ಬೆಂಗಳೂರು(ನ.02): ಕಾಂಗ್ರೆಸ್‌ನವರು ಒಡೆದು ಆಳುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಮತ ಕಾಂಗ್ರೆಸ್‌ಗೆ ಬರುತ್ತದೆ ಎಂಬ ಕಾರಣಕ್ಕೆ, ಮುಸ್ಲಿಮರನ್ನು ಕರೆತಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಪ್ರಚಾರ ಮಾಡಿಸಿದ್ದಾರೆ. ಸಿದ್ದರಾಮಯ್ಯ ಬಂದು ಮತ ಕೇಳಿದರೆ ಮುಸ್ಲಿಂ ಮತ ಪಡೆಯಬಹುದು ಎಂಬ ಉದ್ದೇಶದಿಂದ ಹೀಗೆ ಮಾಡುತ್ತಾರೆ. ಈ ಮೂಲಕ ಒಡೆದು ಆಳುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದೂ ಬೆಟ್ಟವನ್ನು (ಕಪಾಲ) ಯಾಕೆ ಬೇರೆಯವರಿಗೆ ನೀಡುವುದಕ್ಕೆ ಪ್ರಯತ್ನ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಗಾಂಧಿ ಅವರನ್ನು ಮೆಚ್ಚಿಸಲು ಯೇಸು ಪ್ರತಿಮೆ ನಿರ್ಮಾಣ ಮಾಡಲಾಗಿದೆಯೇ? ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಹರಿಹಾಯ್ದರು.

ಯಾರು ಏನು ಎಂಬುದು ಎಲ್ಲರಿಗೂ ತಿಳಿದಿದೆ. ಗುತ್ತಿಗೆದಾರನಾಗಿ 18ನೇ ವರ್ಷದಿಂದ ಆದಾಯ ತೆರಿಗೆ ಪಾವತಿಸುತ್ತಿದ್ದೇನೆ. ನಾನು ಅಭಿವೃದ್ಧಿ ಬಗ್ಗೆ ಮಾತನಾಡುತ್ತೇನೆ ಅಷ್ಟೇ. ಮುನಿರತ್ನ ಭ್ರಷ್ಟ ಎಂಬ ಶಿವಕುಮಾರ್‌ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಅಂಗೈ ಹುಣ್ಣಿಗೆ ಕನ್ನಡಿಬೇಕಾ. ನಾನು ಭ್ರಷ್ಟನಾಗಿದ್ದರೆ ಏಕೆ ಕಾಂಗ್ರೆಸ್‌ನಲ್ಲಿ ಇಟ್ಟುಕೊಳ್ಳಬೇಕಿತ್ತು. ಭ್ರಷ್ಟ ಯಾರು ಎನ್ನುವುದು ಜಗತ್ತಿಗೆ ಗೊತ್ತಿದೆ. ಫೋನ್‌ ಟ್ಯಾಪಿಂಗ್‌ ಮಾಡಿಸುವುದಕ್ಕೆ ಬರುತ್ತದೆ. ಬೇರೆ ತಿಳಿಯುವುದಿಲ್ಲವೇ ಎನ್ನುವ ಮೂಲಕ ಪರೋಕ್ಷವಾಗಿ ಶಿವಕುಮಾರ್‌ ವಿರುದ್ದ ಆರೋಪ ಮಾಡಿದರು. ಫೋನ್‌ ಟ್ಯಾಪಿಂಗ್‌ನಲ್ಲಿ ಶಿವಕುಮಾರ್‌ ಭಾಗಿಯಾಗಿದ್ದಾರೆಯೇ? ಎಂಬ ಪ್ರಶ್ನೆಗೆ ಮುಂದೆ ಹೇಳುತ್ತೇನೆ ಎಂದರು.

ಆರ್‌ಆರ್‌ ನಗರ ಬೆಂಕಿ, ಬಿಡುಗಡೆಯಾಗಲಿರುವ ಕಣ್ಣೀರ ಸಿನಿಮಾ ಯಾವುದು?

