ಕೇಂದ್ರ ಸರ್ಕಾರ ತೆರಿಗೆ ಹಣ ವಾಪಸ್ ಕೊಟ್ರೆ ಮಹಿಳೆಯರಿಗೆ 4 ಸಾವಿರ: ಸಂಸದ ಡಿ.ಕೆ.ಸುರೇಶ್

ನಮ್ಮ ತೆರಿಗೆ ಹಣವನ್ನು ನಮಗೆ ಕೊಡಿ ಎಂದು ನಾನು ಕೇಳಿದರೆ ನನ್ನನ್ನು ವಿಲನ್ ರೀತಿ ನೋಡ್ತೀರಾ? ನೀವುಗಳು ತೆರಿಗೆ ಹಣ ವಾಪಸ್ ಕೊಟ್ಟಿದ್ದೇ ಆದರೆ ಮಹಿಳೆಯರಿಗೆ ಈಗಿರುವ ಮಾಸಿಕ ಎರಡು ಸಾವಿರದ ಜೊತೆಗೆ ಮತ್ತೆರೆಡು ಸಾವಿರ ರುಪಾಯಿ ಸೇರಿಸಿ ಕೊಡುತ್ತೇವೆ ಎಂದು ಸಂಸದ ಡಿ.ಕೆ.ಸುರೇಶ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. 
 

MP DK Suresh Slams On Central Govt At Ramanagara gvd

ಕುದೂರು (ಫೆ.18): ನಮ್ಮ ತೆರಿಗೆ ಹಣವನ್ನು ನಮಗೆ ಕೊಡಿ ಎಂದು ನಾನು ಕೇಳಿದರೆ ನನ್ನನ್ನು ವಿಲನ್ ರೀತಿ ನೋಡ್ತೀರಾ? ನೀವುಗಳು ತೆರಿಗೆ ಹಣ ವಾಪಸ್ ಕೊಟ್ಟಿದ್ದೇ ಆದರೆ ಮಹಿಳೆಯರಿಗೆ ಈಗಿರುವ ಮಾಸಿಕ ಎರಡು ಸಾವಿರದ ಜೊತೆಗೆ ಮತ್ತೆರೆಡು ಸಾವಿರ ರುಪಾಯಿ ಸೇರಿಸಿ ಕೊಡುತ್ತೇವೆ ಎಂದು ಸಂಸದ ಡಿ.ಕೆ.ಸುರೇಶ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಗ್ರಾಮದಲ್ಲಿ ಕಾಂಗ್ರೆಸ್ ಏರ್ಪಡಿಸಿದ್ದ ಸೋಲೂರು, ತಿಪ್ಪಸಂದ್ರ, ಕುದೂರು ಹೋಬಳಿಗಳ ಗೃಹಲಕ್ಷ್ಮಿ ಯೋಜನಾ ಫಲಾನುಭವಿಗಳ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ನಮ್ಮ ರಾಜ್ಯದ ತೆರಿಗೆ ಹಣವನ್ನು ಉತ್ತರಪ್ರದೇಶ, ಬಿಹಾರ, ಒರಿಸ್ಸಾಗೆ ತೆಗೆದುಕೊಂಡು ಹೋದರೆ ನಮ್ಮಗಳ ಗತಿಯೇನು? ನಮ್ಮ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದಾಗಿ ಮಹಿಳೆಯರು ಗಂಡಂದಿರಿಗೆ ಊಟ ಹಾಕದೆ ತಿರುಗಾಡುತ್ತಾರೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಟೀಕಿಸಿದರು. ಆದರೆ ಇದುವರೆಗೂ ಯಾವೊಬ್ಬ ಗಂಡಸು ನನ್ನ ಹೆಂಡತಿ ನನಗೆ ಊಟ ಹಾಕುತ್ತಿಲ್ಲ ಎಂದು ಪೊಲೀಸ್ ಠಾಣೆಗೆ ದೂರು ಕೊಟ್ಟ ಉದಾಹರಣೆ ಇಲ್ಲ ಎಂದರು.

ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ ಫೀನಿಕ್ಸ್‌ನಂತೆ ಎದ್ದುಬರಲಿದೆ: ಮಾಜಿ ಸಚಿವ ರಮಾನಾಥ ರೈ

ದಿನಕ್ಕೆ 30 ಲಕ್ಷ ಮಹಿಳೆಯರ ಪ್ರಯಾಣ: ಬಡವರಿಗೆ ಹಣ ನೀಡಿದರೆ ಸರ್ಕಾರ ದಿವಾಳಿಯಾಗುತ್ತೇನ್ರಿ? ರಾಜ್ಯದ ಹೆಣ್ಣು ಮಕ್ಕಳಿಗೆ ಹಣ ಹಂಚಿದರೆ ಸರ್ಕಾರ ಮುಳುಗಿ ಹೋಗುತ್ತದೆಯಾ? ಶ್ರೀಮಂತ ಉದ್ಯಮಿಗಳಿಗೆ 17 ಲಕ್ಷ ಕೋಟಿ ಸಾಲ ನೀಡಿ ಅದನ್ನು ಮನ್ನಾ ಮಾಡಿದ್ದೀರಿ. ಆಗ ಸರ್ಕಾರ ದಿವಾಳಿಯಾಗತ್ತೆ ಅನಿಸಲಿಲ್ಲವೇ? ಎಂದು ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದರು. ಶಕ್ತಿ ಯೋಜನೆಯಡಿ ಪ್ರತಿನಿತ್ಯ 30 ಲಕ್ಷ ಜನ ಪ್ರಯಾಣ ಮಾಡುತ್ತಿದ್ದಾರೆ. ಇದುವರೆಗೂ 200 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. 

ಮಾಗಡಿ ತಾಲಕಿನ 65 ಸಾವಿರ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದೇವೆ. ನಮಗೆ ಮತ ಹಾಕದವರೂ ಮತ್ತು ನಮ್ಮನ್ನು ನಿತ್ಯ ಬಯ್ಯುವವರೂ ಕೂಡಾ ಉಚಿತ ಸೇವೆ ಪಡೆಯುತ್ತಿದ್ದಾರೆಂದರು. 40 ಪರ್ಸೆಂಟ್ ಹಣ ಪಡೆದು ಆಡಳಿತ ಮಾಡಿದ ಬಿಜೆಪಿ ಸರ್ಕಾರ ಈಗ ನಮ್ಮ ಯೋಜನೆ ಬಗ್ಗೆ ಹೊಟ್ಟೆ ಉರಿ ಪಡ್ತಾ ಇದ್ದೀರಾ? ನಾವು ಆ ಹಣವನ್ನು ಉಳಿಸಿ ಜನರಿಗೆ ಗ್ಯಾರಂಟಿ ಯೋಜನೆ ಮೂಲಕ ಹಣ ತಲುಪಿಸುತ್ತಿದ್ದೇವೆ. ಲಿಂಗಾಯತರು, ವಕ್ಕಲಿಗರೂ ಕೂಡಾ ಈ ಫಲಾನುಭವಿಗಳನ್ನು ಪಡೆಯುತ್ತಿದ್ದಾರೆ. ಯಾರಿಗೂ ಬೇಧವಿಲ್ಲದೆ ವಿತರಿಸುತ್ತಿದ್ದೇವೆ ಎಂದು ಹೇಳಿದರು.

ಡಿ.ಕೆ.ಸುರೇಶ್ ಆಡಿದ ಮಾತಿನಲ್ಲಿ ತಪ್ಪೇನಿದೆ?: ಶಾಸಕ ಬಾಲಕೃಷ್ಣ ಮಾತನಾಡಿ, ಉಚಿತ ಯೋಜನೆಗಳನ್ನು ಪಡೆದುಕೊಂಡಿದ್ದೀರಿ ನಮ್ಮ ಪಕ್ಷಕ್ಕೆ ಮತ ಹಾಕಿ. ಇಲ್ಲದೇ ಹೋದರೆ ಗ್ಯಾರಂಟಿ ಯೋಜನೆ ರದ್ದಾಗಬೇಕು ಅಲ್ಲವಾ? ಎಂದು ನಾನು ಕೇಳಿದ ಪ್ರಶ್ನೆಗೆ ಏನೋ ನಾನು ಮಹಾ ತಪ್ಪು ಮಾತಾಡಿದ್ದೇನೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಯ್ತು. ನಾನು ಕೇಳಿದ್ದರಲ್ಲಿ ತಪ್ಪೇನಿತ್ತು ಎಂದು ಪ್ರಶ್ನಿಸಿದರು. ಮೊದಲೆಲ್ಲಾ ಧರ್ಮಸ್ಥಳಕ್ಕೆ ಕೆಲವು ಪಕ್ಷದ ಮುಖಂಡರು ಬಸ್ ಮಾಡಿ ಮಹಿಳೆಯರನ್ನು ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ದೇವರ ಬಳಿ ಪ್ರಮಾಣ ಮಾಡಿಸಿ ನಮಗೇ ಮತ ಹಾಕಬೇಕೆಂದು ಹೇಳಿಸುತ್ತಿದ್ದರು. ಆದರೆ ಶಕ್ತಿಯೋಜನೆ ಜಾರಿಯಾದಾಗಿನಿಂದ ಇಂತಹ ಆಣೆ ಪ್ರಮಾಣಗಳ ನಾಟಕ ನಿಂತು ಹೋಯಿತು ಎಂದು ಹೇಳಿದರು.

