ಬೆಂಗಳೂರು(ನ.07): ಕಾಂಗ್ರೆಸ್‌ನ ವಿರೋಧ ಪಕ್ಷದ ನಾಯಕರನ್ನು ಬದಲಿಸುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಹಗಲು ಕನಸು ಬಿದ್ದಿರಬೇಕು ಎಂದು ಸಂಸದ ಡಿ.ಕೆ. ಸುರೇಶ್‌ ತಿರುಗೇಟು ನೀಡಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರನ್ನು ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್‌ನ ಯಾರೊಬ್ಬರೂ ಹೇಳಿಕೆ ನೀಡಿಲ್ಲ. ಹೈಕಮಾಂಡ್‌ನಲ್ಲೂ ಈ ಬಗ್ಗೆ ಪ್ರಸ್ತಾಪವಾಗಿಲ್ಲ. ಅಂತಹ ಅನಿವಾರ್ಯತೆಯೂ ಸೃಷ್ಟಿಯಾಗಿಲ್ಲ. ಹೀಗಿದ್ದರೂ ಸಿದ್ದರಾಮಯ್ಯ ಅವರನ್ನು ಬದಲಿಸುತ್ತಾರೆ ಎಂದು ಹೇಳಿರುವ ಯಡಿಯೂರಪ್ಪ ಅವರು ಹಗಲು ಕನಸು ಕಂಡಿರಬೇಕು ಎಂದು ಲೇವಡಿ ಮಾಡಿದರು.

ಬಿಜೆಪಿ ನಾಯಕರು ಬಹಿರಂಗವಾಗಿಯೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬದಲಾಗುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಮೂಲಕ ಮುಖ್ಯಮಂತ್ರಿಗಳ ಬದಲಿಸುವ ಸುದ್ದಿ ಸುಳ್ಳಲ್ಲ ಎಂದು ಸಮರ್ಥನೆ ನೀಡಿದಂತಿದೆ. ಆದರೆ ಸಿದ್ದರಾಮಯ್ಯ ಅವರ ಬದಲಾವಣೆ ಮಾಡಲಾಗುತ್ತದೆ ಎಂದು ಒಬ್ಬ ಕಾಂಗ್ರೆಸ್‌ ಶಾಸಕರೂ ಮಾತನಾಡಿಲ್ಲ ಎಂದು ಹೇಳಿದರು.

ಸಂಸದ ಡಿ.ಕೆ.ಸುರೇಶ್ ವಿರುದ್ಧ ಆಕ್ರೋಶ : 'ಕಾಲ ಬಂದಾಗ ಉತ್ತರ ಕೊಡ್ತೀನಿ'

ಮುನಿರತ್ನ ವಿರುದ್ಧ ದಾಖಲೆ ಬಿಡುಗಡೆ ಮಾಡಲ್ಲ

ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಅಗತ್ಯವಾದರೆ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದೆ. ಇದೀಗ ಚುನಾವಣೆ ಮುಗಿದಿರುವುದರಿಂದ ಅದರ ಅಗತ್ಯವಿಲ್ಲ ಎಂದು ಡಿ.ಕೆ. ಸುರೇಶ್‌ ತಿಳಿಸಿದರು. ಮುಂದೆ ಅಗತ್ಯವಾದರೆ ಬಿಡುಗಡೆ ಮಾಡುತ್ತೇವೆ ಸದ್ಯಕ್ಕೆ ಅದರ ಅಗತ್ಯವಿಲ್ಲ. ಹೀಗಾಗಿ ಮಾಡುವುದಿಲ್ಲ ಎಂದರು.