Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯ 'ಸತ್ತ ಸರಕಾರದ ಸಾಹುಕಾರ'; ಸೋಗಲಾಡಿ ಸಮಾಜವಾದ ಬೆತ್ತಲಾಗಿದೆ: ಹೆಚ್‌ಡಿಕೆ ವಾಗ್ದಾಳಿ

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಯಲ್ಲಿದ್ದರೂ ತಾಯಿ-ಮಗ ನಾಲ್ಕು ದಿನಗಳಿಂದ ಅನ್ನ ಸಿಗದೇ ಪರದಾಡಿದ್ದಾರೆ. ಹಸಿವು ತಾಳಲಾರದೇ ಹಾವೇರಿ ಯುವಕ ಪ್ರಾಣವನ್ನೇ ಬಿಟ್ಟಿರುವ ದಾರುಣ ಘಟನೆ ನಡೆದಿದೆ. ಈ ಘಟನೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Mother and son struggled food for 4 days young man died of starvation sat
Author
First Published Feb 5, 2024, 5:24 PM IST

ಬೆಂಗಳೂರು (ಫೆ.05): ರಾಜ್ಯದಲ್ಲಿ ಯುವಕನೊಬ್ಬ ಹಸಿವಿನಿಂದ ಅನ್ನವೂ ಸಿಗದಂತೆ ಬಳಲಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ರಾಜ್ಯದ ಎಲ್ಲ ಜನತೆಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆ.ಜಿ. ಅಕ್ಕಿ ಕೊಡುವುದಾಗಿ ಹೇಳಿ ಬಿಟ್ಟಿ ಪ್ರಚಾರ ಪಡೆಯುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ನಿಮ್ಮ ಢೋಂಗಿಧೀರತ್ವದ  ಮುಖವಾಡ ಕಳಚಿ ನೆಲಕ್ಕೆ ಬಿದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಕುಮಾರಸ್ವಾಮಿ ಅವರು, 'ಅನ್ನಭಾಗ್ಯ, ಗೃಹಲಕ್ಷ್ಮೀ ಹೆಸರಿನಲ್ಲಿ ಲೋಕೋದ್ಧಾರ ಮಾಡಿದ್ದೇವೆ ಎಂದು ಸುಳ್ಳುಲೆಕ್ಕ ಕೊಟ್ಟು ಜನರ ತೆರಿಗೆ ಹಣದಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿರುವ ನಿಮ್ಮ ಲೊಳಲೊಟ್ಟೆ ಬಯಲಾಗಿದೆ ಸಿದ್ದರಾಮಯ್ಯನವರೇ. ನುಡಿದಂತೆ ನಡೆದಿದ್ದೇವೆ ಎಂದರೆ ಇದೇನಾ ಮುಖ್ಯಮಂತ್ರಿಗಳೇ? ಗ್ಯಾರಂಟಿಗಳ ಮೂಲಕವೇ ಗತಿಗೆಟ್ಟ  ಕಾಂಗ್ರೆಸ್‌ ಪಕ್ಷದ ಹೊಟ್ಟೆ ಹೊರೆಯುತ್ತಿರುವ ಮತಿಗೆಟ್ಟ ನಿಮ್ಮ ಸರಕಾರವು ಕಲ್ಯಾಣ ಕಾರ್ಯಕ್ರಮಗಳ ಕಪಟ ಪೋಷಾಕಿನಿಂದ ಮೆರೆಯುತ್ತಿದೆ. ಆ ಪೋಷಾಕು, ನಿಮ್ಮ ಢೋಂಗಿಧೀರತ್ವದ  ಮುಖವಾಡ ಕಳಚಿ ನೆಲಕ್ಕೆ ಬಿದ್ದಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ.

ದಕ್ಷಿಣ ಭಾರತದಲ್ಲಿ ಚೆನ್ನಾಗಿ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿದ್ದೇವೆ; ಆದ್ರೂ ಅನುದಾನದಲ್ಲೇಕೆ ತಾರತಮ್ಯ: ಸಿದ್ದರಾಮಯ್ಯ

ಅಧಿಕಾರದ ಮದವೇರಿ ಮಂಪರು ಬಿದ್ದಿರುವ ನಿಮ್ಮ ಕಂಗಳು ಆ ನತದೃಷ್ಟನ ಪ್ರಾಣಾರ್ಪಣೆಯಿಂದಲಾದರೂ ತೆರೆದುಕೊಳ್ಳಲಿ. ಇಲ್ಲವಾದರೆ, ಆ ಯುವಕನ ಸಾವಿನ ಶಾಪ ನಿಮಗೆ ತಟ್ಟದೇ ಬಿಡದು. ಎಲ್ಲಿದ್ದಾಳೆ ನಿಮ್ಮ ಗೃಹಲಕ್ಷ್ಮೀ? ಯಾರಿಗೆ ಸಿಕ್ಕಿದೆ ನಿಮ್ಮ ಅನ್ನಭಾಗ್ಯ? ನಾಚಿಕೆ, ಸಂಕೋಚ ಎನ್ನುವುದಿಲ್ಲವೇ? ಇದ್ದರೆ ಈ ಧಾರುಣಕ್ಕೆ ರಾಜ್ಯ ಸಾಕ್ಷಿಯಾಗುತ್ತಿತ್ತಾ? ದುಡಿದು ತಾಯಿಯನ್ನು ಸಲಹಬೇಕೆಂದು ಕನಸು ಕಟ್ಟಿಕೊಂಡು ಹೊರಟ ಹಾವೇರಿ ಜಿಲ್ಲೆ ಯಲಗಚ್ಚು ಗ್ರಾಮದ ಬಸವರಾಜ ವೆಂಕಟ ಎಂಬ ಯುವಕನ ಆತ್ಮಾಹುತಿ ಆಘಾತಕಾರಿ. ನಿಮ್ಮ ಪ್ರಚಾರಪ್ರಿಯ, ಖೊಟ್ಟಿ ಗ್ಯಾರಂಟಿಗಳ ಸರಕಾರದ ಆತ್ಮಸಾಕ್ಷಿಗೆ ಎದುರಾದ ದೊಡ್ಡ ಸವಾಲು. 

