Ramanagara: ಜನ ನೋವಿನಲ್ಲಿದ್ದರೆ ಬಿಜೆಪಿ ಸಂಭ್ರಮಾಚರಣೆ ವಿಕೃತಿ: ಸಂಸದ ಡಿ.ಕೆ.ಸುರೇಶ್
ಒಂದು ಕಡೆ ಜನ ಸಾವು ನೋವಿನಿಂದ ನರಳುತ್ತಿದ್ದರೆ, ಮತ್ತೊಂದು ಕಡೆ ಜನಸ್ಪಂದನದ ಹೆಸರಿನಲ್ಲಿ ವೇದಿಕೆ ಮೇಲೆ ನೃತ್ಯಮಾಡಿ ಸಂಭ್ರಮಿಸುತ್ತಿರುವುದು ಬಿಜೆಪಿ ನಾಯಕರ ವಿಕೃತಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದರು.
ರಾಮನಗರ (ಸೆ.11): ಒಂದು ಕಡೆ ಜನ ಸಾವು ನೋವಿನಿಂದ ನರಳುತ್ತಿದ್ದರೆ, ಮತ್ತೊಂದು ಕಡೆ ಜನಸ್ಪಂದನದ ಹೆಸರಿನಲ್ಲಿ ವೇದಿಕೆ ಮೇಲೆ ನೃತ್ಯಮಾಡಿ ಸಂಭ್ರಮಿಸುತ್ತಿರುವುದು ಬಿಜೆಪಿ ನಾಯಕರ ವಿಕೃತಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದರು. ಮಳೆಯಿಂದ ಹಾನಿಗೊಂಡಿರುವ ಹರೀಸಂದ್ರ ಹಾಗೂ ಸುಗ್ಗನಹಳ್ಳಿ ಸೇತುವೆಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ನೋವಿನಲ್ಲಿರುವಾಗ ನೃತ್ಯಮಾಡಿ ಸಂತೋಷ ಪಡುವುದು ವಿಕೃತಿ ಅಲ್ಲದೆ ಮತ್ತೇನು. ಇದನ್ನು ರಾಜ್ಯದ ಜನರು ಗಮನಿಸಬೇಕು ಎಂದರು.
ರಾಜ್ಯದ ಎಲ್ಲಾ ಕಡೆ ಪ್ರವಾಹ ಆಗಿ ಸಾಕಷ್ಟು ಅನಾಹುತ ಆಗಿದೆ. ಮನೆ, ಜಮೀನುಗಳು ಮುಳುಗಿ ಹಲವೆಡೆ ಹಾನಿ ಸಂಭವಿಸಿದೆ. ಜನರು ನೆರೆಯಿಂದ ನರಳುತ್ತಿದ್ದಾರೆ. ಜನ ಬದುಕಲು ಹಾಗೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಂಭ್ರಮ ಪಡುವ ಕಾರ್ಯಕ್ರಮ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಜನರು ನೋವಿನಲ್ಲಿರುವಾಗ ಮಾಡಿರುವ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಆ ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥರು ವಿಶ್ಲೇಷಣೆ ಮಾಡಬೇಕು. ಅವರ ಸರ್ಕಾರದ ಯೋಗ್ಯತೆಯನ್ನು ತೋರಿಸಿದ್ದಾರೆ. ಇಂತಹ ಅಧಿಕಾರ ನೀಡುವ ಬದಲು ರಾಜಿನಾಮೆ ಕೊಟ್ಟು ತೊಲಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
Kanakapura; ತಾಯಿ ಆನೆ ನಿಧನ, ದನದ ಹಿಂಡಿನ ಜೊತೆ ಬಂದ ಅನಾಥವಾದ ಮರಿ ಆನೆ ರಕ್ಷಣೆ
ಪ್ರತಾಪ್ ಸಿಂಹ ಚರ್ಚೆಗೆ ಬರಲಿ: ಕೆರೆ ಹಾಗೂ ರಾಜಕಾಲುವೆ ಒತ್ತುವರಿಯಿಂದ ರಾಮನಗರದಲ್ಲಿ ಪ್ರವಾಹ ಉಂಟಾಯಿತು ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಸುರೇಶ್, ಮೈಸೂರು ಸಂಸದರು ದಯವಿಟ್ಟು ಮೈಸೂರು ಕೊಡಗಿನಲ್ಲಿ ಏನು ಮಾಡಬೇಕೋ ಅದನ್ನು ಮಾಡಲಿ.ಅನಾವಶ್ಯಕವಾಗಿ ಎಲ್ಲಾ ನಂದೆ ಎಂದು ಹೇಳುವುದು ಬೇಡ ಎಂದು ತಿರುಗೇಟು ನೀಡಿದರು. ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ವಿಚಾರದಲ್ಲಿ ನಿಮ್ಮದೇನಾದರು ಇದ್ದರೆ ಬನ್ನಿ, ನಾನು ಬರುತ್ತೇನೆ. ಎಲ್ಲಾ ವಿಚಾರಗಳನ್ನು ಜನರ ಮುಂದೆ ಇಡೋಣ. ಜನ ಕೇಳಿದ್ದಕ್ಕೆ ನಾವು, ನೀವು ಉತ್ತರ ಹೇಳೋಣ ಎಂದು ಸವಾಲು ಹಾಕಿದರು.
ಹೆದ್ದಾರಿಯಲ್ಲಿ ಎಲಿವೇಷನ್ ರೋಡ್ ಹಾಗೂ ಅದರ ಕೆಳಭಾಗದಲ್ಲೂ ನೀರು ನಿಂತಿದೆ. ತಿರುವುಗಳಲ್ಲಿ ಸರಿಯಾದ ಲೆವಲ… ನೀಡಿಲ್ಲ. ಲಾರಿ ಬಸ್ ಗಳು ರಸ್ತೆಗಳಲ್ಲೆ ಮಗುಚಿಕೊಳ್ಳುತ್ತಿವೆ. ಕಾಲುವೆ ಸರಿಯಾಗಿ ಮಾಡದೆ ಅವರಿಗೆ ಬೇಕಾದ ಜಾಗದಲ್ಲಿ ಅಂಡರ್ ಪಾಸ್ ಮಾಡಿದ್ದಾರೆ. ಗ್ರಾಮಗಳ ಚರಂಡಿ ಕೂಡ ಮುಚ್ವಿದ್ದಾರೆ. ಮಳೆಯಿಂದ ಸಾಕಷ್ಟುನಷ್ಟಆಗಿದೆ.ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಎಲ್ಲೆಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆದಿದೆಯೋ ಅದನ್ನು ಆದಷ್ಟುಬೇಗ ಸರಿ ಮಾಡಬೇಕು ಎಂದು ಹೇಳಿದರು.
ಮಾಜಿ ಶಾಸಕ ಕೆ.ರಾಜು, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ಹುಸೇನ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜು, ನಗರ ಘಟಕದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜು, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ದೊಡ್ಡೀರಯ್ಯ, ಸುಗ್ಗನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸಿ.ರಾಮಯ್ಯ, ತಾಪಂ ಮಾಜಿ ಉಪಾಧ್ಯಕ್ಷ ಕೆ.ಎಂ.ನಾಗರಾಜು, ಕಾಂಗ್ರೆಸ್ ಮುಖಂಡರಾದ ಬಾಬು, ವಾಸು, ಬೈರೇಗೌಡ, ಉಮಾಶಂಕರ್, ಆಂಜನಪ್ಪ, ಸ್ವಾಮಿ, ಮಹದೇವ, ಪ್ರಕಾಶ್, ರವಿ, ಸಂದೀಪ್, ಅನಿಲ್, ಶಿವಣ್ಣ ಹಾಜರಿದ್ದರು.
ಪ್ರತಾಪ್ ಸಿಂಹರಿಂದ ಪಾಠ ಕಲಿಯಬೇಕಿಲ್ಲ: ಮೊದಲು ಕನಕಪುರ ರಸ್ತೆ ಸರಿಮಾಡಿಸಿ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ನನಗೆ ನಿಮ್ಮಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ನಿಮ್ಮ ನಾಯಕರ ಸಲಹೆಗಳ ಅವಶ್ಯಕತೆಯೂ ಇಲ್ಲ. ನನಗೆ ನನ್ನದೇ ಜನರ ಸಲಹೆ, ಮಾರ್ಗದರ್ಶನ ಇದೆ. ನಿಮ್ಮ ಅಡ್ವೈಸ್‌ಗಳು ನನಗೆ ಬೇಕಾಗಿಲ್ಲ. ದಶಪಥ ರಸ್ತೆಯ ಅವೈಜ್ಞಾನಿಕ ಕಾಮಗಾರಿಯನ್ನು ಸರಿಪಡಿಸಿ ಸಾಕು ಎಂದು ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದರು.
