ಬಿಜೆಪಿ ಖರೀದಿ ಮಾಡುತ್ತದೆಯೆಂದು ಹೇಳಲಾಗುತ್ತಿರುವ 55 ಕಾಂಗ್ರೆಸ್ ಶಾಸಕರ ಪಟ್ಟಿಯನ್ನು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಬಿಡುಗಡೆ ಮಾಡಲಿ ಎಂದು ಸಂಸದ ಗೋವಿಂದ ಕಾರಜೋಳ ತಿರುಗೇಟು ಕೊಟ್ಟಿದ್ದಾರೆ.
ಚಿತ್ರದುರ್ಗ (ಜು.15): ಬಿಜೆಪಿ ಖರೀದಿ ಮಾಡುತ್ತದೆಯೆಂದು ಹೇಳಲಾಗುತ್ತಿರುವ 55 ಕಾಂಗ್ರೆಸ್ ಶಾಸಕರ ಪಟ್ಟಿಯನ್ನು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಬಿಡುಗಡೆ ಮಾಡಲಿ ಎಂದು ಸಂಸದ ಗೋವಿಂದ ಕಾರಜೋಳ ತಿರುಗೇಟು ಕೊಟ್ಟಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 55 ಕಾಂಗ್ರೆಸ್ ಶಾಸಕರು ಮಾರಾಟಕ್ಕೆ ಸಿದ್ಧರಿದ್ದೇವೆ ಎಂಬ ಸಂದೇಶವನ್ನು ಶಾಸಕ ಕಾಶಪ್ಪನವರು ಹರಿಬಿಟ್ಟಿದ್ದು, ಅವರ ಪಟ್ಟಿಯನ್ನು ಬಿಡುಗಡೆ ಮಾಡಲಿ.
ಕುರಿ ಸಂತೆಯಲ್ಲಿ ಯೋಗ್ಯ ಕುರಿ ನೋಡಿ ಖರೀದಿ ನಡೆಯುತ್ತದೆ. ಸಾಮಾಜಿಕ ಕಳಕಳಿಯ ಕುರಿಯಿದ್ದರೆ ಖಂಡಿತಾ ಖರೀದಿಸುತ್ತೇವೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಶಾಸಕರು ಕ್ಷೇತ್ರಗಳಲ್ಲಿ ಸಂಸದರಿಗೆ ನೀಡಬೇಕಾದ ಪ್ರೊಟೋಕಾಲ್ ಪಾಲನೆ ಮಾಡುತ್ತಿಲ್ಲ. ಚಿತ್ರದುರ್ಗದಲ್ಲಿ ನನ್ನನ್ನು ಆಹ್ವಾನಿಸದೆ 168 ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ ಎಂದು ಸರ್ಕಾರದ ವಿರುದ್ಧ ಹರಿದಾಯ್ದರು.
ಸಿಎಂ ಕುರ್ಚಿಗೆ ಕಾಂಗ್ರೆಸ್‌ನಲ್ಲಿ 4 ಗುಂಪುಗಳ ಕಚ್ಚಾಟ: ಮುಖ್ಯಮಂತ್ರಿ ಆಗುವುದಕ್ಕೆಂದೇ ಕಾಂಗ್ರೆಸ್ ಪಕ್ಷದಲ್ಲಿ 4 ಗುಂಪುಗಳಾಗಿ ಶಾಸಕರು, ಸಂಸದರು ಪರಸ್ಪರ ಕಚ್ಚಾಡುತ್ತಿದ್ದಾರೆ. ಸರ್ಕಾರಿ ಕಚೇರಿಗಳು ಸಿದ್ದರಾಮಯ್ಯನ ವಸೂಲಿ ಕೇಂದ್ರಗಳಾಗಿವೆ ಎಂದು ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಹರಿಹಾಯ್ದರು. ಜನರ ಸೇವೆ, ರಾಜ್ಯದ ಅಭಿವೃದ್ಧಿ ಮಾಡಬೇಕೆಂಬುದೇ ಕಾಂಗ್ರೆಸ್‌ನವರಲ್ಲಿ ಇಲ್ಲ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಜನರಿಗೆ ಮೋಸ ಮಾಡಿ, ಜನರ ಮನಸ್ಸನ್ನು ಕದ್ದು ಅಧಿಕಾರಕ್ಕೆ ಬಂದವರು ಎಂದು ದೂರಿದರು.
ಸರ್ಕಾರಿ ಕಚೇರಿಗಳನ್ನೇ ವಸೂಲಿ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಹಣ ವಸೂಲಿಗೆ ರಿಟೇಲ್ ಶಾಪ್ ತರಹ ಅವುಗಳಲ್ಲಿ ಕೆಲಸ ಮಾಡಿಸುತ್ತಿದ್ದಾರೆ. ಭ್ರಷ್ಟಾಚಾರದ ರಿಟೇಲ್ ಶಾಪ್ ಇಟ್ಟಿರುವ ಸಿದ್ದರಾಮಯ್ಯ ಸರ್ಕಾರದಿಂದ ಜನ ಭ್ರಮನಿರಸನರಾಗಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಎಐಸಿಸಿ ಮುಖಂಡ ಸುರ್ಜೀವಾಲಾ ಕರ್ನಾಟಕಕ್ಕೆ ಬಂದು ಕಾಂಗ್ರೆಸ್‌ನ ಸಚಿವರು, ಶಾಸಕರು ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಸಿದ್ದರಾಮಯ್ಯಗೆ ಎಐಸಿಸಿ ಒಬಿಸಿ ಕಮಿಟಿ ಅಧ್ಯಕ್ಷರಾಗಿ ಮಾಡಿರುವುದು ಪ್ರಮೋಷನ್ ಆಗಿ ಅಲ್ಲ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯಗೆ ಕಿತ್ತು ಹಾಕಲು ಅಂತಹ ಹುದ್ದೆ ನೀಡಿದ್ದಾರಷ್ಟೆ ಎಂದು ಗೋವಿಂದ ಕಾರಜೋಳ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
