'ಸ್ವಾತಂತ್ರ್ಯ ಹೋರಾಟಗಾರರು ಭಾರತ ಮಾತೆಗೆ ಜೈ ಎಂದರೇ ಹೊರತು ಇಂಡಿಯಾ ಮಾತೆಗೆ ಜೈ ಎನ್ನಲಿಲ್ಲ': ಡಾ.ಕೆ.ಸುಧಾಕರ್
ನಮ್ಮ ದೇಶಕ್ಕೆ ಸಾವಿರಾರು ವರ್ಷಗಳಿಂದಲೂ ಭಾರತ ಎಂಬ ಹೆಸರಿದೆ. ಮೊಘಲರು, ಬ್ರಿಟಿಷರು, ಪೋರ್ಚುಗೀಸರು ಮುಂತಾದ ವಿದೇಶಿಯರು ಭಾರತಕ್ಕೆ ಇಂಡಿಯಾ, ಹಿಂದೂಸ್ತಾನ ಹೀಗೆ ಕಾಲಕಾಲಕ್ಕೆ ಅನೇಕ ಹೆಸರುಗಳನ್ನು ಇಟ್ಟಿದ್ದಾರೆ.
ಚಿಕ್ಕಬಳ್ಳಾಪುರ (ಸೆ.08): ನಮ್ಮ ದೇಶಕ್ಕೆ ಸಾವಿರಾರು ವರ್ಷಗಳಿಂದಲೂ ಭಾರತ ಎಂಬ ಹೆಸರಿದೆ. ಮೊಘಲರು, ಬ್ರಿಟಿಷರು, ಪೋರ್ಚುಗೀಸರು ಮುಂತಾದ ವಿದೇಶಿಯರು ಭಾರತಕ್ಕೆ ಇಂಡಿಯಾ, ಹಿಂದೂಸ್ತಾನ ಹೀಗೆ ಕಾಲಕಾಲಕ್ಕೆ ಅನೇಕ ಹೆಸರುಗಳನ್ನು ಇಟ್ಟಿದ್ದಾರೆ. ಆದರೆ ಕನ್ನಡ, ಹಿಂದಿ, ತೆಲುಗು ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಅನೇಕ ಶತಮಾನಗಳಿಂದ ಭಾರತ ಎಂಬ ಪದ ಬಳಕೆ ಇದೆ. ಹಾಗಾಗಿ ಭಾರತ ಎಂಬ ಪದಪ್ರಯೋಗಕ್ಕೆ ಆಕ್ಷೇಪಣೆ ವ್ಯಕ್ತಪಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಟೀಕಿಸಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದ ಹಿಂಭಾಗದ ತಮ್ಮ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತ ಹೆಸರಿಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಡಿಯಾ ಎಂದು ಕರೆಯುವುದು ನಿಜ. ಆದರೆ ನಮ್ಮ ದೇಶಕ್ಕೆ ಹಿಂದಿನಿಂದಲೂ ಭರತ ವರ್ಷ, ಭರತ ಖಂಡ ಎಂಬ ಹೆಸರಿದೆ. ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ನಾಡಗೀತೆಯಲ್ಲಿ ಭಾರತ ಜನನಿಯ ತನುಜಾತೆ ಎಂದೇ ಇದೆ. ರವೀಂದ್ರನಾಥ ಠ್ಯಾಗೋರರು ಬರೆದ ರಾಷ್ಟ್ರಗೀತೆಯಲ್ಲಿ ಭಾರತ ಭಾಗ್ಯವಿದಾತ ಎಂದು ಇದೆ. ನಮ್ಮ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಗೆ ಭಾರತ ರತ್ನ ಎಂಬ ಹೆಸರಿದೆ. ನೆಹರೂ-ಗಾಂಧಿ ಪರಿವಾರದ ಮೂರು ಜನ ಈ ಪ್ರಶಸ್ತಿ ಪಡೆದಿದ್ದಾರೆ. ಭಾರತ ರತ್ನ ಪ್ರಶಸ್ತಿ ಬದಲು ಇಂಡಿಯಾ ರತ್ನ ಅಂತ ಏಕೆ ಹೆಸರಿಡಲಿಲ್ಲಾ ಎಂದು ಕಾಂಗ್ರೆಸ್‌ಗೆ ಪ್ರಶ್ನಿಸಿದರು.
ಪ್ರಧಾನಿ ಮೋದಿಯನ್ನು ಮಹಮದ್ ಜಿನ್ನಾಗೆ ಹೋಲಿಸಿದ ವೀರಪ್ಪ ಮೊಯ್ಲಿ: ಏಕೆ ಗೊತ್ತಾ?
