ಬೆಂಗಳೂರು (ನ.05):  ಕೊರೋನಾ ಸೋಂಕಿನಿಂದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಕುಸಿಯಲು ಕಾರಣವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸಿದ್ಧ ಉಡುಪು ಕಾರ್ಖಾನೆಗಳು ಸೇರಿದಂತೆ ವಿವಿಧ 30ಕ್ಕೂ ಹೆಚ್ಚು ಕಂಪನಿಗಳು ಸ್ಥಗಿತವಾಗಿದ್ದವು. ಕ್ಷೇತ್ರದ ಜನತೆ ತಮ್ಮ ಊರುಗಳಿಗೆ ತೆರಳಿದ್ದು, ಮತದಾನದ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ. ಕಳೆದ ಅವಧಿಯಲ್ಲಿ ಶೇ.52ರಷ್ಟುಮತದಾನ ನಡೆದಿತ್ತು. ಪ್ರಸಕ್ತ ಅವಧಿಯಲ್ಲಿ ಶೇ.45ರಷ್ಟುಮತದಾನವಾಗಿದ್ದು, ಶೇ.7ರಷ್ಟುಕಡಿಮೆಯಾಗಿದೆ ಎಂದರು.

ಮತದಾನ ಕಡಿಮೆಯಾದರೆ ನಾವು ಗೆಲ್ಲುತ್ತೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸುವ ಚಾಳಿಯನ್ನು ಕಾಂಗ್ರೆಸ್‌ನವರು ಬಿಡಬೇಕು. ಕಳೆದ 134 ವರ್ಷಗಳಿಂದ ಇದೇ ಹೇಳಿಕೆಯನ್ನು ನೀಡುತ್ತಾ ಬಂದಿದ್ದಾರೆ. ಆ ಕಾಲ ಈಗ ಬದಲಾಗಿದೆ. ಈಗ ಜನ ಬುದ್ಧಿವಂತರಾಗಿದ್ದಾರೆ. ಶೇ.20ರಿಂದ ಶೇ.30ರಷ್ಟುಮತದಾನವಾದರೂ ಜನ ಅಭಿವೃದ್ಧಿ ಮಾಡುವವರ ಪರವಾಗಿರತ್ತಾರೆ. ಇನ್ನು ಮುಂದೆಯಾದರೂ ಈ ರೀತಿಯ ಹೇಳಿಕೆಗಳನ್ನು ನೀಡುವುದನ್ನು ಕಾಂಗ್ರೆಸ್‌ ಬಿಡಬೇಕು ಎಂದು ತಿಳಿಸಿದರು.

ಆರ್‌.ಆರ್‌.ಕ್ಷೇತ್ರ ಚುನಾವಣೆ ಸವಾಲಾಗಿ ಸ್ವೀಕರಿಸಿದ್ದೇನೆ: ಅಶೋಕ್‌ ...

ಸಚಿವ ಸ್ಥಾನ ಸಿಗಲಿದೆ:  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೊಟ್ಟ ಮಾತಿನ ಪ್ರಕಾರ ಈಗಾಗಲೇ ಎಲ್ಲರನ್ನೂ ಸಚಿವರನ್ನಾಗಿ ಮಾಡಿದ್ದಾರೆ. ನನಗೂ ಕೊಟ್ಟಮಾತಿನಂತೆ ಮಂತ್ರಿ ಮಾಡುತ್ತೇನೆ ಎಂದಿದ್ದಾರೆ. ಆದರೆ ಸಚಿವ ಸ್ಥಾನ ನೀಡುವ ಬಗ್ಗೆ ನಾನು ಈಗಲೇ ಏನು ಹೇಳಿವುದಿಲ್ಲ. ಮುಂದಿನ ಭವಿಷ್ಯ ಏನು ಅನ್ನೋದು ಯಾರಿಗೂ ಗೊತ್ತಿಲ್ಲ. ಅದಕ್ಕೆ ಕಾಲವೇ ಉತ್ತರ ನೀಡಲಿದೆ ಎಂದರು.

ನಾವು ಕಾಂಗ್ರೆಸ್‌ ಪಕ್ಷ ಬಿಡುವಾಗ ಕೆಲವರು ಶುಭ ಕೋರಿ ಕಳುಹಿಸಿದ್ದರು. ನಿಮಗೆ ಇಂಧನ ಇಲಾಖೆ ಸಚಿವ ಸ್ಥಾನ ಸಿಗಲಿದೆ. ಕೊಟ್ಟಮಾತಿಗೆ ಯಡಿಯೂರಪ್ಪ ತಪ್ಪೋದಿಲ್ಲ. ನಿಮಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿ ಕಳಿಸಿದ್ದಾರೆ ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನನ್ನ ವಿರುದ್ಧ ನಕಲಿ ಮತದಾರರ ಗುರುತಿನ ಚೀಟಿ ಮಾಡಿರುವ ಆರೋಪ ಇತ್ತು. ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನಲ್ಲಿ ನನ್ನ ವಿರುದ್ಧ ಆರೋಪ ಸಾಬೀತಾಗಿಲ್ಲ. ಈ ಆರೋಪ ಮಾಡಿರುವವರು ಯಾವ ದೇವರನ್ನ ನಂಬುತ್ತಾರೋ ಅಲ್ಲೇ ಆಣೆ ಮಾಡಲು ನಾನು ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು.