ಈಗ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವುದು ಕೇವಲ ಬಡಾಯಿ ಸರ್ಕಾರ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸಿದ್ದಾರೆ. 

ಕಲಬುರಗಿ (ಮಾ.06): ಈಗ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವುದು ಕೇವಲ ಬಡಾಯಿ ಸರ್ಕಾರ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆಗಿರುವ ಅಭಿವೃದ್ಧಿ ಶೂನ್ಯ. ಅಸಮರ್ಥ ಹಾಗೂ ಬೆಲೆ ಏರಿಕೆಯ ಸರ್ಕಾರ ಇದಾಗಿದೆ ಎಂದರು. ಇದೊಂದು ಅಸಮರ್ಥ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 3400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 50 ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. 1100 ನವಜಾತ ಶಿಶುಗಳು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿವೆ. 12 ಕಂಟ್ರ್ಯಾಕ್ಟರ್‌ಗಳು ಬಿಲ್ ಮಾಡಿಲ್ಲ ಎಂದು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ಈ ಸರ್ಕಾರದಿಂದ ನೀರಾವರಿಗೆ ನಯಾಪೈಸೆ ಹಣ ಬಿಡುಗಡೆಯಾಗಿಲ್ಲ. ಯೂಕೆಪಿ 2ನೇ ನ್ಯಾಯಾಧಿಕರಣದ ತೀರ್ಪು ಹೊರಬಿದ್ದರೂ ಹಣ ಬಿಡುಗಡೆ ಮಾಡಿ ಕೃಷ್ಣಾ ನೀರಿನ ಸದ್ಬಳಕೆಗೆ ಮುಂದಾಗುತ್ತಿಲ್ಲ. ತಾವು ನೀರಾವರಿ ಸಚಿವರಾಗಿದ್ದಾಗ ಯೂಕೆಪಿಗೆ ಏನೆಲ್ಲಾ ಯೋಜನೆ ರೂಪಿಸಿದ್ದೆ ಎಂಬುದನ್ನು ವಿವರಿಸಿದರು.

ಯಾದಗಿರಿಯಲ್ಲಿ ಕಬ್ಬಿಣ ಬುಟ್ಟಿಯಲ್ಲೇ ಕುಳಿತು ಜಳಕ ಮಾಡಿ ಉಳಿದ ನೀರಲ್ಲಿ ಪಾತ್ರ ತೊಳೆಯುತ್ತಾರೆಂಬ ಕನ್ನಡಪ್ರಭ ವರದಿ ಉಲ್ಲೇಖಿಸುತ್ತ ಜನರಿಗೆ ಈ ಸರ್ಕಾರದಿಂದ ಕುಡಿಯಲು ನೀರು ಸಹ ಕೊಡಲು ಆಗಿಲ್ಲ, ಹೀಗಾಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅತ್ಯಂತ ಕೆಟ್ಟ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ ಎಂದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬರೀ ಭಾಷಣ ಮಾಡುತ್ತಾರೆ. ಆದರೆ ಇನ್ನೊಂದೆಡೆ ಎಲ್ಲ ವಸ್ತುಗಳ ದರ ಹೆಚ್ಚಾಗಿ ಜನರು ಪರದಾಡುತ್ತಿದ್ದಾರೆ ಎಂದು ಸಾಲು ಸಾಲು ಆರೋಪ ಮಾಡಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಎಸ್ಸಿ- ಎಸ್ಟಿ ಜನರ ಉದ್ಧಾರ ಮಾಡುವುದಾಗಿ ಹೇಳಿದ್ದರು. ಆದರೆ ಅವರು ನುಡಿದಂತೆ ನಡೆದಿಲ್ಲ. ಸಿಎಂ ಸಿದ್ದರಾಮಯ್ಯ ಬರೀ ಎಸ್ಸಿ-ಎಸ್ಟಿ ಜನರ ಮತ ಪಡೆಯಲು ಹುನ್ನಾರ ನಡೆಸುತ್ತಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಅಭಿವೃದ್ಧಿ ಕಾರ್ಯಗಳನ್ನು ಕೈ ಬಿಟ್ಟು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ: ಸಂಸದ ಗೋವಿಂದ ಕಾರಜೋಳ

ಕುರ್ಚಿ ಕಿತ್ತಾಟದಲ್ಲಿ ತಲ್ಲೀನ: ರಾಜ್ಯದಲ್ಲಿ ಒಂದು ವರ್ಗದ ದಲಿತರು ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕು ಎನ್ನುತ್ತಿದ್ದರೆ, ದಲಿತರ ಮತ್ತೊಂದು ವರ್ಗ ಪರಮೇಶ್ವರ್‌ ಮುಖ್ಯಮಂತ್ರಿ ಆಗಬೇಕು ಎನ್ನುತ್ತಿದೆ. ಈ ಬೆಳವಣಿಗೆ ಗಮನಿಸಿದರೆ ರಾಜ್ಯದಲ್ಲಿ ಆಡಳಿತ ನಿಷ್ಕ್ರಿಯವಾಗಿದೆ ಎಂಬುದು ಖಾತ್ರಿಯಾಗುತ್ತದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಟೀಕಿಸಿದರು. ಇದೇ ರೀತಿಯಾಗಿ ಪರಿಸ್ಥಿತಿ ಮುಂದುವರೆದರೆ ರಾಜ್ಯ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು. ಅದೇ ರೀತಿ ಬಿಜೆಪಿಯಲ್ಲೂ ಸಹ ಭಿನ್ನಾಭಿಪ್ರಾಯ ಮತ್ತು ಲೋಪದೋಷಗಳಿವೆ ಎಂದು ಒಪ್ಪಿಕೊಂಡ ಕಾರಜೋಳ, ಕಾಂಗ್ರೆಸ್ಸಿನವರು ವಿಧಾನಸೌಧದೊಳಗೆ ಕಿತ್ತಾಟ ಮಾಡುತ್ತಿದ್ದರೆ, ನಾವು ಊರಿನ ಹೊರಗೆ ಕಿತ್ತಾಟ ಮಾಡುತ್ತಿದ್ದೇವೆ ಎಂದರು. ಬಣ ಜಗಳದಲ್ಲೇ ತೊಗರಿ ಹೋರಾಟ ಹೊರಟು ಹೋಗಿದೆ ಎಂಬುದನ್ನು ಒಪ್ಪಿಕೊಂಡ ಕಾರಜೋಳ ಬರೋ ದಿನಗಳಲ್ಲಿ ಜನಪರ ಹೋರಾಟಗಳನ್ನು ಕೈಗೆತ್ತಿಕೊಳ್ಳೋದಾಗಿ ಹೇಳಿದರು.