ಬಿಜೆಪಿ ಟಿಕೆಟ್ ಸಿಗದ್ದಕ್ಕೆ ಮೋಹನ್ ಕೃಷ್ಣ ಬಂಡಾಯ, ಸಂಸದ ಮುನಿಸ್ವಾಮಿ ವಿರುದ್ಧ ಮೂಲ ಬಿಜೆಪಿಗರ ಆಕ್ರೋಶ!
ಕೆಜಿಎಫ್ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಟಿಕೆಟ್ ಆಕಾಂಕ್ಷಿ ವಿ.ಮೋಹನ್ ಕೃಷ್ಣ ಬಂಡಾಯವೆದ್ದಿದ್ದಾರೆ. ಟಿಕೆಟ್ ತಪ್ಪಲು ಸಂಸದರೆ ನೇರ ಕಾರಣವೆಂದು ಮುನಿಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ವರದಿ : ದೀಪಕ್,ಏಷಿಯಾನೆಟ್ ಸುವರ್ಣ ನ್ಯೂಸ್
ಕೋಲಾರ (ಏ.14): ಕೋಲಾರ ಜಿಲ್ಲೆಯ ಕೆಜಿಎಫ್ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಟಿಕೆಟ್ ಆಕಾಂಕ್ಷಿ ವಿ.ಮೋಹನ್ ಕೃಷ್ಣ ಅವರು ಗ್ರಾಮೀಣ ಹಾಗೂ ನಗರಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಬಿಜೆಪಿ ಮುಖಂಡರ,ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಟಿಕೆಟ್ ತಪ್ಪಲು ಸಂಸದರೆ ನೇರ ಕಾರಣವೆಂದು ಆಕ್ರೋಶ ವ್ಯಕ್ತ ಪಡಿಸಿದರು. ಕೆಜಿಎಫ್ ತಾಲೂಕಿನ ಕಂಗಾಂಡ್ಲಹಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ವಿ.ಮೋಹನ್ ಕೃಷ್ಣ,ಸಂಸದ ಎಸ್.ಮುನಿಸ್ವಾಮಿ ಅವರು ಪರಿಶಿಷ್ಟ ಜಾತಿಗಳನ್ನು ಇಬ್ಬಾಗ ಮಾಡಿ ತಮಗೆ ಅನ್ಯಾಯ ಮಾಡಿದ್ದಾರೆ.ಇದಕ್ಕೆ ತಕ್ಕ ಪಾಠವನ್ನು ಕೆಜಿಎಫ್‌ನಲ್ಲಿ ಕಳುಹಿಸುತ್ತೇವೆಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯ 6 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳೇನಾದರೂ ಸೋತರೆ ಅದಕ್ಕೆ ನೇರ ಕಾರಣ ಸಂಸದ ಮುನಿಸ್ವಾಮಿ ಅವರೇ ಕಾರಣರಾಗುತ್ತಾರೆಂದು ಎಚ್ಚರಿಕೆ ನೀಡಿದರು.
ಕುಟುಂಬ ರಾಜಕರಣ ಅಂತ್ಯ: ಕೆಜಿಎಫ್‌ನಲ್ಲಿ ಮಾಜಿ ಶಾಸಕ ವೈ.ಸಂಪಂಗಿ ಮತ್ತು ಅವರ ಕುಟುಂಬ ರಾಜಕರಣವನ್ನು ಅಂತ್ಯಗೊಳಿಸಬೇಕು ಇದಕ್ಕಾಗಿ ತಾವು ಪ್ರಬಲರಾಗಬೇಕೆಂದು ಸಂಸದರೇ ನನಗೆ ಹೆಚ್ಚಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ,ಪಕ್ಷವು ನಿಮ್ಮನ್ನು ಗುರುತಿಸುತ್ತದೆ ಎಂದು ಹೇಳಿದ್ದರು.ಈಗಾಗಿ ನಾನು ಕಳೆದ ಐದು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದೆ, ಆದ್ರೆ ಸಂಸದ ಮುನಿಸ್ವಾಮಿ ನನಗೆ ಟಿಕೆಟ್ ಕೈ ತಪ್ಪಲು ಕಾರಣರಾಗಿದ್ದಾರೆಂದರು. ಕೆಜಿಎಫ್‌ನಲ್ಲಿ ನಾನು ಸಮಾಜ ಸೇವೆ ಮೂಲಕ ಎಲ್ಲಾ ರೀತಿಯಲ್ಲಿ ಸೇವೆ ಮಾಡುತ್ತಾ, ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರತಿ ಕಾರ್ಯಕ್ರಮದಲ್ಲೂ ನನ್ನ ಶ್ರಮವಿದೆ ಎಂದರು.
ಸಭೆಯಲ್ಲಿ ಕಣ್ಣೀರು ಹಾಕಿದ ವಿ.ಮೋಹನ್ ಕೃಷ್ಣ
ಟಿಕೆಟ್ ಕೈ ತಪ್ಪಿದಕ್ಕೆ ಸಭೆ ಆಯೋಜನೆ ಮಾಡಿದ್ದ ಮೋಹನ್ ಕೃಷ್ಣ ಕಣ್ಣೀರು ಹಾಕುವ ಮೂಲಕ ಬೆಂಬಲಿಗರಿಗೆ ಕ್ಷಮೆ ಕೇಳಿದ್ರು. ಕೆಜಿಎಫ್‌ನ ಸ್ವಾಭಿಮಾನ ಜನತೆ ಈ ಬಾರಿ ಸ್ವಕ್ಷೇತ್ರದವನ್ನು ಗೆಲ್ಲಿಸಿಕೊಳ್ಳಬೇಕೆಂದು ತಿರ್ಮಾಣ ಮಾಡಿದ್ದರು.ಆದರೆ ಟಿಕೆಟ್ ಕೈ ತಪ್ಪಿದ್ದು,ಎಲ್ಲರೂ ಕರೆ ಮಾಡಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ,ಹೀಗಾಗಿ ಈ ದಿನ ಸಭೆ ಕರೆದು ನಿಷ್ಠಾವಂತ ಕಾರ್ಯಕರ್ತರ,ಮುಖಂಡರ ಸಭೆ ಕರೆದಿದ್ದೇವೆ,ಈ ಬಾರಿ ಸ್ವಾಭಿಮಾನವನ್ನು ಗೆಲ್ಲಿಸಿಕೊಳ್ಳೋಣ ತಮಗೆ ಅನ್ಯಾಯವಾಗಿದ್ದು,ಸಾಮಾನ್ಯ ಕಾರ್ಯಕರ್ತನಿಗೆ ಆಗಲು ಬಿಡಲ್ಲವೆಂದು ತಮ್ಮ ಭಾಷಣದ ಉದ್ದಕ್ಕೂ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.ಅವರ ನೋವು ಕಂಡು ಅಭಿಮಾನಿಗಳ, ಕಾರ್ಯಕರ್ತರ ಕಣ್ಣಲ್ಲಿಯೂ ಕಣ್ಣೀರು ಜಿನುಗುತ್ತಿದ್ದವು.
ಇದೇ ವೇಳೆ ಬಿಜೆಪಿ ಪ್ರಮುಖ ಮುಖಂಡ ರವಿ ರೆಡ್ಡಿ ಮಾತನಾಡಿ,ಸ್ವಾಭಿಮಾನಿ ಕಾರ್ಯಕರ್ತರಾದ ನಮ್ಮನ್ನು ಬಿಟ್ಟು,ಕೆಜಿಎಫ್‌ನಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ ಎಂದರು. ವಿ.ಮೋಹನ್ ಕೃಷ್ಣ ಅವರು ಕಳೆದ 5 ವರ್ಷಗಳಿಂದ ಕುಟುಂಬ,ವ್ಯವಹಾರ, ವೈಯಕ್ತಿಕ ಜೀವನವನ್ನು ಬಿಟ್ಟು ಕೆಜಿಎಫ್‌ನ ಸೇವೆಗಾಗಿ ದುಡಿದಿದ್ದರು ಆದರೆ ಬಿಜೆಪಿ ಪಕ್ಷದಲ್ಲಿನ ಜಿಲ್ಲಾ ಜನಪ್ರತಿನಿಧಿಗಳು ದ್ರೋಹ ಬಗೆದಿದ್ದಾರೆಂದು ದೂರಿದರು.
