Asianet Suvarna News Asianet Suvarna News

ಕುಸುಮಾ ಸ್ಪರ್ಧೆಯಿಂದ ಕೈ ಪರ ಅಲೆ ಸೃಷ್ಟಿ: ಸಂಸದ ಡಿ.ಕೆ.ಸುರೇಶ್‌

ಹತಾಶೆಯಿಂದ ಡಿ.ಕೆ.ಬ್ರದರ್ಸ್‌ ಬಗ್ಗೆ ಬಿಜೆಪಿ ಟೀಕೆ| ಯಾರ ವರ್ಚಸ್ಸು ಏನು ಎಂದು ಜನ ತೀರ್ಮಾನಿಸುತ್ತಾರೆ: ಸಂಸದ ಸುರೇಶ್‌| ಮುಖ್ಯಮಂತ್ರಿ ಹುದ್ದೆಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಚುನಾವಣಾ ಪ್ರಚಾರದ ವೇಳೆ ಹೀಗೆ ಬಹಿರಂಗವಾಗಿ ಭರವಸೆ ನೀಡಿರುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ|  

MP D K Suresh Talks Over RR Nagar ByElection grg
Author
Bengaluru, First Published Nov 1, 2020, 9:04 AM IST

ಬೆಂಗಳೂರು(ನ.01): ಉಪ ಚುನಾವಣೆಗೆ ಸಜ್ಜಾಗಿರುವ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಅಕ್ಷರಶಃ ಡಿಕೆಶಿ ಸಹೋದರರು ಮತ್ತು ಮುನಿರತ್ನ ನಡುವಿನ ಕದನ ಕಣವೆಂದೇ ಬಿಂಬಿತವಾಗಿದೆ. ಶತಾಯಗತಾಯ ಕ್ಷೇತ್ರವನ್ನು ಕಾಂಗ್ರೆಸ್‌ನಲ್ಲೇ ಉಳಿಸಿಕೊಳ್ಳಲು ಡಿ.ಕೆ.ಸಹೋದರರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ತಮ್ಮ ಸಂಪೂರ್ಣ ಸಾಮರ್ಥ್ಯ ಪಣಕ್ಕಿಟ್ಟಿದ್ದಾರೆ. 

ಐಎಎಸ್‌ ಅಧಿಕಾರಿ ದಿವಂಗತ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅವರು ಅಭ್ಯರ್ಥಿಯಾಗಿದ್ದರೂ ಇಲ್ಲಿ ಹಣಾಹಣಿ ಇರುವುದು ಡಿ.ಕೆ.ಸಹೋದರರು ಹಾಗೂ ಮುನಿರತ್ನ ನಡುವೆಯೇ ಎನ್ನಲಾಗುತ್ತಿದೆ. ಇದಕ್ಕೆ ತಕ್ಕಂತೆ ಡಿ.ಕೆ.ಸುರೇಶ್‌ ಕ್ಷೇತ್ರದಲ್ಲಿ ಬೀಡು ಬಿಟ್ಟು ತಳಮಟ್ಟದ ಕಾರ್ಯತಂತ್ರಗಳ ಮೂಲಕ ಸ್ಟ್ರೀಟ್‌ ಫೈಟರ್‌ ಎನಿಸಿದ ಮುನಿರತ್ನಗೂ ಬೆವರು ಬರುವಂತೆ ಮಾಡಿದ್ದಾರೆ. ಸುರೇಶ್‌ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಇಲ್ಲಿ ಪೈಪೋಟಿ ಮುಗಿಲು ಮುಟ್ಟಿದೆ. ಆರೋಪ- ಪ್ರತ್ಯಾರೋಪ ತಾರತಕ್ಕೇರಿವೆ. ಗೆದ್ದರೆ ಸಚಿವನಾಗಿ ಕ್ಷೇತ್ರದ ಅಭಿವೃದ್ಧಿ ಹೆಚ್ಚಿಸುವೆ ಎನ್ನುವ, ದರ್ಶನ್‌ ಹವಾ ಸೃಷ್ಟಿಸುವ, ಕರೋನಾ ಕಾಲದಲ್ಲಿ ನೆರವಾಗಿದ್ದನ್ನು ಬಿಂಬಿಸುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಹಣಿಯಲು ಮಾಡಿಕೊಂಡಿರುವ ಸಿದ್ಧತೆಗಳೇನು? ಬಿಜೆಪಿ ಆರೋಪಗಳಿಗೆ ತಮ್ಮ ಪ್ರತ್ಯುತ್ತರವೇನು ಎಂಬ ಬಗ್ಗೆ ಸಂಸದ ಡಿ.ಕೆ.ಸುರೇಶ್‌ ಮುಕ್ತವಾಗಿ ಮಾತನಾಡಿದ್ದಾರೆ.