ಟಿಕೆಟ್ ಇಲ್ಲದೆ ರೈಲಿನಿಂದ ಹೊರದಬ್ಬಿಸಿಕೊಂಡ ಈತ, ಧಾರವಾಡ ಆಳ್ನಾವರದಲ್ಲಿ ಹೆತ್ತಮ್ಮಗೆ ಅನ್ನ ಅರಸುತ್ತಾ, ದುಡಿಮೆ ಹುಡುಕುತ್ತಾ ಹೊರಟ. ಎಲ್ಲಿಯೂ ಅವಕಾಶ ಸಿಗದೆ ಕೈ ಚೆಲ್ಲಿ ನೇಣಿಗೆ ಕೊರಳು ಒಡ್ಡಿದ್ದಾನೆ. ಮೂರು ನಾಲ್ಕು ದಿನ ತಾಯಿ ಮಗ ಇಬ್ಬರೂ ಅನ್ನಕ್ಕಾಗಿ ಪರಿತಪಿಸಿದ್ದಾರೆ. ಈ ತಾಯಿಯ ಕುಟುಂಬಕ್ಕೆ ಅನ್ನಭಾಗ್ಯ ಏಕೆ ತಲುಪಿಲ್ಲ? ಗೃಹಲಕ್ಷ್ಮೀ ಅವರ ಮನೆ ಬಾಗಿಲಿಗೆ ಹೋಗಿಲ್ಲವೇಕೆ? ಇದಕ್ಕೆ ನೀವೇ ಹೊಣೆ ಸಿದ್ದರಾಮಯ್ಯನವರೇ. 15ನೇ ಬಜೆಟ್ ಮಂಡಿಸುವ ಉಮೇದಿನಲ್ಲಿರುವ ನೀವು ಈ 'ಸತ್ತ ಸರಕಾರದ ಸಾಹುಕಾರ'ನಷ್ಟೇ. ನಿಮ್ಮ ಸೋಗಲಾಡಿ ಸಮಾಜವಾದ ಬೆತ್ತಲಾಗಿದೆ. ಅನ್ನಕ್ಕಾಗಿ ಸಂಭವಿಸಿದ ಈ ಆತ್ಮಹತ್ಯೆ ಇಡೀ ನಾಡಿಗೇ ಕಪ್ಪುಚುಕ್ಕೆ.

ಕಾಂಗ್ರೆಸ್‌ಗೆ ದೇಶ ಒಗ್ಗೂಡಿಸೋದು ಗೊತ್ತಿಲ್ಲ, ಒಡೆಯೋದೆ ಗೊತ್ತಿರೋದು: ಸಿ.ಟಿ.ರವಿ

ರಾಜ್ಯದ ಪತ್ರಿಕೆಯೊಂದರ ಈ ವರದಿ ನಿಮ್ಮ ಸರಕಾರ ಮತ್ತು ನಿಮ್ಮನ್ನು ಕಟಕಟೆಯಲ್ಲಿ ನಿಲ್ಲಿಸಿದೆ. ಸ್ವತಃ ನೀವೇ ಈ ಯುವಕನ ಸಾವಿಗೆ ಕಾರಣ ಮತ್ತು ನೇರ ಹೊಣೆ. ರಾಜ್ಯಕ್ಕೆ ನೀವೇ ಸಮಜಾಯಿಷಿ ಕೊಡಬೇಕು ಹಾಗೂ ಶಾಂತವ್ವನಿಗೆ ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕು. ಇನ್ನೊಂದು ಸಲಹೆ; ಹಳ್ಳ ಹಿಡಿದಿರುವ ನಿಮ್ಮ ಗ್ಯಾರಂಟಿಗಳನ್ನು ಸರಿದಾರಿಗೆ ತನ್ನಿ. ಅವುಗಳ ವೈಫಲ್ಯವನ್ನು ಪರಾಮರ್ಶೆ ಮಾಡಿ. ಅಧಿಕಾರಿಗಳ ಕಿವಿ ಹಿಂಡಿ ಕೆಲಸ ಮಾಡಿಸಿ. ನಿಮಗೆ ಆತ್ಮಸಾಕ್ಷಿ ಎನ್ನುವುದು ಇದ್ದರೆ ಮೊದಲು ಈ ಕೆಲಸ ಮಾಡಿ. ಅನ್ನಕ್ಕಾಗಿ ಜೀವತೆತ್ತ ಯುವಕನ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಆ ತಾಯಿಯ ಆರೋಗ್ಯ ಸುಧಾರಿಸಲಿ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

Follow Us:
Download App:
  • android
  • ios