ಸ್ವಾತಂತ್ರ್ಯ ಹೋರಾಟಗಾರರು ಭಾರತ ಮಾತೆಗೆ ಜೈ ಎಂದರೇ ಹೊರತು ಇಂಡಿಯಾ ಮಾತೆಗೆ ಜೈ ಎನ್ನಲಿಲ್ಲ. ಈಗ ಇದನ್ನ ವಿರೋಧಿಸುವ ಕಾಂಗ್ರೆಸ್ ನಾಯಕರು ಒಂದು ವರ್ಷದ ಹಿಂದೆ ತಮ್ಮ ಯಾತ್ರೆಗೆ ಭಾರತ್ ಜೋಡೋ ಎಂಬ ಹೆಸರನ್ನೇ ಇಟ್ಟಿದ್ದರು. ಕಾಂಗ್ರೆಸ್‌ನ ಸಂಸದರು, ಶಾಸಕರು, ಮುಖ್ಯಮಂತ್ರಿಗಳು, ಮಂತ್ರಿಗಳು ಸ್ವೀಕರಿಸಿರುವ ಪ್ರಮಾಣ ವಚನದಲ್ಲಿ ಸಹ ಭಾರತದ ಸಂವಿಧಾನಕ್ಕೆ ಬದ್ಧರಾಗಿರುತ್ತೇವೆ ಎಂಬ ಪದಪ್ರಯೋಗ ಇದೆ. ಆದರೆ ಈಗ ಕೇಂದ್ರ ಸರ್ಕಾರ ಭಾರತ ಎಂಬ ಹೆಸರಿಗೆ ಆದ್ಯತೆ ನೀಡಿದ್ದಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎಂದರೆ, ಇದರಲ್ಲೂ ಕಾಂಗ್ರೆಸ್ ನಾಯಕರು ರಾಜಕೀಯ ಲಾಭ ಹುಡುಕುತ್ತಿರುವುದು ಸ್ಪಷ್ಟವಾಗಿದೆ ಎಂದರು.
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಎಂಬ ಹೆಸರನ್ನು ಇಟ್ಟುಕೊಂಡಿದೆ. ಈ ಹೆಸರಿಗೆ ಬಿಜೆಪಿ ಹೆದರಿದೆ ಎಂದುಕೊಳ್ಳುವುದು ಮೂರ್ಖತನ. ವಿರೋಧ ಪಕ್ಷಗಳ ಈ ಮೈತ್ರಿಕೂಟದಲ್ಲಿರುವ ನಾಯಕರೇ ಪರಸ್ಪರ ಭಿನ್ನಾಭಿಪ್ರಾಯ ಹೊಂದಿದ್ದು, ಅವರ ನಡುವೆಯೇ ಸಮಸ್ಯೆಗಳು ಬಗೆಹರಿದಿಲ್ಲ. ಹಿಂದಿನ ಯುಪಿಎ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಮುಖ ತೋರಿಸಿಕೊಳ್ಳಲಾಗದೆ ಯುಪಿಎ ಹೆಸರನ್ನು ಬಿಟ್ಟು ಇಂಡಿಯಾ ಹೆಸರನ್ನು ಅಂಟಿಸಿಕೊಂಡಿದೆ. ಯಾವುದೇ ಟೀಕೆ ಬಾರದಿರಲಿ ಎಂಬ ಹೆದರಿಕೆಯಿಂದಲೇ ಈ ಕೂಟಕ್ಕೆ ಇಂಡಿಯಾ ಎಂಬ ಹೆಸರಿಡಲಾಗಿದೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿ ಈ ದುಷ್ಟರ ಕೂಟಕ್ಕೆ ಅಂಜುವ ಅಗತ್ಯವಿಲ್ಲ ಎಂದರು.
ಸನಾತನ ಧರ್ಮದ ನಿರ್ಮೂಲನೆಯೇ ಇಂಡಿಯಾ ಕೂಟದ ಗುರಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವುದೇ ಇಂಡಿಯಾ ಮೈತ್ರಿಕೂಟದ ಗುರಿ ಎಂಬುದನ್ನು ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ಸ್ಪಷ್ಟಪಡಿಸಿದೆ. ಸನಾತನ ಧರ್ಮ ಈ ದೇಶದ ಪರಂಪರೆಯ ಬುನಾದಿಯಾಗಿದ್ದು, ಯಾರೇ ನಾಯಕರು ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಟೀಕೆ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡಬಾರದು. ರಾಜ್ಯದ ಕಾಂಗ್ರೆಸ್ ನಾಯಕರು ಕೂಡ ಸ್ಟಾಲಿನ್ ಅವರ ಹೇಳಿಕೆಗೆ ಬೆಂಬಲ ನೀಡಿ ಸನಾತನ ಧರ್ಮಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.