ಪ್ರತಿ ಕಾರ್ಯಕ್ರಮದಲ್ಲೂ ನಮ್ಮ ಶ್ರಮವಿದೆ. ಪಕ್ಷದ ಕಾರ್ಯಕ್ರಮವನ್ನೂ ನಾವು ಆಯೋಜನೆ ಮಾಡಿದರೆ ಬಂದು ಕೂತು ಹೋದವರು ಬಿ.ಪಾರಂ ಪಡೆದುಕೊಂಡಿದ್ದಾರೆ ಎಂದು ಮಾಜಿ ಶಾಸಕ ಸಂಪಂಗಿ ವಿರುದ್ಧ ಗುಡುಗಿದರು.ಮೋಹನ್ ಕೃಷ್ಣ ಅವರ ಬೆನ್ನಿಗೆ ಚೂರಿ ಹಾಕಿದವರನ್ನು ಕ್ಷಮಿಸುವುದಿಲ್ಲ,ಇದಕ್ಕೆ ತಕ್ಕ ಬೆಲೆ ಕಟ್ಟಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿದರು.
ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಜಯಪ್ರಕಾಶ್ ನಾಯ್ಡು, ತಾವು ಕಳೆದ ೪ ವರ್ಷಗಳ ಹಿಂದೆಯೇ ಸಂಸದ ಎಸ್.ಮುನಿಸ್ವಾಮಿ ಅವರ ಸಲಹೆ ಪಡೆದುಕೊಂಡು ವಿ.ಮೋಹನ್ ಕೃಷ್ಣ ಅವರಿಗೆ ಮಾತು ಕೊಟ್ಟಿದ್ದೇವೆ ತಾವು ಸದಾ ಮೋಹನ್ ಕೃಷ್ಣ ಜತೆಗಿದ್ದು,ಬಿಜೆಪಿ ಅಭ್ಯರ್ಥಿ ಪರ ಹೋಗದೆ ಸ್ವಾಭಿಮಾನಿ ಜನರ ಒತ್ತಾಯದಂತೆ ಮೋಹನ್ ಕೃಷ್ಣ ಅವರಿಗೆ ಬೆಂಬಲ ಇರುತ್ತದೆ ಎಂದರು.
ಕಮಲನಾಥನ್ ಮಾತನಾಡಿ, ವರಿಷ್ಠರಿಗೆ ಕ್ಷೇತ್ರದಲ್ಲಿನ ರಾಜಕೀಯ ವಿದ್ಯಮಾನಗಳನ್ನು ತಿಳಿಸಿದ್ದೇವೆ.ಆದರೆ ಟಿಕೆಟ್ ಕೈ ತಪ್ಪುವ ಬಗ್ಗೆ ಸುಳಿವು ಇರಲ್ಲ ನಿಷ್ಠಾವಂತ ಕರ‍್ಯಕರ್ತರ ಮತ್ತು ಸ್ವಕ್ಷೇತ್ರದ ಅಕಾಂಕ್ಷಿ ಪರ ಇರುತ್ತೇವೆ ಎಂದರು.
ಜಾರಕಿಹೊಳಿ ವಿರುದ್ಧ ರೆಬಲ್, ಕಾಂಗ್ರೆಸ್ ಸೇರಲು 3 ಶರತ್ತು ಇಟ್ಟ ಲಕ್ಷ್ಮಣ ಸವದಿ!