*ಡಿಕೆ ಸಹೋದರರ ಆಟ ಆರ್‌.ಆರ್‌.ನಗರದಲ್ಲಿ ನಡೆಯೋಲ್ಲ ಅಂತಾರಲ್ಲ ಸಚಿವ ಅಶೋಕ್‌?

ಅಧಿಕಾರ, ಹಣಕ್ಕಾಗಿ ತಮ್ಮದೇ ಪಕ್ಷದ ಸಕ್ರಿಯ ಕಾರ್ಯಕರ್ತರನ್ನು ರಾಜಕೀಯವಾಗಿ ಕತ್ತು ಹಿಸುಕಿ ಕೊಂದರು. ಬೇರೆ ಪಕ್ಷದಲ್ಲಿ ಬೆಳೆದವರನ್ನು ಖರೀದಿ ಮಾಡಿ ಕಣಕ್ಕೆ ಇಳಿಸಿದ್ದಾರೆ ಈ ಅಶೋಕ್‌ ಹಾಗೂ ಉಪ ಮುಖ್ಯಮಂತ್ರಿ ಅಶ್ವತ್ಥ್‌ನಾರಾಯಣ. ಕಾಂಗ್ರೆಸ್‌ ಕ್ಷೇತ್ರವಾದ ಆರ್‌.ಆರ್‌.ನಗರದಲ್ಲಿ ಮುನಿರತ್ನರನ್ನು ಖರೀದಿ ಮಾಡಿಬಿಟ್ಟರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಇಲ್ಲವಾಗಿಸಬಹುದು ಎಂದು ಭಾವಿಸಿದ್ದರು. ಆದರೆ, ಕುಸುಮಾ ಸ್ಪರ್ಧೆ ನಂತರ ಕಾಂಗ್ರೆಸ್‌ ಪರ ಅಲೆ ಸೃಷ್ಟಿಯಾಗಿರುವುದು ನೋಡಿ ಬಿಜೆಪಿಯವರಿಗೆ ಭಯ ಆರಂಭವಾಗಿದೆ. ಹೀಗಾಗಿ ಹತಾಶರಾಗಿ ಇಂತಹ ಮಾತುಗಳನ್ನಾಡುತ್ತಿದ್ದಾರೆ. ಅಷ್ಟೇ ಅಲ್ಲ ಸೋಲಿನ ಭಯದಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕರ ಪ್ರಚಾರಕ್ಕೆ ಅಡ್ಡಿ ಪಡಿಸುವ ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರನ್ನು ದೇಶದಲ್ಲೇ ಮಾದರಿ ನಗರ ಮಾಡಲು ಶಕ್ತಿ ಮೀರಿ ಪ್ರಯತ್ನ: ಸಿಎಂ

*ಕುಸುಮಾ ಸ್ಪರ್ಧೆ ನಾಮಕಾವಾಸ್ತೆ. ವರ್ಚಸ್ಸೇ ಇಲ್ಲದ ಅಭ್ಯರ್ಥಿ ಎನ್ನುತ್ತಾರಲ್ಲ?

ಮುನಿರತ್ನ ಅವರ ವರ್ಚಸ್ಸು ಏನು ಎಂದು ಹಾದಿ ಬೀದಿಯಲ್ಲಿ ಜನ ಮಾತನಾಡುತ್ತಿದ್ದಾರೆ. ಅವರ ಪಕ್ಷದಲ್ಲೇ ಒಬ್ಬ ಸಕ್ರೀಯ ಕಾರ್ಯಕರ್ತನನ್ನ ರಾಜಕೀಯವಾಗಿ ಕುತ್ತು ಹಿಸುಕಿ ಕೊಂದವರಿಗೆ ನಮ್ಮ ಪಕ್ಷದ ಅಭ್ಯರ್ಥಿ ಬಗ್ಗೆ ಮಾತನಾಡುವ ನೈತಿಕತೆ ಏನಿದೆ. ನಮ್ಮ ಪಕ್ಷದ ಅಭ್ಯರ್ಥಿ ಬಗ್ಗೆ ಮಾತನಾಡುವುದು ಬಿಟ್ಟು ಅವರ ಪಕ್ಷದ ಬಗ್ಗೆ ಅವರು ಮಾತನಾಡಲಿ. ಯಾರ ವರ್ಚಸ್ಸು ಏನು ಎಂದು ಜನ ತೀರ್ಮಾನ ಮಾಡುತ್ತಾರೆ.

*ಮುನಿರತ್ನ ಅವರ ಬಗ್ಗೆ ದೂರುತ್ತಿರಲ್ಲ. ಕಾಂಗ್ರೆಸ್‌ನಲ್ಲಿದ್ದಾಗ ಅವರ ವರ್ಚಸ್ಸು ಸರಿಯಿತ್ತೆ?