ಮಳೆಯಿಂದ 300 ಕೋಟಿ ರು.ಗೂ ಅಧಿಕ ಹಾನಿ: ಮಹಾ ಮಳೆಯಿಂದ ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನಲ್ಲಿ 300 ಕೋಟಿ ರುಪಾಯಿಗೂ ಹೆಚ್ಚಿನ ಹಾನಿಯಾಗಿದ್ದು, ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಒತ್ತಾಯಿಸಿದರು. ತಾಲೂಕಿನ ಸುಗ್ಗನಹಳ್ಳಿ ಮತ್ತು ಹರೀಸಂದ್ರ ಸೇತುವೆಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತ ಮಳೆ ಹಾನಿ ಅಂದಾಜನ್ನು ಸರಿಯಾಗಿ ಮಾಡಿಲ್ಲ. ಸೇತುವೆಗಳ ನಿರ್ಮಾಣಕ್ಕೆ 100 ಕೋಟಿ ರು.ಬೇಕಾಗುತ್ತದೆ. ನೂರಾರು ಕಿ.ಮೀ ರಸ್ತೆ ಹಾಳಾಗಿದೆ.
2 ಸಾವಿರಕ್ಕೂ ಹೆಚ್ಚು ಮನೆ ಹಾಗೂ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದೆಲ್ಲದರ ಕುರಿತು ಸರಿಯಾಗಿ ಸಮೀಕ್ಷೆ ನಡೆಸಬೇಕು ಎಂದರು. ರಾಮನಗರ ತಾಲೂಕಿನಲ್ಲಿ ಕಳೆದ 15-20 ದಿನಗಳಿಂದಲೂ ಭಾರೀ ಮಳೆಯಿಂದ ಪ್ರಮುಖ ಸಂಪರ್ಕ 3-4 ಸೇತುವೆಗಳು ಹಾನಿಯಾಗಿವೆ. ಪ್ರಮುಖವಾಗಿ ಬಾನಂದೂರು, ಸುಗ್ಗನಹಳ್ಳಿ, ಹರೀಸಂದ್ರ ಸೇತುವೆಗಳು ಜನರಿಂದ ಸಂಪರ್ಕ ಕಳೆದುಕೊಂಡಿವೆ. ಪ್ರಮುಖವಾಗಿ ಸೇತುವೆಗಳು ಜನರ ಸಂಪರ್ಕ ಕೊಂಡಿಯಾಗಿದ್ದವು ಸೇತುವೆ ಕೊಚ್ಚಿ ಹೋಗಿರುವ ಪರಿಣಾಮ ಶಾಲಾ ಕಾಲೇಜು ವಿದ್ಯಾರ್ಥಿಗಳು, ನೌಕರರು, ಉದ್ಯೋಗಕ್ಕೆ ಹೋಗುವ ಮಹಿಳೆಯರಿಗೆ ರಸ್ತೆ ಸಂಪರ್ಕ ಇಲ್ಲದಂತಾಗಿದೆ.
Ramanagara: ಸುಗ್ಗನಹಳ್ಳಿ ಸೇತುವೆ, ಭಕ್ಷಿ ಕೆರೆ ವೀಕ್ಷಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ
ಇದರಿಂದ ಈ ಭಾಗದ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ರೈತಾಪಿ ವರ್ಗ ಹಾಲು ಡೇರಿಗೆ ಹಾಕಲು ತೊಂದರೆ ಉಂಟಾಗಿದೆ. ಜಿಲ್ಲಾಡಳಿತ ಕೂಡಲೇ ಸೇತುವೆ ಹಾನಿಯಾಗಿರುವ ಸ್ಥಳಗಳಲ್ಲಿ ಜನರ ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ವ್ಯವಸ್ಥೆ ಕಲ್ಪಿಸುವಲ್ಲಿ ಅಧಿಕಾರಿಗಳು, ಸರ್ಕಾರ ಬೇಜವಾಬ್ದಾರಿ ತೋರುತ್ತಿದೆ ಎಂದು ಡಿ.ಕೆ. ಸುರೇಶ್ ಕಿಡಿಕಾರಿದರು. ಲೋಕೋಪಯೋಗಿ ಅಧಿಕಾರಿಗಳನ್ನು ಕೇಳಿದರೆ ಸೇತುವೆ ನಮಗೆ ಬರುವುದಿಲ್ಲ ಎನ್ನುತ್ತಾರೆ ಇದು ಸರ್ಕಾರದ ಬೇಜವಾಬ್ದಾರಿಯಾಗಿದೆ ಆದಷ್ಟುಬೇಗ ಜಿಲ್ಲಾಧಿಕಾರಿಗಳು ತ್ವರಿತವಾಗಿ ಇಲ್ಲಿನ ಈ ಭಾಗದ ಜನರಿಗೆ ಸಂಪರ್ಕ ಕಲ್ಪಿಸಲು ಮುಂದಾಗಬೇಕಿದೆ ಈ ಬಗ್ಗೆ ಮುಖ್ಯಮಂತ್ರಿಯವರಲ್ಲಿ ಮಾತನಾಡುತ್ತೇನೆ ಶೀಘ್ರದಲ್ಲೇ ಜನರ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದರು.