ಬೆಂಗಳೂರು(ನ.01): ನಗರದ ಸರ್ವಾಂಗೀಣ ಅಭಿವೃದ್ಧಿ ನಮ್ಮ ಆದ್ಯತೆ. ಬೆಂಗಳೂರನ್ನು ದೇಶದಲ್ಲಿಯೇ ಮಾದರಿ ನಗರವನ್ನಾಗಿ ಮಾಡಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಶನಿವಾರ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಮೆಟ್ರೋ ಮತ್ತು ಸಬ್‌ ಅರ್ಬನ್‌ ರೈಲ್ವೆ ಯೋಜನೆಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಅನುಮೋದನೆ ಪಡೆಯಲಾಗಿದ್ದು, ಕಾಮಗಾರಿಗೆ ಚುರುಕು ನೀಡಲಾಗುವುದು. ಬೆಂಗಳೂರಿನಲ್ಲಿ ಮಳೆ ನೀರು ಮನೆಗಳಿಗೆ ನುಗ್ಗದಂತೆ ಶಾಶ್ವತ ಪರಿಹಾರ ಒದಗಿಸಲಾಗುವುದು. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಸಭೆ ನಡೆಸಿದ್ದೇನೆ. ಶೀಘ್ರ ಇದಕ್ಕೆ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಠೇವಣಿ ಉಳಿಸಿಕೊಳ್ಳಲು ಮಾತ್ರ ಕಾಂಗ್ರೆಸ್‌ ಹೋರಾಟ: ಸಚಿವ ಸೋಮಶೇಖರ್‌

ರಾಜರಾಜೇಶ್ವರಿ ನಗರ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ 820 ಕೋಟಿ ಅನುದಾನ ಒದಗಿಸಿದೆ. ಕೊರೋನಾ ವೇಳೆ ಹಣಕಾಸಿನ ತೊಂದರೆ ಇದ್ದರೂ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಿದೆ. ವಿರೋಧ ಪಕ್ಷಗಳು ಸರ್ಕಾರದ ಬಳಿ ಅಭಿವೃದ್ಧಿಗೆ ಹಣವೇ ಇಲ್ಲ, ಎಂದು ಆರೋಪ ಮಾಡುತ್ತಿದ್ದವು. ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡುವ ಕಾಲ ನಿಮಗೆ ಬಂದಿದೆ. ಪ್ರತಿಯೊಬ್ಬರು ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಕಂದಾಯ ಸಚಿವ ಆರ್‌.ಅಶೋಕ್‌ ಮಾತನಾಡಿ, ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದರಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಇನ್ನಷ್ಟು ಬಲ ಬರಲಿದೆ. 2009ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದಾಗಲೇ ಯಡಿಯೂರಪ್ಪ ಅವರು ಬೆಂಗಳೂರಿಗೆ ವಿಶೇಷ ಪ್ಯಾಕೇಜ್‌ ನೀಡಿದ್ದರು. ಯಡಿಯೂರಪ್ಪ ಅವರಿಂದ ಬೆಂಗಳೂರು ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸ ಜನರಲ್ಲಿದೆ ಎಂದರು.