ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಫೀನಿಕ್ಸ್‌ನಂತೆ ಎದ್ದುಬರಲಿದೆ: ಮಾಜಿ ಸಚಿವ ರಮಾನಾಥ ರೈ
ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಫೀನಿಕ್ಸ್‌ನಂತೆ ಹೊರಬರಲಿದೆ. ಅದಕ್ಕೆ ಫೆ.17ರಂದು ಮಂಗಳೂರಿನ ಅಡ್ಯಾರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಪೂರಕವಾಗಲಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಮಂಗಳೂರು (ಫೆ.17): ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಫೀನಿಕ್ಸ್‌ನಂತೆ ಹೊರಬರಲಿದೆ. ಅದಕ್ಕೆ ಫೆ.17ರಂದು ಮಂಗಳೂರಿನ ಅಡ್ಯಾರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಪೂರಕವಾಗಲಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಜಿಲ್ಲೆಯನ್ನು ಈಗ ಮತೀಯವಾದಿಗಳ ಪ್ರಯೋಗಶಾಲೆಯಾಗಿ ಮಾರ್ಪಡಿಸಿದ್ದರೂ ಕಳೆದ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದೇವೆ. ಈ ಸಮಾವೇಶದ ಮೂಲಕ ಮತ್ತೊಮ್ಮೆ ಜಿಲ್ಲೆಯಲ್ಲಿ ಕೈ ಬಲವಾಗಲಿದೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಎಷ್ಟೇ ತೊಂದರೆ ಆದರೂ ಸಂಘ ಪರಿವಾರ ಜತೆ ನಿರಂತರ ಹೋರಾಟ ಮಾಡಿ ಈಗಲೂ ಬಲಿಷ್ಟವಾಗಿದ್ದಾರೆ ಎಂದ ರಮಾನಾಥ ರೈ, ಈ ಸಮ್ಮೇಳನದಿಂದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಸೃಷ್ಟಿಯಾಗಿದೆ. ದೇಶಕ್ಕೆ ಸಂದೇಶ ನೀಡುವ ಸಮ್ಮೇಳನ ಆಗಲಿದೆ. ಅದಕ್ಕಾಗಿ ಪೂರಕ ಸಿದ್ಧತೆ ನಡೆಸಲಾಗಿದೆ, ಅತ್ಯಂತ ಯಶಸ್ವಿಯಾಗಿ ನಡೆಸಲಿದ್ದೇವೆ ಎಂದು ಹೇಳಿದರು. ಬಿಜೆಪಿಯವರು ‘ಮೋದಿ ಗ್ಯಾರಂಟಿ ನೀಡಿದರೆ ದೀಪಾವಳಿ, ಕಾಂಗ್ರೆಸ್ ಭರವಸೆ ನೀಡಿದರೆ ದಿವಾಳಿ’ ಎನ್ನುತ್ತಾರೆ. ಕಾಂಗ್ರೆಸ್‌ನ ಗ್ಯಾರಂಟಿ ಪರಿಣಾಮಕಾರಿ ಅನುಷ್ಠಾನ ಆಗಬಾರದು ಎಂದೂ ಪ್ರಯತ್ನಿಸಿದರು. ಆದರೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದ ರಾಜ್ಯದ ಕೋಟ್ಯಂತರ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಸಿದ್ದರಾಮಯ್ಯರಿಂದ 1 ಟ್ರಿಲಿಯನ್ ಆರ್ಥಿಕ ರಾಜ್ಯ ಮಾಡುವ ಪ್ರಯತ್ನ: ಸಚಿವ ಈಶ್ವರ ಖಂಡ್ರೆ
ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಫರ್ಝಾನಾ, ಪಿ.ವಿ. ಮೋಹನ್, ಮಮತಾ ಗಟ್ಟಿ, ಅಪ್ಪಿ, ಸತ್ಯನಾರಾಯಣ, ಗಫೂರ್, ಶಾಲೆಟ್ ಪಿಂಟೊ, ವಿಶ್ವಾಸ್‌ದಾಸ್, ಕೃಪಾ ಆಳ್ವ ಮತ್ತಿತರರಿದ್ದರು. ಹೋರಾಟದ ಛಾತಿ ಇರೋರಿಗೆ ಟಿಕೆಟ್ ನೀಡಿದರೆ ಗೆಲ್ತೇವೆ: ಮುಂದಿನ ಲೋಕಸಭೆ ಚುನಾವಣೆ ಸ್ಪರ್ಧೆಗೆ ಸಕ್ರಿಯರನ್ನು, ಹೋರಾಟದ ಛಾತಿ ಇರುರವವರನ್ನು ಗುರುತಿಸಿ ಟಿಕೆಟ್ ನೀಡಿದರೆ ಖಂಡಿತ ಗೆಲ್ಲಲಿದ್ದೇವೆ. ಪಕ್ಷದಲ್ಲಿ ಅಂತಹ ಸಮರ್ಥರು ತುಂಬ ಮಂದಿ ಇದ್ದಾರೆ ಎಂದ ರಮಾನಾಥ ರೈ, ನಾನು ಕಟ್ಟಾ ಕಾಂಗ್ರೆಸಿಗ, ಕಾಂಗ್ರೆಸ್ಸೇ ನನ್ನ ಧರ್ಮ. ರಾಜ್ಯದಲ್ಲಿ 9 ಬಾರಿ ಚುನಾವಣೆ ಸ್ಪರ್ಧಿಸುವ ಅವಕಾಶ ಪಡೆದ ಬೆರಳೆಣಿಕೆ ನಾಯಕರಲ್ಲಿ ನಾನೂ ಒಬ್ಬ. ಇದೀಗ ಚುನಾವಣೆ ಸೋತಿದ್ದರೂ ಸಕ್ರಿಯಯವಾಗಿಯೇ ಇದ್ದೇನೆ ಎಂದರು.