ಸ್ವತಂತ್ರ ಪೂರ್ವದ ಸಾವಿರಾರು ವರ್ಷಗಳಿಂದಲೂ ಸಾವಿರಾರು ರಾಜರು ಸಾಕಷ್ಟು ರಾಜ್ಯಗಳನ್ನು ಕಟ್ಟಿ ಕೊಂಡಿದ್ದರೂ ಸಹಾ ಆಗಲೂ ಭಾರತ ದೇಶ ವಾಗಿತ್ತು ಮತ್ತು ಹಿಂದೂ ಸ್ಥಾನ ಎಂದು ಕರೆಸಿ ಕೊಳ್ಳುತ್ತಿತ್ತು. 1947ರಲ್ಲಿ ಸ್ವಾತಂತ್ರ್ಯಕ್ಕೂ ಮೊದಲು ಧರ್ಮದ ಆಧಾರದ ಮೇಲೆ ಪಾಕಿಸ್ಥಾನ ವಿಭಜನೆಯಾಗಿ ಮುಸ್ಲಿಮರು ಬೇರೆಯಾದಾಗ ಹಿಂದುಸ್ಥಾನ ಹಿಂದುಗಳಿಗಾಗಿಯೇ ಉಳಿದು ಭಾರತವಾಗಿದೆ ಎಂದರು.
ಈ ವೇಳೆ ಖಾದಿ ಮಂಡಳಿಯ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಚ್ಕಿಬಳ್ಳಾಪುರ ನಗಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣ ಮೂರ್ತಿ, ನಗರಸಭಾ ಮಾಜಿ ಅಧ್ಯಕ್ಷ ಆನಂದಬಾಬುರೆಡ್ಡಿ, ನಗರಸಭೆ ಸದಸ್ಯ ಸುಬ್ರಮಣ್ಯಚಾರಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವ ಪ್ರಸಾದ್, ದೇವಸ್ಥಾನದ ಹೊಸಹಳ್ಳಿ ರಾಮಣ್ಣ,ಲೊಕೇಶ್ ಗೌಡ, ಪ್ರದೀಪ್, ಮಧುಚಂದ್ರ, ನಂಜೇಶ್ ರೆಡ್ಡಿ, ಮುಖಂಡರಾದ ಬೈರೇಗೌಡ, ಸಂತೋಷ್, ನಾರಾಯಣಸ್ವಾಮಿ(ಸೇಠು), ಕೃಷ್ಣಾರೆಡ್ಡಿ,ಅನು ಆನಂದ್, ಬಾಲಕೃಷ್ಣ, ಜಗನ್ನಾಥ್, ಸುಬ್ಬಾರೆಡ್ಡಿ ಮತ್ತಿತರರಿದ್ದರು.
ಸರ್ಕಾರ ಬಂದು 3 ತಿಂಗಳಾದರೂ ನೀರಾವರಿ ಸಲಹಾ ಸಮಿತಿಯ ಸಭೆ ಕರೆದಿಲ್ಲ: ಎಚ್.ಡಿ.ರೇವಣ್ಣ
ಹಿಂದೂ ಎಂಬುವುದು ಜೀವನ ಪದ್ಧತಿ: ಹಿಂದೂ ಎಂಬುದು ಧರ್ಮ ಎನ್ನುವುದಕ್ಕಿಂತ ಹೆಚ್ಚಾಗಿ, ಅದೊಂದು ಜೀವನ ಪದ್ಧತಿ ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಅಂದರೆ ಪ್ರಾಂತ್ಯ, ಜಾತಿ, ಭಾಷೆಯ ವೈವಿಧ್ಯತೆ ಮೀರಿ ಎಲ್ಲಾ ಭಾರತೀಯರು ಸಾವಿರಾರು ವರ್ಷಗಳಿಂದ ರೂಢಿಸಿಕೊಂಡಿ ಬಂದಿರುವ ಜೀವನ ಕ್ರಮವೇ ಸನಾತನ ಧರ್ಮ. ಮೊದಲು ಸನಾತನ ಹಿಂದೂ ಧರ್ಮದ ಮಹತ್ವವನ್ನು ಕಾಂಗ್ರೆಸ್ ನಾಯಕರು ಅರಿತುಕೊಳ್ಳಬೇಕು ಎಂದು ಸುಧಾಕರ್ ಹೇಳಿದರು.