ಇಂಡಿಯಾ ಬದಲು ಭಾರತ ಹೆಸರಿನಲ್ಲೂ ಕಾಂಗ್ರೆಸ್ ರಾಜಕೀಯ: ಸಂಸದ ರಾಘವೇಂದ್ರ
ದೇಶಕ್ಕೆ ಇಂಡಿಯಾ ಬದಲು ಭಾರತ ಎಂದು ಹೆಸರಿಡುವ ಸಣ್ಣ ವಿಚಾರದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಇಂತಹ ವಿಷಯಗಳಲ್ಲಿ ರಾಜಕಾರಣ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿವಮೊಗ್ಗ (ಸೆ.08): ದೇಶಕ್ಕೆ ಇಂಡಿಯಾ ಬದಲು ಭಾರತ ಎಂದು ಹೆಸರಿಡುವ ಸಣ್ಣ ವಿಚಾರದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಇಂತಹ ವಿಷಯಗಳಲ್ಲಿ ರಾಜಕಾರಣ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಭಾರತ ಎಂದು ಕರೆದರೆ ಏನೂ ತಪ್ಪಿಲ್ಲ. ಹಾಗೆಯೇ ಇಂಡಿಯಾ ಎಂದು ಕರೆದರೂ ತಪ್ಪಿಲ್ಲ. ಐಎನ್‍ಡಿಐಎ ರಚನೆಯಾದ ಬಳಿಗೆ ಎನ್‍ಡಿಎ ಏನೂ ಭಯಗೊಂಡಿಲ್ಲ. ಅದರ ಬದಲು ಆ ಸದಸ್ಯರೇ ಗಾಬರಿಯಾಗಿದ್ದಾರೆ ಎಂದು ಕುಟುಕಿದರು.
ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸನಾತನ ಧರ್ಮ ಎಂಬುದು ದೇವರಲ್ಲಿ ನಂಬಿಕೆ ಇಡುವಂಥದ್ದು ಸ್ಟಾಲಿನ್ ತಾಯಿಯೇ ಪ್ರತಿನಿತ್ಯ ದೇವಸ್ಥಾನಕ್ಕೆ ಹೋಗಿಬರುತ್ತಾರೆ. ಅತಿ ಬುದ್ಧಿವಂತರು ಈ ರೀತಿ ಹೇಳಿಕೆ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು. ಬಿಜೆಪಿ ಯಾವತ್ತೂ ಚುನಾವಣೆಗಾಗಿ ರಾಜಕಾರಣ ಮಾಡಿಲ್ಲ. ಧರ್ಮವನ್ನು ಅಡ್ಡ ತಂದಿಲ್ಲ. ರಾಮಮಂದಿರವನ್ನು ಚುನಾವಣೆಗೋಸ್ಕರ ಕಟ್ಟುವುದೂ ಇಲ್ಲ. ಅದು ಅನೇಕ ವರ್ಷಗಳ ಹೋರಾಟ ಎಂದು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಭಾವನಾತ್ಮಕ ವಿಷಯಗಳನ್ನು ಮುಂದೆ ಇಡುತ್ತಾರೆ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿಕೆಗೆ ತಿರುಗೇಟು ನೀಡಿದರು.
ಭಾರತ ಎಂಬ ಪದಬಳಕೆಗೆ ಕಾಂಗ್ರೆಸ್ ಆಕ್ಷೇಪಣೆ ನಿರರ್ಥಕ: ಡಾ.ಕೆ.ಸುಧಾಕರ್
ಸಚಿವ ಶಿವಾನಂದ್ ಪಾಟೀಲ್ ರೈತರ ಬಗ್ಗೆ ನೀಡಿದ ಹೇಳಿಕೆ ಸರಿಯಲ್ಲ. ಅಧಿಕಾರದ ಮದ ತಲೆಗೆ ಏರಿದಾಗ ಇಂತಹ ಮಾತುಗಳು ಬರುತ್ತವೆ. ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯ ಸರ್ಕಾರ ರೈತರಹಿತ ಕಾಪಾಡುತ್ತದೆ ಎಂದುಕೊಂಡಿದ್ದೆವು. ಆದರೆ, ಅದು ವಿಫಲವಾಗಿದೆ. ಬರಗಾಲ ಘೋಷಣೆ ಬಗ್ಗೆ ದಿನ ತಳ್ಳುತ್ತಿದ್ದಾರೆ. ಆದಷ್ಟು ಬೇಗ ಇಡೀ ರಾಜ್ಯವನ್ನು ಬರಗಾಲ ಎಂದು ಘೋಷಿಸಬೇಕು ಎಂದರು.