ಅವರು ನಿರ್ಮಾಪಕ ಆದರೂ ಕಥೆ ಕಟ್ಟಿ ಇನ್ನೊಬ್ಬರನ್ನು ನಂಬಿಸುವುದರಲ್ಲಿ ಅತ್ಯುತ್ತಮ ನಟ. ಯಾವ ರೀತಿ ಮೆಚ್ಚಿಸುತ್ತಾರೆ ಎಂದರೆ ನಾನು ಬಹಳ ಸಭ್ಯ, ಹಾಗೆ ಹೀಗೆ ಕೆಲಸ ಮಾಡುತ್ತಿದ್ದೇನೆ ಎಂದು ನಂಬಿಸುತ್ತಾರೆ. ಅವರು ಗುತ್ತಿಗೆದಾರರಾಗಿ ಲಾಭಕ್ಕಾಗಿ ರಾಜಕೀಯಕ್ಕೆ ಬಂದವರೇ ಹೊರತು ಸಮಾಜ ಸೇವೆಗಲ್ಲ. ಪ್ರತಿಯೊಂದನ್ನೂ ಅವರು ಗುತ್ತಿಗೆ ದೃಷ್ಟಿಕೋನದಲ್ಲೇ ನೋಡುತ್ತಾರೆ. ಹೊರಗಿನಿಂದ ಅವರು ಬಂದಿರುವುದೇ ಲಾಭ ಮಾಡಿಕೊಂಡು ಹೋಗುವುದಕ್ಕೋಸ್ಕರ.

ರಾರಾದಲ್ಲಿ ಫೈಟ್ ಇರೋದು ಮುನಿರತ್ನ VS ಡಿಕೆ ಸುರೇಶ್ ನಡುವೆಯಾ? ಕುಸುಮಾ ನೆಪ ಮಾತ್ರ?

*ಡಿ.ಕೆ.ಸುರೇಶ್‌ ಚುನಾವಣಾ ಅಕ್ರಮ ಮಾಡುವುದರಲ್ಲಿ ಎಕ್ಸಪರ್ಟ್‌. ಅವರು ಕ್ಷೇತ್ರಕ್ಕೆ ಕಾಲಿಡಬಾರದು ಎನ್ನುತ್ತಾರೆ ಬಿಜೆಪಿ ನಾಯಕಿ ಶೋಭ ಕರಂದ್ಲಾಜೆ?

ಶೋಭಾ ಕರಂದ್ಲಾಜೆ ಅವರು ಈ ಮಾತನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮತ್ತು ಅವರ ಪುತ್ರ ವಿಜಯೇಂದ್ರ ಅವರಿಗೆ ಹೇಳಬೇಕೇ ಹೊರತು ನನಗಲ್ಲ. ಶೋಭ ಯಾವ ಕಾರಣಕ್ಕೆ ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಈ ಹಿಂದೆ ಯಾರು ಮತಚೀಟಿಗಳನ್ನು ಸಂಗ್ರಹಿಸಿದ್ದರು ಎಂಬುದು ಜಗತ್ತಿಗೆ ಗೊತ್ತು. ಈಗಿನ ಚುನಾವಣೆಯಲ್ಲೂ ಯಾರು ಅದನ್ನು ಪುನರಾವರ್ತಿಸಿ ಮತ ಖರೀದಿ ನಡೆಸುತ್ತಿದ್ದಾರೆ ಎಂಬುದನ್ನು ಜನ ನೋಡುತ್ತಿದ್ದಾರೆ. ಹೀಗಿರುವಾಗ ನನ್ನ ಮೇಲೆ ದೂರುವುದರಲ್ಲಿ ಅರ್ಥವೇನಿದೆ?

*ಕ್ಷೇತ್ರದಲ್ಲಿ ದರ್ಶನ್‌ ಹವಾ ಜೋರಾಗಿದೆಯಂತೆ?

ಮುನಿರತ್ನ ನಿರ್ಮಾಪಕರಾಗಿರುವುದರಿಂದ ದರ್ಶನ್‌ ಅವರೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ. ಅದಕ್ಕಾಗಿ ಬಂದಿರಬಹದು. ನಮ್ಮ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರೇ ಸ್ಟಾರ್‌ ಪ್ರಚಾರಕರು. ನಾವು ರಾಜಕೀಯವಾಗಿ ಹೋರಾಟ ಮಾಡುತ್ತಿದ್ದೇವೆ. ಅವರು ಬೇರೆ ಬೇರೆ ರೀತಿ ಹೋರಾಟ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

*ನಿಮ್ಮ ಕಾರ್ಪೊರೇಟರ್‌ಗಳೂ ಕಾಂಗ್ರೆಸ್‌ ತೊರೆದಿದ್ದಾರೆ?

