ಬೆಂಗಳೂರು(ನ.01): ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವಿನ ನಾಗಲೋಟದ ಕುದುರೆಯನ್ನು ಕಟ್ಟಿಹಾಕುವ ಧೈರ್ಯ ಡಿ.ಕೆ. ಸಹೋದರರಿಗೆ ಇಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಸವಾಲು ಹಾಕಿದ್ದಾರೆ.

‘ಕನ್ನಡಪ್ರಭ’ ಸಹೋದರ ಸಂಸ್ಥೆ ಸುವರ್ಣನ್ಯೂಸ್‌ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಆರ್‌.ಆರ್‌.ನಗರ ಕ್ಷೇತ್ರವು ಮೊದಲು ಉತ್ತರಹಳ್ಳಿ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿತ್ತು. ಕ್ಷೇತ್ರ ಪುನರ್‌ವಿಂಗಡಣೆಯಾದ ಬಳಿಕ ಪ್ರತ್ಯೇಕ ಕ್ಷೇತ್ರವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಇಲ್ಲ. ಕಳೆದ ಎರಡು ಬಾರಿ ಮುನಿರತ್ನ ಅವರ ಚಾಣಕ್ಯ ತಂತ್ರದಿಂದಾಗಿ ಬಿಜೆಪಿಗೆ ಸೋಲಾಯಿತೇ ಹೊರತು ಕಾಂಗ್ರೆಸ್‌ನಿಂದಲ್ಲ. 25 ವರ್ಷದಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಆರ್‌.ಆರ್‌.ನಗರ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಮುನಿರತ್ನ ಅವರು. ಈಗ ಅವರೇ ನಮ್ಮ ಜತೆ ಇದ್ದಾರೆ. ಕಾಂಗ್ರೆಸ್‌ಗೆ ನಮ್ಮ ಮೇಲೆ ಪ್ರಯೋಗಿಸಲು ಯಾವುದೇ ಅಸ್ತ್ರ ಇಲ್ಲ ಎಂದು ಟೀಕಾಪ್ರಹಾರ ನಡೆಸಿದರು.

'ವಿಷ್ಣವರ್ಧನ್‌ ಆಟದ ಮೈದಾನ, ರಾಜಕುಮಾರ್‌ ಉದ್ಯಾನವನ ನಿರ್ಮಾಣಕ್ಕೆ ಮಂಜೂರಾತಿ'

ಕ್ಷೇತ್ರದಲ್ಲಿ ಮುನಿರತ್ನ ಗೆಲುವಿನ ನಾಗಲೋಟ ಮುಂದುವರಿಯಲಿದೆ. ನಾಗಲೋಟದ ಕುದುರೆಯನ್ನು ಕಟ್ಟಿಹಾಕುವ ಧೈರ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ಗೆ ಇಲ್ಲ. ಕ್ಷೇತ್ರದಲ್ಲಿ ನಾನು ಮನೆ ಮಗನಾಗಿದ್ದು, ಅವರಿಬ್ಬರು ಹೊರಗಡೆಯವರಾಗಿದ್ದಾರೆ. ಅವರು ನಂಬಿಕೆ ಅರ್ಹರಲ್ಲ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ಸಂಸದ ಡಿ.ಕೆ.ಸುರೇಶ್‌ ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಆರ್‌.ಆರ್‌.ನಗರ ಬಂದರೂ ಅಲ್ಲಿ ಮಣ್ಣು ಮುಕ್ಕಿದ್ದಾರೆ ಎಂದು ಹರಿಹಾಯ್ದರು.

ಮುಂದೆ ನಡೆಯುವ ಪಾಲಿಕೆ ಚುನಾವಣೆಗೆ ಆರ್‌.ಆರ್‌.ನಗರ ಉಪಚುನಾವಣೆಯು ದಿಕ್ಸೂಚಿಯಾಗಲಿದೆ. ಹೀಗಾಗಿ ಈ ಕ್ಷೇತ್ರದ ಚುನಾವಣೆಯನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ. ಮುನಿರತ್ನ ಅವರ ಚುನಾವಣೆಗಿಂತ ಇದು ನನ್ನ ಚುನಾವಣೆ ಎಂದು ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದ್ದು, ಇಲ್ಲಿ ಬೆವರು ಸುರಿಸಿ ಕೃಷಿ ಮಾಡಿದ್ದೇನೆ. ಹೀಗಾಗಿ ಬಿಜೆಪಿ ಸುಲಭವಾಗಿ ಜಯಗಳಿಸಲಿದೆ ಎಂದು ಹೇಳಿದ ಅವರು, ಕಾಂಗ್ರೆಸ್‌ ಕ್ಷೇತ್ರದಲ್ಲಿ ಜಾತಿ ರಾಜಕಾರಣ ಮಾಡುತ್ತಿದೆ. ಹೀಗಾಗಿ, ಒಕ್ಕಲಿಗ ಸಮುದಾಯವು ಬಿಜೆಪಿ ಕಡೆ ನೋಡುತ್ತಿದೆ ಎಂದು ಅಶೋಕ್‌ ಹೇಳಿದರು.