ಬಿಜೆಪಿ ಕೋಮುವಾದಿ, ಮತೀಯವಾದಿ ಪಕ್ಷ: ಸಂಸದ ಬಚ್ಚೇಗೌಡ ಆರೋಪ
ಬಿಜೆಪಿ ಕೋಮುವಾದಿ, ಮತೀಯವಾದಿ ಪಕ್ಷ ಎಂದು ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ತಮ್ಮ ಪಕ್ಷದ ವಿರುದ್ಧವೇ ಟೀಕಾಪ್ರಹಾರ ನಡೆಸಿದರು. ದೇವೇಗೌಡರು ಇರುವವರೆಗೂ ಬಿಜೆಪಿ ಜೊತೆ ಜೆಡಿಎಸ್ ಹೋಗುವುದಿಲ್ಲ ಎಂದುಕೊಂಡಿದ್ದೆ.
ಚಿಕ್ಕಬಳ್ಳಾಪುರ (ಸೆ.09): ಬಿಜೆಪಿ ಕೋಮುವಾದಿ, ಮತೀಯವಾದಿ ಪಕ್ಷ ಎಂದು ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ತಮ್ಮ ಪಕ್ಷದ ವಿರುದ್ಧವೇ ಟೀಕಾಪ್ರಹಾರ ನಡೆಸಿದರು. ನಗರ ಹೊರವಲಯದ ಜಿಲ್ಲಾಡಳಿತ ಭವನದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾಪಂಚಾಯತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ದಿ ಸಮನ್ವಯ ಸಮಿತಿ ಮತ್ತು ಉಸ್ತುವಾರಿ ಸಮಿತಿ ಸಭೆಯ(ದಿಶಾ)ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರು ಇರುವವರೆಗೂ ಬಿಜೆಪಿ ಜೊತೆ ಜೆಡಿಎಸ್ ಹೋಗುವುದಿಲ್ಲ ಎಂದುಕೊಂಡಿದ್ದೆ. ಜಾತ್ಯತೀತ ಎನಿಸಿರುವ ಜೆಡಿಎಸ್ ಕೋಮುವಾದಿ ಬಿಜೆಪಿ ಜೊತೆ ಹೋಗುವುದು ಅಚ್ಚರಿಯಾಗಿದೆ ಎಂದರು.
ಮೈತ್ರಿಯಿಂದ ಬಿಜೆಪಿ ಶಕ್ತಿಗುಂದಲಿದೆ ಜೆಡಿಎಸ್ ಮತ್ತು ಬಿಜೆಪಿ ಒಂದಾಗುತ್ತದೆ ಎನ್ನುವುದು ಜನರಿಗೆ ಕನಸಿನ ಮಾತಾಗಿತ್ತು. ಆದರೆ ಇತ್ತೀಚೆಗೆ ಒಂದಾಗುತ್ತಾರೆ ಎಂದು ಉಹಾ ಪೋಹ ಹರಿದಾಡುತ್ತಿತ್ತು. ಈಗ ಜನರಿಗೆ ಸ್ಪಷ್ಟವಾಗಿ ಗೊತ್ತಾಗಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಒಳ್ಳೆಯದಾಗುವುದಿಲ್ಲ. ಪಕ್ಷದ ಶಕ್ತಿ ಕ್ಷೀಣಿಸುತ್ತದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಿದೆ. ದೊಡ್ಡ ಮಟ್ಟದ ನಾಯಕರು ಇದ್ದಾರೆ. ಆದರೂ ಪಕ್ಷದ ರಾಜ್ಯ ನಾಯಕ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಮತ್ತು ರಾಜ್ಯ ಘಟಕದ ಅಧ್ಯಕ್ಷರ ನೇಮಕವಾಗಿಲ್ಲ.
ಬಿಜೆಪಿ ಬಗ್ಗೆ ಮಾತನಾಡೋ ನೈತಿಕತೆ ಸಂಸದ ಬಚ್ಚೇಗೌಡರಿಗಿಲ್ಲ: ಎಂಟಿಬಿ ನಾಗರಾಜ್ ಆಕ್ರೋಶ
ಜೆಡಿಎಸ್ ಮತ್ತು ಬಿಜೆಪಿ ಒಂದಾಗುವ ಕಾರಣದಿಂದಾಗಿಯೇ ಮೇಲಿನವರು (ಹೈಕಮಾಂಡ್) ಆಯ್ಕೆಗೆ ತಡ ಮಾಡಿದ್ದಾರೆ. ಈ ಒಂದಾಗುವ ತೀರ್ಮಾನದ ಮೇಲೆ ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದು ನನಗೆ ಹೊಳೆಯುತ್ತಿದೆ ಎಂದು ಹೇಳಿದರು. ಬಿಜೆಪಿಯವರು ಮಾಡುವುದೆಲ್ಲ ಸರಿ ಎಂದು ಹೇಳಲು ಆಗುವುದಿಲ್ಲ. ನಾನೂ ಪಕ್ಷದಲ್ಲಿ ಹಿರಿಯನಿದ್ದೇನೆ. ಸುಮ್ಮನೆ ಇರಬೇಕಾಗುತ್ತದೆ ಸುಮ್ಮನೆ ಇದ್ದೇನೆ ಎಂದ ಸಂಸದರು. ಸನಾತನ ಧರ್ಮ ನಮಗೆ ಬೇಕು. ಸನಾತನ ಧರ್ಮದಲ್ಲಿ ನಾವು ಬಂದಿರುವುದು. ಸಾವಿರಾರು ವರ್ಷಗಳಿಂದ ಸನಾತನ ಧರ್ಮಇದೆ. ಸನಾತನ ಧರ್ಮದ ವಿರುದ್ಧ ಮಾತನಾಡುವುದು ಯಾರೇ ಆಗಲಿ ತಪ್ಪು ಎಂದರು.