Karnataka Politics: ಮುದ್ದಹನುಮೇಗೌಡ ಇಂದು ಕಾಂಗ್ರೆಸ್ ತೊರೆದು ಬಿಜೆಪಿಗೆ!
- ಕಾಂಗ್ರೆಸ್‌ಗೆ ಶಾಕ್: ಮುದ್ದಹನುಮೇಗೌಡ ಇಂದು ಬಿಜೆಪಿಗೆ
- ತುಮಕೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಸಾಧ್ಯತೆ
- ಕಳೆದ ಚುನಾವಣೆಗಲ್ಲಿ ದೇವೇಗೌಡರಿಗೆ ಸ್ಥಾನ ಬಿಟ್ಟು ಕೊಟ್ಟಿದ್ದರು
- ಕಾಂಗ್ರೆಸ್ಸಲ್ಲಿ ಸ್ಥಾನಮಾನ ಸಿಗದ್ದಕ್ಕೆ ಬೇಸತ್ತಿದ್ದ ಮಾಜಿ ಸಂಸದ
ಬೆಂಗಳೂರು (ನ.3) : ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ತುಮಕೂರಿನ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಗುರುವಾರ ಕಾಂಗ್ರೆಸ್ ತೊರೆದು ಆಡಳಿತಾರೂಢ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುದ್ದಹನುಮೇಗೌಡ ಅವರನ್ನು ಬರಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುದ್ದಹನುಮೇಗೌಡ ಅವರಿಗೆ ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವ ಸಂಭವವಿದೆ.
ನನಗೆ ಗುಟಾನು ಹೊಡೆದಿದ್ರು: ಮುದ್ದಹನುಮೇಗೌಡ ಬಿಜೆಪಿ ಸೇರ್ಪಡೆ ಬಗ್ಗೆ MP ಹೇಳಿದ್ದೀಗೆ!
ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದಿಂದ ಒಂದು ಬಾರಿ ಗೆಲುವು ಸಾಧಿಸಿದ್ದ ಮುದ್ದಹನುಮೇಗೌಡ ಅವರು ರಾಜಕೀಯಕ್ಕೆ ಬರುವ ಮುನ್ನ ನ್ಯಾಯಾಧೀಶರಾಗಿದ್ದರು.
ಕಳೆದ 2019ರ ಲೋಕಸಭಾ ಚುನಾವಣೆ ವೇಳೆ ಹಾಲಿ ಸಂಸದರಾಗಿದ್ದರೂ ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್ ನಿರಾಕರಿಸಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಬೆಂಬಲ ನೀಡಲಾಯಿತು. ಆದರೆ, ಅವರ ತ್ಯಾಗಕ್ಕೆ ಪ್ರತಿಯಾಗಿ ಕಾಂಗ್ರೆಸ್ ಬಳಿಕವೂ ಯಾವುದೇ ಸ್ಥಾನಮಾನ ನೀಡಲಿಲ್ಲ. ಇದರಿಂದ ಬೇಸತ್ತ ಅವರು ಇದೀಗ ಆ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ.
Mudda Hanumegowda: ಕಾಂಗ್ರೆಸ್‌ಗೆ ಅಧಿಕೃತವಾಗಿ ರಾಜೀನಾಮೆ ನೀಡಲು ಮುಂದಾದ ನಾಯಕ
ತುಮಕೂರಿಂದಲೇ ಲೋಕಸಭಾ ಕಣಕ್ಕೆ?:
ಮುದ್ದಹನುಮೇಗೌಡ ಅವರು ಮತ್ತೆ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದರೂ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡುವ ಸಾಧ್ಯತೆ ತೀರಾ ಕಡಮೆ. ಕಳೆದ ಬಾರಿ ಅಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಡಿ.ಕೃಷ್ಣಕುಮಾರ್ ಕಡಮೆ ಮತಗಳ ಅಂತರದಿಂದ ಸೋಲುಂಡಿದ್ದರಿಂದ ಈ ಬಾರಿಯೂ ಅವರನ್ನೇ ಕಣಕ್ಕಿಳಿಸುವ ಸಂಭವ ಹೆಚ್ಚಾಗಿದೆ. ಮೇಲಾಗಿ ತುಮಕೂರು ಲೋಕಸಭಾ ಕ್ಷೇತ್ರದ ಹಾಲಿ ಬಿಜೆಪಿ ಸದಸ್ಯ ಜಿ.ಎಸ್.ಬಸವರಾಜ ಅವರಿಗೆ 81 ವರ್ಷವಾಗಿರುವುದರಿಂದ ಮುಂಬರುವ ಚುನಾವಣೆಯಲ್ಲಿ ಅವರು ಸ್ಪರ್ಧಿಸದೇ ಇರಲು ನಿರ್ಧರಿಸಿದ್ದಾರೆ. ಹೀಗಾಗಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೂ ಸಮರ್ಥ ಅಭ್ಯರ್ಥಿಯ ಕೊರತೆಯಿದೆ. ಆ ಜಾಗವನ್ನು ಮುದ್ದಹನುಮೇಗೌಡ ಅವರು ಭರ್ತಿ ಮಾಡಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಮಾಹಿತಿ ನೀಡಿವೆ.