ಮುನೇನಕೊಪ್ಪ, ಚಿಕ್ಕನಗೌಡ್ರ ಕಾಂಗ್ರೆಸ್‌ಗೆ ಬರ್ತಾರೆ: ಸಚಿವ ಸಂತೋಷ್ ಲಾಡ್
ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಚರ್ಚೆಗಳ ನಡುವೆಯೇ, ಬಿಜೆಪಿಯ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಹಿತಿ ನೀಡಿದ್ದಾರೆ.
ಧಾರವಾಡ (ಆ.28): ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಚರ್ಚೆಗಳ ನಡುವೆಯೇ, ಬಿಜೆಪಿಯ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮುನೇನಕೊಪ್ಪ, ಚಿಕ್ಕನಗೌಡರ ಮಾತ್ರವಲ್ಲದೆ ಇನ್ನೂ ಹಲವು ಮಂದಿ ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ.
ಯಾರಾರಯರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಹಂತ ಹಂತವಾಗಿ ಅವರು ನಮ್ಮ ಪಕ್ಷಕ್ಕೆ ಬರಲಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಯಾರಿಗೆ ಟಿಕೆಟ್ ನೀಡಬೇಕೆಂದು ಸಮೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯ ಎಲ್ಲ ಶಾಸಕರು, ನಾಯಕರ ಅಭಿಪ್ರಾಯ ಸಂಗ್ರಹ ಮಾಡಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಲಾಗುವುದು ಎಂದರು.
ಲೋಕಸಭೆ ಚುನಾವಣೆ: ಪ್ರಲ್ಹಾದ್ ಜೋಶಿಗೆ ಟಕ್ಕರ್ ಕೊಡಲು ಸಜ್ಜಾಗುತ್ತಿದ್ದಾರಾ ವಿನಯ ಕುಲಕರ್ಣಿ ಪತ್ನಿ
ಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಗಿಮಿಕ್: ಬಿಜೆಪಿಯು 65 ಸೀಟ್ ಮಾತ್ರ ಪಡೆದು ಹತಾಶೆಗೊಂಡಿದೆ. ಇನ್ನು ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಬರುತ್ತಿರುವುದರಿಂದ ಸರ್ಕಾರ ಬೀಳಲಿದೆ ಎಂಬ ಹೇಳಿಕೆ ನೀಡುವ ಮೂಲಕ ಬಿಜೆಪಿ ಮುಖಂಡರು ಗಿಮಿಕ್ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷ ಆಡಳಿತ ನಡೆಸಲು ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ, ಸರ್ಕಾರ ಸಂಪೂರ್ಣ ಐದು ವರ್ಷ ಉತ್ತಮ ಆಡಳಿತ ನೀಡಲಿದೆ.
ಯೋಜನೆಗಳ ಮೂಲಕ ಕೇಂದ್ರ ಸರ್ಕಾರ ಮಾತನಾಡಲು ಮುಂದಾಗುತ್ತಿಲ್ಲ. ಬಿಜೆಪಿ ವಿವಾದಗಳನ್ನು ಹುಟ್ಟು ಹಾಕುವ ಮೂಲಕ ನಮ್ಮ ಸರ್ಕಾರದ ಅಭಿಪ್ರಾಯ ಕೆಡಿಸುವ ಪ್ರಯತ್ನ ಮಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲೂ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಐಎಎಸ್ ಅಧಿಕಾರಿಗಳ ಬೆಂಗಳೂರು ವರ್ಗಕ್ಕೆ ಲಂಚ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರು ಆರೋಪ ಮಾಡಿದ್ದಾರೆ, ಯಾರು ಕೊಟ್ಟಿದ್ದಾರೆ ಅವರನ್ನೇ ಕೇಳಬೇಕು. ಕಳೆದ ಒಂದು ತಿಂಗಳಿನಿಂದ ವರ್ಗಾವಣೆಯಲ್ಲಿ ದುಡ್ಡು, ದುಡ್ಡು ಎನ್ನುತ್ತಿದ್ದಾರೆ. ಇದು ಬರೀ ಬಿಜೆಪಿಯವರ ಆರೋಪವಾಗಿದೆ.