ಪೊಲೀಸರ ಎಚ್ಚರಿಕೆಯಿಂದ ಹತ್ಯೆ ತಪ್ಪಿದೆ:

ಸ್ವಲ್ಪ ಮೈ ಮರೆತರು ಆರ್‌.ಆರ್‌.ನಗರದಲ್ಲಿ ಹತ್ಯೆಗಳು ನಡೆಯುವ ಮೂಲಕ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಆಗುತ್ತದೆ ಎಂದಿದ್ದೆ. ಪೊಲೀಸರ ಮುನ್ನೆಚ್ಚರಿಕೆ ಕ್ರಮದಿಂದಾಗಿ ಅದು ತಪ್ಪಿದೆ ಎಂದು ಮುನಿರತ್ನ ಹೇಳಿದ್ದಾರೆ. ಶನಿವಾರ ಹೆಚ್ಚು ಕಡಿಮೆಯಾಗಿದ್ದರೂ ಕೊಲೆಯಾಗುತ್ತಿತ್ತು. ಈಗ ಒಬ್ಬರು ಆಸ್ಪತ್ರೆಯಲ್ಲಿ ಇದ್ದಾರೆ. ಇದನ್ನೆಲ್ಲಾ ಏಕೆ ಮಾಡುತ್ತಾರೆ. ಕಾಂಗ್ರೆಸ್‌ನವರು ಅಷ್ಟು ಪ್ರಾಮಾಣಿಕರಾಗಿದ್ದರೆ, ಹಣ ಹಂಚುವ ಕೆಲಸ ಏಕೆ ಮಾಡಬೇಕಿತ್ತು. ಕನಕಪುರದಿಂದ ಬಂದವರು ಕ್ಷೇತ್ರದಲ್ಲಿ ಹಣ ಹಂಚಿದ್ದಾರೆ. ಏಳು ಕಡೆ ಹಣ ಹಂಚಿ ಸಿಕ್ಕಿ ಬಿದ್ದಿದ್ದಾರೆ. ಪಕ್ಷದ ಕಾರ್ಯಕರ್ತ ಸಿದ್ದೇಗೌಡರು ಮತ್ತು ಅವರ ಪುತ್ರನ ಮೇಲೆ ಹಲ್ಲೆ ನಡೆಸಿದ್ದಾರೆ. ಇಂತಹ ದೌರ್ಜನ್ಯ ಏಕೆ ಮಾಡುತ್ತೀರಾ? ನಿಮ್ಮ ಪರ ಕನಕಪುರದಿಂದ ಜನ ಬರುತ್ತಾರೆ ಎಂದು ಗೊತ್ತಿದೆ. ಆದರೆ ಕನಕಪುರದಿಂದ ಜನರನ್ನು ಕರೆಸಿ ಬೆಂಗಳೂರು ಹಾಳು ಮಾಡುವ ಅಗತ್ಯ ಇದೆಯೇ? ಬೆಂಗಳೂರನ್ನು ಶಾಂತಿಯಿಂದ ಇರುವುದಕ್ಕೆ ಬಿಡಿ. ಈ ಕಾರಣದಿಂದಾಗಿಯೇ ಕ್ಷೇತ್ರದಲ್ಲಿ ಅರೆಸೇನಾ ಪಡೆಯನ್ನು ಭದ್ರತೆಗೆ ನಿಯೋಜಿಸಿ ಎಂದು ಮನವಿ ಮಾಡಿದ್ದೆ ಎಂದು ತಿಳಿಸಿದರು.

ಆರ್‌.ಆರ್‌.ನಗರದಲ್ಲಿ ಶನಿವಾರ ಕನಕಪುರದಿಂದ ಹಣ ಹಂಚಿಕೆ ಮಾಡಲು ಕೆಲವರು ಬಂದಿದ್ದರು. ಹಣ ಹಂಚಿಕೆ ಮಾಡುತ್ತಿದ್ದವರ ವಿರುದ್ಧ ಏಳು ಎಫ್‌ಐಆರ್‌ಗಳು ದಾಖಲಾಗಿವೆ. ಕೆಲವರು ವಾಹನಗಳನ್ನು ಬಿಟ್ಟು ಕಾಲ್ಕಿತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.