ಬಿಜೆಪಿ ಬಗ್ಗೆ ಮಾತನಾಡೋ ನೈತಿಕತೆ ಸಂಸದ ಬಚ್ಚೇಗೌಡರಿಗಿಲ್ಲ: ಎಂಟಿಬಿ ನಾಗರಾಜ್ ಆಕ್ರೋಶ
ಸಂಸದ ಬಿ.ಎನ್.ಬಚ್ಚೇಗೌಡರು ಚುನಾವಣೆ ಸಂದರ್ಭದಲ್ಲಿ ತನ್ನ ಮಗನ ಗೆಲುವಿಗಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿ ಈಗ ಬಿಜೆಪಿ ಪಕ್ಷ ಹಾಗೂ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಅವರಿಗಿಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಕಿಡಿಕಾರಿದರು.
ಹೊಸಕೋಟೆ (ಸೆ.09): ಸಂಸದ ಬಿ.ಎನ್.ಬಚ್ಚೇಗೌಡರು ಚುನಾವಣೆ ಸಂದರ್ಭದಲ್ಲಿ ತನ್ನ ಮಗನ ಗೆಲುವಿಗಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿ ಈಗ ಬಿಜೆಪಿ ಪಕ್ಷ ಹಾಗೂ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಅವರಿಗಿಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಕಿಡಿಕಾರಿದರು. ಸಂಸದ ಬಚ್ಚೇಗೌಡರು ಇತ್ತೀಚೆಗೆ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವ ಬಗ್ಗೆ ಹಾಗೂ ಹಿಂದಿನ ಸರ್ಕಾರದಲ್ಲಿ ಉಸ್ತುವಾರಿ ಸಚಿವರಾಗಿದ್ದ ಎಂಟಿಬಿ ನಾಗರಾಜ್ ಅವರು ಪಕ್ಷದ ಕಾರ್ಯ ಚಟುವಟಿಕೆಗೆ ಬಳಕೆ ಮಾಡಿಕೊಂಡಿಲ್ಲ ಎಂಬ ಹೇಳಿಕೆ ನೀಡಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಚಿಕ್ಕಬಳ್ಳಾಪುರ ಜಿಲ್ಲೆ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಶಿಷ್ಟಾಚಾರವಾಗಿ ಎಲ್ಲಾ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಿ ಆಹ್ವಾನ ಪ್ರತಿಕೆ ಕಳುಹಿಸುತ್ತಿದ್ದೆ. ಅವರಿಗೆ ಯಾವುದೇ ಕಾರ್ಯಕ್ರಮಕ್ಕೆ ಬರೋಕೆ ಮುಖ ಇರ್ತಿರಲಿಲ್ಲ ಎಂದು ಹೇಳಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಸಕೋಟೆಯಲ್ಲಿ ತನ್ನ ಮಗನ ಗೆಲುವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಕೆಲ್ಸ ಮಾಡಿದ್ದು ಎರಡು ಜಿಲ್ಲೆಯಲ್ಲಿ ಒಬ್ಬ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿಲ್ಲ. ಪ್ರಮುಖವಾಗಿ ಸಂಸದರ 5 ಕೋಟಿ ಅನುದಾನ ಪಡೆದು ಜಿಲ್ಲೆಯ ಯಾವುದೇ ತಾಲೂಕಿಗೆ1 ರುಪಾಯಿ ಅನುದಾನ ಕೊಟ್ಟಿಲ್ಲ.
5 ಭರವಸೆಗಳಲ್ಲಿ 4 ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದ ಕಾಂಗ್ರೆಸ್: ಸಂಸದ ಸುರೇಶ್
ಇದನ್ನು ಪ್ರಶ್ನೆ ಮಾಡಲು ಅಲ್ಲಿನ ಕಾರ್ಯಕರ್ತರು ಕಾಯುತ್ತಿದ್ದರು. ಕಾರ್ಯಕರ್ತರಿಂದ ತಪ್ಪಿಸಿಕೊಳ್ಳಲು ಸಭೆ, ಸಮಾರಂಭಗಳಿಗೂ ಬರುತ್ತಿರಲಿಲ್ಲ. ಅದನ್ನು ಬಿಟ್ಟು ವಿನಾಕಾರಣ ಬಿಜೆಪಿ ಪಕ್ಷ ಅಥವಾ ನನ್ನ ಮೇಲೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು. ಸರ್ಕಾರದ ಆಡಳಿತ ವೈಫಲ್ಯ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನ ಪೂರೈಸಿದೆ. ಈ ನಡುವೆ ಸರ್ಕಾರದ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಬರಪೀಡಿತ ತಾಲೂಕುಗಳ ಘೋಷಣೆ, ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರ ಸೇರಿದಂತೆ ಅಭಿವೃದ್ಧಿ ಕುಂಠಿತವಾಗಿರುವ ಬಗ್ಗೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ಎಂದರು.