ಈ ಬಗ್ಗೆ ಅವರನ್ನೇ ಕೇಳಬೇಕು. ಈ ರೀತಿ ಮಾತನಾಡುವುದರಿಂದ ಸಾರ್ವಜನಿಕರಿಗೆ ಏನು ಉಪಯೋಗ? ಜನರಿಗೆ ಉಪಯೋಗ ಆಗುವಂತಹ ಕಾರ್ಯ ಮಾಡಬೇಕು. ಸರ್ಕಾರದ ಐದು ಗ್ಯಾರಂಟಿ ಯಶಸ್ವಿಯಾಗಿವೆ.. ಬಡವರಿಗೆ ಯೋಜನೆ ತಲುಪುತ್ತಿವೆ. ಇದರಿಂದಾಗಿ ಅವರಿಗೆ ನೋವಾಗಿ ಸರ್ಕಾರದ ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಚಿವ ಲಾಡ್ ಕಿಡಿಕಾರಿದರು. ಮುನಿರತ್ನ ಪುನಃ ಕಾಂಗ್ರೆಸ್ ಸೇರ್ಪಡೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲಾಡ್, ನಮ್ಮದು ಡಬಲ್ ಡೆಕ್ಕರ್ ಬಸ್ ಇದ್ದಂತೆ. ಎಲ್ಲಿ ಬೇಕಾದರೂ ಹತ್ತಬಹುದು. ಎಲ್ಲಿ ಬೇಕಾದಲ್ಲಿ ಇಳಿಯಬಹುದು.
ಆಪರೇಷನ್ ಹಸ್ತ ಯಶಸ್ವಿಯಾಗುವುದಿಲ್ಲ: ಮಾಜಿ ಸಿಎಂ ಬೊಮ್ಮಾಯಿ
ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಇದೆ. ಆದರೆ, ಮುನಿರತ್ನ ಸೇರ್ಪಡೆ ಬಗ್ಗೆ ಮಾಹಿತಿ ಇಲ್ಲ. ಇರಬಹುದು, ಆದರೆ ಹೆಚ್ಚಿಗೆ ಗೊತ್ತಿಲ್ಲ. ನಾವು ಯಾರನ್ನೂ ಸೆಳೆಯುತ್ತಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ಸ್ವಾಗತಿಸುತ್ತೇವೆ. ಬಿಜೆಪಿಯ ಮುನೇನಕೊಪ್ಪ ಕಾಂಗ್ರೆಸ್ ಸೇರುವುದು ಹಾಗೂ ಅವರು ಎಂಪಿ ಅಭ್ಯರ್ಥಿ ಆಗುವ ಬಗ್ಗೆ ನನಗೆ ಸ್ವಲ್ಪವೂ ಮಾಹಿತಿ ಇಲ್ಲ. ಅವರು ಬಂದರೆ ಸೇರಿಸಿಕೊಳ್ಳಲು ಸ್ವಾಗತ ಇದೆ. ಯಾರಿಗೆ ಎಂಪಿ ಟಿಕೆಟ್ ಎನ್ನುವುದು ಹೈಕಮಾಂಡ್ ಫೈನಲ್ ಮಾಡುತ್ತದೆ. ಮಾಜಿ ಶಾಸಕ ಚಿಕ್ಕನಗೌಡರ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾಹಿತಿ ನನಗೂ ಬಂದಿದೆ. ಆದರೆ ಅವರು ಯಾವ ಷರತ್ತು ವಿಧಿಸಿದ್ದಾರೆ ಎಂಬ ಮಾಹಿತಿ ಇಲ್ಲ ಎಂದರು.