ಮುಡಾ ಹಗರಣ ರಾಜ್ಯಕ್ಕೆ, ಕಾಂಗ್ರೆಸ್‌ ಪಕ್ಷಕ್ಕೆ ಕಪ್ಪು ಚುಕ್ಕೆ: ಕೆ.ಎಸ್‌.ಈಶ್ವರಪ್ಪ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ನಿವೇಶನ ಹಂಚಿಕೆ ವಿವಾದದ ಮುಡಾ ಹಗರಣ ರಾಜ್ಯಕ್ಕೆ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಒಂದು ಕಪ್ಪು ಚುಕ್ಕೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಕೆ.ಎಸ್‌.ಈಶ್ವರಪ್ಪ ಟೀಕಿಸಿದ್ದಾರೆ. 

Muda Scam is a Black Spot for state and Congress party Says KS Eshwarappa gvd

ಕಲಬುರಗಿ (ನ.07): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ನಿವೇಶನ ಹಂಚಿಕೆ ವಿವಾದದ ಮುಡಾ ಹಗರಣ ರಾಜ್ಯಕ್ಕೆ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಒಂದು ಕಪ್ಪು ಚುಕ್ಕೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಕೆ.ಎಸ್‌.ಈಶ್ವರಪ್ಪ ಟೀಕಿಸಿದ್ದಾರೆ. ಕಲಬುರಗಿ ಸಂಚಾರದಲ್ಲಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ದ ಸಿಎಂ ಸಿದ್ದರಾಮಯ್ಯ ಮೇಲೆಯೇ ಆರೋಪಗಳಿವೆ. ನೋಟೀಸ್‌ನಂತೆ ಅವರು ಲೋಕಾಯುಕ್ತ ವಿಚಾರಣೆ ಎದುರಿಸಲಿದ್ದಾರೆ. 

ಸಿಎಂ ಸ್ಥಾನದಲ್ಲಿದ್ದು ಲೋಕಾಯುಕ್ತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರೋದು ಇದು ರಾಜ್ಯದ ಇತಿಹಾಸದಲ್ಲೇ ಮೊದಲು ಪ್ರಕರಣ ಎಂದು ಈಶ್ವರಪ್ಪ ಲೇವಡಿ ಮಾಡಿದರು. ಆರೋಪ ಕೇಳಿ ಬಂದಾಕ್ಷಣ ರಾಜೀನಾಮೆ ಬಿಸಾಕಿ ವಿಚಾರಣೆ ಎದುರಿಸೋದು ಬಿಟ್ಟು ಸಿಎಂ ಸ್ಥಾನದಲ್ಲಿದ್ದೇ ವಿಚಾರಣೆ ಎದುರಿಸುತ್ತಿರುವುದು ಸಿದ್ದರಾಮಯ್ಯನವರ ಭಂಡತನಕ್ಕೆಕನ್ನಡಿ ಹಿಡಿದಂತಿದೆ. ಇದು ರಾಜ್ಯಕ್ಕೆ ಕಪ್ಪು ಮಸಿ ಬಳಿದಿದೆ ಎಂದು ಈಶ್ವರಪ್ಪ ಕಿಡಿ ಕಾರಿದರು. ಮುಡಾ ಹಗರಣದ ವಿಚಾರದಲ್ಲಿ ಕಾಂಗ್ರೆಸ್‌ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿ ಅನುಸರಿಸುತ್ತಿದೆ. 

ತಮ್ಮ ಮೇಲೆ ಕೇಸ್‌ ಬಿದ್ದಾಗ ಕಾಂಗ್ರೆಸ್‌ನ ಯಾವ ಮುಖಂಡರೂ ರಾಜೀನಾಮೆಗೆ ಎಂದೂ ತಯಾರಾಗಿಲ್ಲ. ಈ ಹಿಂದೆ ನನ್ನ ಮೇಲೆ ಕೇಸ್‌ ಬಂದಾಗ ರಾಜೀನಾಮೆಗೆ ಆಗ್ರಹಿಸಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಆಗ್ರಹಿಸಿದ್ದರು. ಈಗ ಕೇಸ್‌ ಅವರ ಮೇಲಿದ್ದರೂ ರಾಜೀನಾಮೆ ಕೊಡದೆ ಭಂಡತನ ತೋರುತ್ತಿದ್ದಾರೆ. ಇದು ಯಾವ ಲೆಕ್ಕ? ಮೊದಲು ರಾಜೀನಾಮೆ ಕೊಟ್ಟು ತನಿಖೆ ಎದುರಿಸಿರಿ, ತನಿಖೆಯಲ್ಲಿ ನೀವು ತಪ್ಪಿತಸ್ಥರಲ್ಲ ಎಂಬುದು ಸಾಬೀತಾದಲ್ಲಿ ಮತ್ತೆ ಅಧಿಕಾರ ಗದ್ದುಗೆ ಹತ್ತಿರೆಂದು ಸಿಎಂ ಸಿದ್ದರಾಮಯ್ಯಗೆ ಈಶ್ವರಪ್ಪ ಆಗ್ರಹಿಸಿದರು.

ನಾನು ತಪ್ಪು ಮಾಡಿದೆ ಅಂತ ಹೇಳುವ ಯೋಗ್ಯತೆ ಯಾರಿಗೂ ಇಲ್ಲ: ಮಾಜಿ ಪ್ರಧಾನಿ ದೇವೇಗೌಡ

ಸಿದ್ದರಾಮಯ್ಯನವರ ಧರ್ಮ ಪತ್ನಿ ಪಾರ್ವತಿಯವರು ದೇವಸ್ಥಾನ ಬಿಟ್ಟು ಹೊರ ಬಂದಿದ್ದೇ ಇಲ್ಲ. ಅವರು ಹೊರಬಂದಿದ್ದೇ ಯಾರೂ ನೋಡಿಲ್ಲ, ಅಂತಹವರ ಮೇಲೆ ಆರೋಪ ಬಂದಿದೆ. ಸಿಎಂ ಸಿದ್ದರಾಮಯ್ಯ ನಾನು ತಪ್ಪಿತಸ್ಥನಲ್ಲ ಎಂದು ಹೇಳುತ್ತಿದ್ದಾರೆ. ಇದೆಲ್ಲ ನಾಟಕೀಯ ಮಾತು ಬೇಡ. ಎಫ್‌ಐಆರ್‌ ಆದ ತಕ್ಷಣ ಹುದ್ದೆಗೆ ರಾಜೀನಾಮೆ ನೀಡಬೇಕಿತ್ತು. ಕ್ಲೀನ್‌ ಚಿಟ್‌ ತಗೊಂಡು ಮತ್ತೆ ಬನ್ನಿ, ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಎಂದು ಭಂಡತನ ತೋರಿಸುತ್ತಿರೋದು ಸರ್ವಥಾ ಯಾರೂ ಒಪ್ಪುವಂತಹ ಮಾತಲ್ಲ ಎಂದು ಈಶ್ವರಪ್ಪ ಮಾತಲ್ಲೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷವನ್ನ ಕುಟುಕಿದರು.

Latest Videos
Follow Us:
Download App:
  • android
  • ios