ನಮ್ಮ ತೆರಿಗೆ ಹಣದ ಪಾಲು ನಮ್ಮ ರಾಜ್ಯಕ್ಕೆ ಸರಿಯಾಗಿ ಕೊಡದೆ ಇದ್ದಾಗ ದಕ್ಷಿಣ ಭಾರತಕ್ಕೆ ಮಲತಾಯಿ ಧೋರಣೆ ಮಾಡುತ್ತಿದ್ದೀರಿ. ಆಗ ನಮ್ಮದೇ ದೇಶ ಮಾಡಿ ಎಂದು ಆಕ್ರೋಶಗೊಂಡು ಡಿ.ಕೆ.ಸುರೇಶ್ ಅವರು ಕೇಳಿದ್ದರಲ್ಲಿ ತಪ್ಪೇನಿದೆ. ಅವರು ನಮ್ಮ ರಾಜ್ಯದ ಹಿತದೃಷ್ಟಿಯಿಂದ ಹಾಗೆ ಕೇಳಿದ್ದಾರೆ ಎಂದು ಹೇಳಿದರು. ಕೆಪಿಸಿಸಿ ವಕ್ತಾರ ನಿಕೇತನ್ ರಾಜ್ ಮೌರ್ಯ ಮಾತನಾಡಿ, ಕಾಂಗ್ರೆಸ್ಸಿನ ಎಲ್ಲಾ ಭಾಗ್ಯಗಳ ಫಲಾನುಭವವನ್ನು ತಾಯಂದಿರು ಪಡೆದಿದ್ದೀರಿ. ಈಗ ಅದರ ಋಣ ತೀರಿಸಲು ಕಾಂಗ್ರೆಸ್ಸಿಗೆ ಮತ ಹಾಕಬೇಕು. 15 ಲಕ್ಷ ನೀಡುತ್ತೇನೆ ಎಂದ ಮೋದಿಯವರ ಮಾತುಗಳನ್ನು ನಂಬಿದ್ದಿರಿ. 

ರಾಹುಲ್ ಗಾಂಧಿಗೆ ತಿಳಿವಳಿಕೆ ಬರೋದಿಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಆದರೆ ಆ ಹಣ ನಿಮ್ಮ ಬ್ಯಾಂಕಿನ ಅಕೌಂಟಿಗೆ ಬರಲಿಲ್ಲ. ಆದರೆ ನಮ್ಮ ಸರ್ಕಾರ ಮಾತು ಕೊಟ್ಟಂತೆ ಪ್ರತಿ ತಿಂಗಳು 2ಸಾವಿರ ನಿಮ್ಮ ಅಕೌಂಟಿಗೆ ಹಾಕುತ್ತಿದ್ದೇವೆ ಎಂದು ಹೇಳಿದರು. ಕುಸುಮಾ ಹನುಮಂತರಾಜು, ಸುಧೀರ್ ಕುಮಾರ್ ಮಳಲಿ, ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ, ಕಲ್ಪನಾಶಿವಣ್ಣ, ಸಮಾಜ ಸೇವಕಿ ಅಕ್ಕಯ್ಯಪದ್ಮಶಾಲಿ ಮಾತನಾಡಿದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸುರೇಶ್, ಚಿಕ್ಕಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶಿವಪ್ರಸಾದ್, ಜಿಪಂ ಮಾಜಿ ಅಧ್ಯಕ್ಷ ಅಶೋಕ್, ಕುದೂರು ಗ್ರಾಪಂ ಉಪಾಧ್ಯಕ್ಷೆ ರಮ್ಯಜ್ಯೋತಿ, ಸಂಧ್ಯ, ಮಂಜೇಶ್ ಕುಮಾರ್, ಚಂದ್ರಶೇಖರ್, ಯತೀಶ್, ಹೊನ್ನಪ್ಪ, ಶಶಾಂಕ್, ವಿನಯ್ ಗೌಡ, ಲೋಕೇಶ್, ರೇಖಾ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios