದೆ ಎನ್ನಲಾಗಿದೆ.
ಆಡಿಯೋದಲ್ಲಿ ಏನೇನಿದೆ?
ಕಲಬುರಗಿ ಜಿಲ್ಲೆ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹಾಗೂ ಬಿಜೆಪಿ ಮುಖಂಡ ರವಿ ಎಂಬುವವರು ಮಾತನಾಡಿದ್ದಾರೆನ್ನಲಾದ ಆಡಿಯೊವನ್ನು ಕಾಂಗ್ರಸ್ ನಾಯಕರು ಇಂದು ಕೆಪಿಸಿಸಿ ಕಚೇರಿಯಲ್ಲಿ ಬಹಿರಂಗಗೊಳಿಸಿದ್ದಾರೆ. ಇದರಲ್ಲಿ ನನ್ನ ಮೇಲೆ 44 ಕೇಸ್ ಇವೆ ಎಂದು ಹೇಳಿದವರು ಯಾರು? ಎಂದು ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ಮಣಿಕಂಠ ಮಾತನಾಡುತ್ತಾರೆ. ಅದಕ್ಕೆ ರವಿ, ನಾವು ಯಾರೂ ಈ ರೀತಿ ಆರೋಪ ಮಾಡುವುದಿಲ್ಲ. ಆದರೆ, ಖರ್ಗೆ ಕಡೆಯವರು ಮಾತನಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಅದಕ್ಕೆ ಮಣಿಕಂಠ, ಯಾರು ಈ ರೀತಿಯಾಗಿ ಮಾತನಾಡುತ್ತಾರೋ ಆ ಖರ್ಗೆ ಕಡೆಯವರನ್ನೇ ಕೇಳು ಎಂದು ಹೇಳುತ್ತಾರೆ. ಆಗ ರವಿ ಅವರ ಫೋನ್ ನಂಬರ್ ಕೊಡಿ, ಎಂದಾಗ ಯಾರ ಫೋನ್ ನಂಬರ್ ಸಹ ಇಲ್ಲ. ನಾನು ನಿಮ್ಮ ಅಭಿಮಾನಿ ಇದ್ದೇನೆ. ನಮ್ಮ ಅಣ್ಣನ ಬಗ್ಗೆ ಏಕೆ ಹೀಗೆ ಮಾತನಾಡುತ್ತೀರೆಂದು ಅವರಿಗೂ ಕೇಳುತ್ತೇನೆ ಎಂದು ಹೇಳುತ್ತಾರೆ.
ಚಿತ್ತಾಪುರದಲ್ಲಿ ಬಿಜೆಪಿ ಹೊಸಮುಖ ತಂತ್ರ, ಪ್ರಿಯಾಂಕ್ ಖರ್ಗೆ ಹ್ಯಾಟ್ರಿಕ್ ಕನಸು ನನಸಾಗುತ್ತಾ?
ಅದಕ್ಕೆ ಮಣಿಕಂಠ, ನನ್ನ ಬಳಿ ಅವರ ಫೋನ್ ನಂಬರ್ ಇದ್ರೆ ಅವರು, ಅವರ ಹೆಂಡತಿ ಮಕ್ಕಳನ್ನು ಸಾಫ್ ಮಾಡುತ್ತೇನೆ. ಅದಕ್ಕೆ ನನ್ನ ಬಳಿ ಅವರ ಫೋನ್ ನಂಬರ್ ಇಲ್ಲ ಎಂದು ಹೇಳಿದರು. ಆಗ ರವಿ, ಯಾರ ಹೆಂಡತಿ, ಮಕ್ಕಳನ್ನು ಸಾಫ್ ಮಾಡುತ್ತೀರಿ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಮಣಿಕಂಠ ರಾಠೋಡ, “ನೀನು ಯಾರ ಹೆಸರನ್ನು ತೆಗೆದುಕೊಂಡಿದ್ದೀಯಾ? ಎಂದು ಕೇಳಿದರು. ಆಗ ರವಿ, ಖರ್ಗೆ ಅವರದ್ದು ಅಣ್ಣಾ ಎಂದು ಉತ್ತರಿಸಿದ್ದಾರೆ. ಅದಕ್ಕೆ ಮಣಿಕಂಠ ರಾಠೋಡ, ಹಾ ಅವರದ್ದೇ, ಅವರ ನಂಬ ಇದ್ದರೆ ಅವರನ್ನು ಮತ್ತವರ ಕುಟುಂಬದವರನ್ನು ಸಾಫ್ ಮಾಡುತ್ತೇನೆ. ಅದಕ್ಕೇ ಅವರ ನಂಬರ್ ನನ್ನ ಬಳಿ ಇಲ್ಲ. ಖರ್ಗೆ ಅವರ ನಂಬರ್ ಇದ್ದರೆ ನಾನು ಬಾಯಿಗೆ ಬಂದ ಹಾಗೆ ಬಯ್ಯುತ್ತೇನೆ ಅಂತ ನಿನಗೆ ಹೇಳುತ್ತಿದ್ದೇನೆ ಎಂದು ಉತ್ತರಿಸುತ್ತಾರೆ.