ನಾಯಕರು ಪಕ್ಷ ಬಿಟ್ಟಾಕ್ಷಣ ಕಾರ್ಯಕರ್ತರು ಬಿಟ್ಟು ಹೋಗುತ್ತಾರೆಂದಲ್ಲ. ಎಲ್ಲೋ ಕೆಲ ಆತ್ಮೀಯರು, ಅಧಿಕಾರದ ಆಸೆ, ಹಣದ ಆಸೆಗೆ ಹೋಗಿದ್ದಾರೆ. ಆಡಳಿತದಲ್ಲಿ ಬಿಜೆಪಿ ಸರ್ಕಾರ ಇದೆ. ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕೊಡಿಸುತ್ತೇನೆ, ಜೊತೆಗೆ ಕಾಮಗಾರಿಗಳ ಗುತ್ತಿಗೆ ಕೊಡಿಸುತ್ತೇನೆ ಎಂದು ಮುನಿರತ್ನ ಒಂದು 150 ಜನರಿಗೆ ಆಸೆ ತೋರಿಸಿದ್ದಾರೆ. ಅವರೆಲ್ಲಾ ನಂಬಿ ಆಸೆ, ಆಮಿಷಗಳಿಗೆ ಒಳಗಾಗಿ ಹೋಗಿದ್ದಾರೆ. ಅವರೆಲ್ಲರೂ ಮುಂದೆ ಪಶ್ಚಾತ್ತಾಪ ಪಡುತ್ತಾರೆ.

*ಪ್ರಬಲ ಪ್ರತಿಸ್ಪರ್ಧಿ ಮುನಿರತ್ನ. ಅವರನ್ನು ಮಣಿಸಲು ಕಾಂಗ್ರೆಸ್‌ ಕಾರ್ಯತಂತ್ರವೇನು?

ಬಿಜೆಪಿ ಸರ್ಕಾರ ಕಳೆದ ಒಂದೂವರೆ ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಕೋವಿಡ್‌ ಹೆಸರಲ್ಲಿ ಸರ್ಕಾರದ ಬೊಕ್ಕಸದ ಹಣ ಲೂಟಿ ಹೊಡೆದಿದೆ. ಇನ್ನು ಬಿಜೆಪಿ ಅಭ್ಯರ್ಥಿ ಮುನಿರತ್ನ ಹಣ ಅಧಿಕಾರಕ್ಕಾಗಿ ಕಾಂಗ್ರೆಸ್‌ಗೆ ದ್ರೋಹ ಬಗೆದು ಬಿಜೆಪಿ ಸೇರಿದ್ದಾರೆ. ಇದೆಲ್ಲವನ್ನೂ ಜನರ ಮುಂದಿಡುತ್ತಿದ್ದೇವೆ. ಮುನಿರತ್ನ ಇದುವರೆಗೂ ಸರ್ಕಾರದ ಹಣವನ್ನು ಒಬ್ಬ ಗುತ್ತಿಗೆದಾರನಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ನಾವು ಒಬ್ಬ ಅಭ್ಯರ್ಥಿಯಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸದ್ಬಳಕೆ ಮಾಡುವುದಾಗಿ ಹೇಳುತ್ತಿದ್ದೇವೆ. ಕ್ಷೇತ್ರದಲ್ಲಿ ಮುನಿರತ್ನ ಸೃಷ್ಟಿಸಿರುವ ಭಯದ ವಾತಾವರಣ ಮುಕ್ತಿಗೊಳಿಸುವುದಾಗಿ ಜನತೆಗೆ ಭರವಸೆ ನೀಡಿದ್ದೇವೆ. ಜನರು ಮುನಿರತ್ನಗೆ ಪಾಠ ಕಲಿಸುವುದು ನಿಶ್ಚಿತ.

*ಮುನಿರತ್ನ ಗೆದ್ದರೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರಲ್ಲ?

ಮುಖ್ಯಮಂತ್ರಿ ಹುದ್ದೆಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಚುನಾವಣಾ ಪ್ರಚಾರದ ವೇಳೆ ಹೀಗೆ ಬಹಿರಂಗವಾಗಿ ಭರವಸೆ ನೀಡಿರುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಹಾಗೂ ಮುಖ್ಯಮಂತ್ರಿಯಾಗುವಾಗ ಸಂವಿಧಾನ ಬದ್ಧವಾಗಿ ಮಾಡಿದ ಗೌಪ್ಯ ಪ್ರಮಾಣದ ಉಲ್ಲಂಘನೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ.
 

Follow Us:
Download App:
  • android
  • ios