Asianet Suvarna News Asianet Suvarna News

ಯಾರು ಬುರುಡೆ ಬಿಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತು: ಸಿದ್ದುಗೆ ಸಿಂಹ ತಿರುಗೇಟು!

ಯಾರು ಬುರುಡೆ ಬಿಡುತ್ತಿದ್ದಾರೆ, ಖಾಲಿ ಡಬ್ಬ ಅಲ್ಲಾಡಿಸುತ್ತಿದ್ದಾರೆ ಎಂಬುದು ಆ ರಸ್ತೆಯಲ್ಲಿ ಓಡಾಡುತ್ತಿರುವ ಜನರಿಗೆ ಗೊತ್ತು ಎಂದು ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

MP Pratap Simha Slams On CM Siddaramaiah At Mysuru gvd
Author
First Published Dec 25, 2023, 9:23 AM IST

ಮೈಸೂರು (ಡಿ.25): ಯಾರು ಬುರುಡೆ ಬಿಡುತ್ತಿದ್ದಾರೆ, ಖಾಲಿ ಡಬ್ಬ ಅಲ್ಲಾಡಿಸುತ್ತಿದ್ದಾರೆ ಎಂಬುದು ಆ ರಸ್ತೆಯಲ್ಲಿ ಓಡಾಡುತ್ತಿರುವ ಜನರಿಗೆ ಗೊತ್ತು ಎಂದು ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ಮೈಸೂರು- ಬೆಂಗಳೂರು ಹೈವೆ ವಿಚಾರದಲ್ಲಿ ಮೈಸೂರು ಸಂಸದ ಬುರುಡೆ ಬಿಡುತ್ತಾರೆಂಬ ಸಿಎಂ ಹೇಳಿಕೆಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ರಸ್ತೆಯಲ್ಲಿ ನೀರು ತುಂಬಿದ್ದಾಗ, ಅಂಡರ್ ಪಾಸ್ ನಲ್ಲಿ ನೀರು ತುಂಬಿದಾಗ ಬೈಯ್ದಿದ್ದು ಯಾರನ್ನಾ? ಆ ಸಮಸ್ಯೆ ಪರಿಹರಿಸಿದ್ದು ಯಾರು? ರಸ್ತೆಯಲ್ಲಿ ಅಪಘಾತ ಹೆಚ್ಚಾದಾಗ ಬೈಯ್ದಿದ್ದು ಯಾರನ್ನ? ಆ ಸಮಸ್ಯೆ ಬಗೆಹರಿಸಿದ್ದು ಯಾರು? ಬೈಯ್ದಿದ್ದು ಪ್ರತಾಪ್ ಸಿಂಹನನ್ನೇ. ಸಮಸ್ಯೆ ಪರಿಹರಿಸಿದ್ದು ಪ್ರತಾಪ್ ಸಿಂಹನೇ ಎಂದರು.

ಸಮಸ್ಯೆ ಆದಾಗ ಸಿದ್ದರಾಮಯ್ಯ, ಮಹದೇವಪ್ಪ ಆಗ ಎಲ್ಲಿ ಹೋಗಿದ್ದರು. 8500 ಸಾವಿರ ಕೋಟಿ ರೂ. ಪ್ರಾಜೆಕ್ಟ್ ಇದು. ಈ ಪ್ರಾಜೆಕ್ಟ್ ಗೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ 8 ರೂಪಾಯಿ ಕೊಟ್ಟಿದ್ದರೆ ಸಿದ್ದರಾಮಯ್ಯ- ಮಹದೇವಪ್ಪ ಜೋಡಿ ರಸ್ತೆ ಅಂತಾ ಬೇಕಾದರೆ ಇಟ್ಟು ಬಿಡೋಣಾ. ಇದು ನನ್ನ ರಸ್ತೆಯಲ್ಲ. ಮೋದಿ ಅವರ ರಸ್ತೆ. ನಾನು ಒಬ್ಬ ಮೇಸ್ತ್ರಿ, ಮೋದಿ ಅವರ ಹೈವೆ ಇದು. ನಾನು ಮೋದಿ ಹೇಳಿದ ಕೆಲಸ ಮಾಡುವ ಮೇಸ್ತ್ರಿ ಎಂದು ಅವರು ಹೇಳಿದರು. ಸಿಎಂ ಆದವರು ಪದ ಪ್ರಯೋಗ ಮಾಡುವಾಗ ಎಚ್ಚರವಹಿಸಬೇಕು. ಎಲ್ಲರನ್ನು ತಾತ್ಸರದಿಂದ ಮಾತಾಡುವುದು ನಿಲ್ಲಿಸಿ. ಸಾಯೋವರೆಗೂ ನಾನು ಪಾಲಿಟಿಕ್ಸ್ ಮಾಡಲು ಬಂದಿಲ್ಲ. ಸಾಯೋವರೆಗೂ ಪಾಲಿಟಿಕ್ಸ್ ಮಾಡುವವರಿಗೆ ಹೇಳಿ ಕೊಳ್ಳಲು ಏನೂ ಇಲ್ಲದೆ ಇದ್ದಾಗ ಈ ರೀತಿ ಕ್ರೆಡಿಟ್ ಪಾಲಿಟಿಕ್ಸ್ ಶುರುವಾಗುತ್ತದೆ ಎಂದು ಅವರು ಕುಟುಕಿದರು.

ಹಿಂದುಗಳೇ ದಯವಿಟ್ಟು ಮೂರು ಮಕ್ಕಳು ಮಾಡಿಕೊಳ್ಳಿ: ಕಲ್ಲಡ್ಕ ಪ್ರಭಾಕರ್ ಭಟ್ ಸಲಹೆ

ಹೋಲಿಕೆ ಮಾಡಿಕೊಳ್ಳಬೇಡಿ: ಸಿದ್ದರಾಮಯ್ಯ ಐಷಾರಾಮಿ ಜೆಟ್ ನಲ್ಲಿ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳಲು ಸಿಎಂ ಈ ವಿಚಾರದಲ್ಲಿ ಪ್ರಧಾನಿಯನ್ನು ಎಳೆದು ತಂದಿದ್ದಾರೆ. ಪ್ರಧಾನಿ ಏರ್ ಫೋರ್ಸ್ ಓನ್ ನಲ್ಲಿ, ಅದು ಸರ್ಕಾರರದ ವಿಮಾನದಲ್ಲೇ ಓಡಾಡುತ್ತಾರೆ. ಖಾಸಗಿ ಜೆಟ್ ನಲ್ಲಿ ತಮ್ಮ ಪಟಾಲಂ, ಛೇಲಾ, ದುಡ್ಡು ಕೊಡುವವರ ಜೊತೆ ಪ್ರಧಾನಿ ಓಡಾಡುವುದಿಲ್ಲ. ದೇಶಕ್ಕೆ ಇರೋದು ಒಬ್ಬರೇ ಪ್ರಧಾನಿ. ದೇಶದಲ್ಲಿ 29 ಜನ ಸಿಎಂ ಇದ್ದಾರೆ. ನೀವು ಸುಖಾ ಸುಮ್ಮನೆ ಪ್ರಧಾನಿಗೆ ನಿಮ್ಮನ್ನು ನೀವು ಹೋಲಿಕೆ ಮಾಡಿಕೊಳ್ಳಬೇಡಿ. ಈ ರೀತಿ ಹೋಲಿಕೆ ಮಾಡಿಕೊಳ್ಳುವುದ ಮೊದಲು ಬಿಡಿ ಎಂದು ಆಗ್ರಹಿಸಿದರು.

ಟಿಪ್ಪು ಹೆಸರು: ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇರಿಸುವ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಹಾರಾಜರು ತಮ್ಮ ಮನೆಯ ದುಡ್ಡು ತಂದು ಮೈಸೂರು ಅಭಿವೃದ್ಧಿ ಮಾಡಿಲ್ಲ ಅಂತಾ ಸಿದ್ದರಾಮಯ್ಯ ಹಿಂದೆ ಹೇಳಿದ್ದರು. ಆ ಹೇಳಿಕೆ ಬಂದಾಗಲೇ ನಮಗೆ ಗೊತ್ತಾಯಿತು ಸಿದ್ದರಾಮಯ್ಯ ಪ್ರೀತಿ, ಅಭಿಮಾನ ಗೌರವ ಟಿಪ್ಪುಗೆ ಹೊರತು ಮೈಸೂರು ಮಹಾರಾಜರಿಗೆ ಅಲ್ಲ ಅಂತಾ. ಸಿದ್ದರಾಮಯ್ಯ ಅವರ ನಿಷ್ಠೆ ಟಿಪ್ಪುಗೆ ಹೊರತು ಮಹಾರಾಜರಿಗೆ ಅಲ್ಲ. ಸಿದ್ದರಾಮಯ್ಯ ಅವರು ಬಂದಾಗ ಈ ರೀತಿ ಆಗುತ್ತದೆ ಅಂತನೇ ಮೈಸೂರು ಮಹಾರಾಜರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇರಿಸಲು ನಮ್ಮ ಸರ್ಕಾರ ತೀರ್ಮಾನಿಸಿ ಕ್ಯಾಬಿನೆಟ್ ಒಪ್ಪಿಗೆ ಪಡೆದಿದ್ದೇವು ಎಂದು ತಿಳಿಸಿದರು.

ಅಂಬರೀಷ್ ಸಹ ವಿಲನ್ ಇದ್ರು ನಂತ್ರ ಹೀರೋ ಆದ್ರು, ನಾನು ಹಾಗೇ ಆಗುತ್ತೇನೆ: ಯತ್ನಾಳ್‌

ಮಹಾರಾಜರು ಮನೆ ದುಡ್ಡು ತಂದು ಮೈಸೂರು ಅಭಿವೃದ್ಧಿ ಮಾಡಿಲ್ಲ ಅಂತಾ ಸಿದ್ದರಾಮಯ್ಯ ಹೇಳಿದ್ದರು. ಈಗ ಆ ಆಸ್ಪತ್ರೆ ನಾನು ಮಾಡಿದೆ. ಮನೆ ಯಜಮಾನಿಗೆ 2 ಸಾವಿರ ಕೊಟ್ಟೆ ಅದು ಇದು ಅಂತಾ ಹೇಳುತ್ತಾರೆ. ಇವರ ಮನೆಯಿಂದ ದುಡ್ಡು ತಂದು ಕೊಡುತ್ತೀದ್ದಾರಾ ಅಂತಾ ನಾವು ಕೇಳಿದರೆ ಹೇಗಿರುತ್ತೆ ಹೇಳಿ ಎಂದು ಅವರು ಪ್ರಶ್ನಿಸಿದರು. ಹಿಜಾಬ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಹಿಂದೂ - ಮುಸ್ಲಿಂ ವಿಚಾರ ಅಲ್ಲ. ಸಮವಸ್ತ್ರ ಸಂಹಿತೆ ಅಂತಾ ಇರುತ್ತದೆ. ಅದು ಪಾಲನೆ ಆಗಬೇಕು ಅಷ್ಟೆ. ಇದನ್ನು ಸಿಎಂ ಗಮನಿಸಲಿ ಎಂದರು.

Follow Us:
Download App:
  • android
  • ios