ಪಕ್ಷದ ಪದಾಧಿಕಾರಿಗಳು ರಾಜೀನಾಮೆ ನೀಡುವುದಾಗಿ ಎಚ್ಚರಿಕೆ
ಬಿಜೆಪಿ ಪಕ್ಷವು ಈ ಬಾರಿ ಸ್ವಕ್ಷೇತ್ರ ಆಕಾಂಕ್ಷಿ ಯಾಗಿದ್ದ ವಿ.ಮೋಹನ್ ಕೃಷ್ಣ ಅವರಿಗೆ ಟಿಕೆಟ್ ನೀಡುತ್ತದೆ ಎಂಬ ವಿಶ್ವಾಸನೆ ಇತ್ತು.ಅನೇಕ ಸರ್ವೇಗಳು,ಪದಾಧಿಕಾರಿಗಳ ಮತದಾನದಲ್ಲಿಯೂ ಗೆಲುವು ಸಾಧಿಸಿದ್ದ ಇವರಿಗೆ ಟಿಕೆಟ್ ಕೈ ತಪ್ಪಲು ಕಾರಣಗಳು ಗೊತ್ತಿಲ್ಲ ಕೂಡಲೇ ವರಿಷ್ಠರು ಪುನಃ ಪರಿಶೀಲಿಸಿ ಬಿ.ಪಾರಂ ಹಂಚಬೇಕು ಇಲ್ಲದಿದ್ದರೆ ತಮ್ಮ ಹುದ್ದೆಗಳಿಗೆ ರಾಜಿನಾಮೆ ನೀಡುತ್ತೇವೆಂದು ಹಲವು ಪದಾಧಿಕಾರಿಗಳು ತಿಳಿಸಿದ್ದಾರೆ.
ಇಂದು ಸಂಜೆ ಲಕ್ಷ್ಮಣ್ ಸವದಿ ಕಾಂಗ್ರೆಸ್ ಸೇರ್ಪಡೆ, ಅಥಣಿಯಿಂದ ಟಿಕೆಟ್, ಕುಮಟಳ್ಳಿ ವಿರುದ್ಧ
ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ
ಪ್ರಬಲ ಆಕಾಂಕ್ಷಿಯಾಗಿದ್ದ ವಿ.ಮೋಹನ್ ಕೃಷ್ಣಗೆ ಟಿಕೆಟ್ ಕೈ ತಪ್ಪಿದ್ದು,ಅವರು ಪಕ್ಷೇತರ, ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ಧಿಸುವುದೇ ಅಥವಾ ಮುಂದಿನ ನಡೆಯ ಬಗ್ಗೆ ನಿಷ್ಠಾವಂತ ಕರ‍್ಯಕರ್ತರು, ಮುಖಂಡರು, ಅಭಿಮಾನಿಗಳು 2 ದಿನಗಳನ್ನು ತಮ್ಮ ಅಭಿಪ್ರಾಯವನ್ನು ತಿಳಿಸಬೇಕೆಂದು ಎಲ್ಲರ ತಿರ್ಮಾನದಂತೆ ತೆಗೆದುಕೊಳ್ಳಲು ಮೋಹನ್ ಕೃಷ್ಣಾ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಕೆಡಿಎ ಮಾಜಿ ಅಧ್ಯಕ್ಷ ಮುನಿರತ್ನಂ ನಾಯ್ಡು, ನವೀನ್ ರಾಮ್ ನಾಯ್ಡು, ಗ್ರಾಪಂ ಅಧ್ಯಕ್ಷ ರಘು, ರಮಾದೇವಿ ಮುರಳಿ, ಗ್ರಾಪಂ ಉಪಾಧ್ಯಕ್ಷರಾದ ಅರುಣ್, ಸೇರಿದಂತೆ ಸಾವಿರಾರು ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.