ದ್ವೇಷ ರಾಜಕಾರಣಕ್ಕಾಗಿ ಪಠ್ಯಪುಸ್ತಕ ಬದಲಾವಣೆ: ರಾಜ್ಯ ಸರ್ಕಾರ ಪಠ್ಯಪುಸ್ತಕ ಬದಲಾಣೆ ಮಾಡಲು ದ್ವೇಷದ ರಾಜಕಾರಣದ ಕಾರಣ ಎಂದು ವಿಧಾನ ಪರಿಷತ್ತು ಸದಸ್ಯ ಡಿ.ಎಸ್. ಅರುಣ್ ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಠ್ಯಪುಸ್ತಕ ಬದಲಾವಣೆ ಸೇರಿದಂತೆ ಜಿಎಸ್‌ಟಿ, ಎಪಿಎಂಸಿ ಕಾಯಿದೆ, ಟ್ರೇಡ್ ಲೈಸೆನ್ಸ್ ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಕಲಾಪದ ಚರ್ಚೆಯಲ್ಲಿ ಭಾಗವಹಿಸಿದ್ದೇನೆ. ಸರ್ಕಾರಕ್ಕೆ ನನ್ನ ಪ್ರಶ್ನೆ ಇದ್ದದ್ದು ಪಠ್ಯ ಪುಸ್ತಕಗಳನ್ನು ಬದಲಾವಣೆ ಮಾಡಿದ್ದು ಏಕೆ, ಯಾವ ಯಾವ ತರಗತಿಗಳಿಗೆ ಯಾವ ಯಾವ ಪಾಠವನ್ನು ಕೈಬಿಟ್ಟಿದ್ದೀರಿ?
ಪ್ರಧಾನಿ ಮೋದಿಯನ್ನು ಮಹಮದ್ ಜಿನ್ನಾಗೆ ಹೋಲಿಸಿದ ವೀರಪ್ಪ ಮೊಯ್ಲಿ: ಏಕೆ ಗೊತ್ತಾ?
ಹೊಸದಾಗಿ ಯಾವ ಪಠ್ಯವನ್ನು ಸೇರಿಸಿದ್ದೀರಿ, ಯಾವ ಕಾರಣಕ್ಕೆ ಸೇರಿಸಿದ್ದೀರಿ ಎಂದು ಕೇಳಿದ್ದೆ. ಸರ್ಕಾರ ನನಗೆ ಲಿಖಿತ ಉತ್ತರ ನೀಡಿದೆ. ಈ ಲಿಖಿತ ಉತ್ತರವನ್ನು ನೋಡಿದಾಗ ಇದು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ ಮತ್ತು ದ್ವೇಷದ ರಾಜಕಾರಣ ಇದರಲ್ಲಿ ಅಡಗಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ ಎಂದು ಆರೋಪಿಸಿದರು. 6ರಿಂದ 10ನೇ ತರಗತಿಯ ಕನ್ನಡ ಭಾಷೆಗೆ ಸಂಬಂಧಿಸಿದಂತೆ 9 ಪಠ್ಯಗಳನ್ನು, ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ 9 ಪಠ್ಯಗಳನ್ನು ತಿದ್ದುಪಡಿ ಮಾಡಲಾಗಿದೆ. ಮುಖ್ಯವಾಗಿ ಚಕ್ರವರ್ತಿ ಸೂಲಿಬೆಲೆ, ಶತಾವಧಾನಿ ಗಣೇಶ್, ಡಾ. ಕೆ.ಬಿ. ಹೆಡ್ಗೆವಾರ್ ಅವರ ಪಠ್ಯಗಳನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದರು.