ರಾಜ್ಯ ಸರ್ಕಾರ ಅನಗತ್ಯ ಹುದ್ದೆ ಸೃಷ್ಟಿ ಮಾಡುತ್ತಿರುವುದರಿಂದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಸಿಕ್ಕಸಿಕ್ಕವರಿಗೆಲ್ಲಾ ಸಂಪುಟ ದರ್ಜೆಯ ಸ್ಥಾನಮಾನ ನೀಡುತ್ತಿರುವುದರಿಂದ ಕೋಟಿಗಟ್ಟಲೆ ಹಣ ಪೋಲಾಗುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಬೆಂಗಳೂರು (ಮಾ.02): ರಾಜ್ಯ ಸರ್ಕಾರ ಅನಗತ್ಯ ಹುದ್ದೆ ಸೃಷ್ಟಿ ಮಾಡುತ್ತಿರುವುದರಿಂದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಸಿಕ್ಕಸಿಕ್ಕವರಿಗೆಲ್ಲಾ ಸಂಪುಟ ದರ್ಜೆಯ ಸ್ಥಾನಮಾನ ನೀಡುತ್ತಿರುವುದರಿಂದ ಕೋಟಿಗಟ್ಟಲೆ ಹಣ ಪೋಲಾಗುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಬೆವರಿನ ಫಲವಾಗಿ ಖಜಾನೆಗೆ ಹಣ ಬರುತ್ತದೆ. ಆದರೆ ಸಿಕ್ಕಸಿಕ್ಕವರಿಗೆಲ್ಲಾ ಸಂಪುಟ ದರ್ಜೆಯ ಸ್ಥಾನಮಾನ ನೀಡುವುದರಿಂದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಆರ್ಥಿಕ ಸಚಿವರಾಗಿ ಇಷ್ಟಬಂದಂತೆ ಹಣ ಖರ್ಚು ಮಾಡುತ್ತೇನೆ ಎಂಬ ಮನೋಭಾವ ಒಳ್ಳೆಯದಲ್ಲ. 

ಸಿಎಂ ಸಿದ್ದರಾಮಯ್ಯ ಅವರು ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದೇವೆ. ನಮ್ಮನ್ನು ಯಾರೂ ಪ್ರಶ್ನಿಸಬಾರದು ಎಂಬ ಮನೋಭಾವ ಸರಿಯಲ್ಲ ಎಂದರು. ಮುಖ್ಯಮಂತ್ರಿ ಕಚೇರಿಯಲ್ಲೇ ಸಂವಿಧಾನಬಾಹಿರವಾಗಿ ಅನೇಕ ಹುದ್ದೆಗಳನ್ನು ಸೃಷ್ಟಿ ಮಾಡಿ ಅನವಶ್ಯಕವಾಗಿ ದುಂದುವೆಚ್ಚ ಮಾಡಲಾಗುತ್ತಿದೆ. ಮೊದಲು ಅವರ ಕಚೇರಿಯಿಂದಲೇ ಹಣ ಪೋಲು ಮಾಡುವುದಕ್ಕೆ ಕಡಿವಾಣ ಹಾಕಬೇಕು. ಅನವಶ್ಯಕ ವೆಚ್ಚ ಹೆಚ್ಚಾದರೆ ರಾಜ್ಯದ ಅಭಿವೃದ್ಧಿಗೆ ಹೊಡೆತ ಬೀಳುತ್ತದೆ ಎಂದು ಎಚ್ಚರಿಕೆ ನೀಡಿದರು.

ಶ್ವೇತಪತ್ರ ಹೊರಡಿಸಲು ಆಗ್ರಹ: ಪಂಚ ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದ ಹಣಕಾಸಿನ ಪರಿಸ್ಥಿತಿ ಮುಗ್ಗರಿಸಿ ಬಿದ್ದಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸಿನ ಸ್ಥಿತಿಗತಿ ಕುರಿತು ಜನರ ಮುಂದೆ ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು. ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ತಜ್ಞ ಮೋಹನ್ದಾಸ್ ಪೈ ಅವರು ಆರ್ಥಿಕ ಪರಿಸ್ಥಿತಿ ಕುರಿತು ಆತಂಕ ವ್ಯಕ್ತಪಡಿಸಿರುವಾಗಲೇ, ರಾಜ್ಯ ಸರ್ಕಾರ ಸಾರಿಗೆ ಇಲಾಖೆಯ ನಾಲ್ಕು ನಿಗಮಕ್ಕೆ ಎರಡು ಸಾವಿರ ಕೋಟಿ ಸಾಲ ಪಡೆಯಲು ಒಪ್ಪಿಗೆ ನೀಡಿದೆ. 

ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡಬೇಕಿಲ್ಲ, ಸರ್ಟಿಫಿಕೇಟ್ ಕೊಟ್ಟರೆ ಸಾಕು: ಸಂಸದ ಯದುವೀರ್‌

ಇದನ್ನು ನೋಡಿದರೆ ಆರ್ಥಿಕ ಸ್ಥಿತಿ ಹದಗೆಟ್ಟು ಕುತ್ತಿಗೆ ಹಿಸುಕಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ ಎಂದರು. ವಿಪಕ್ಷ ನಾಯಕರೂ ಕೂಡ ಆರ್ಥಿಕ ಸ್ಥಿತಿಗತಿ ಕುರಿತು ಮಾತನಾಡುತ್ತಿಲ್ಲ. ಸಾಲ ಮರುಪಾವತಿಗೆ ಪರದಾಡುತ್ತಿರುವ ಸಂದರ್ಭದಲ್ಲಿಯೇ ಮತ್ತೆ ಸಾರಿಗೆ ಇಲಾಖೆಗೆ ಸಾಲ ಮಂಜೂರಾಗಲಿದೆಯೇ ಅಥವಾ ಇಲ್ಲವೇ ನೋಡಬೇಕು. ಶೇ. 18ರಷ್ಟು ಬಡ್ಡಿ ಕಟ್ಟಬೇಕು. ಸಿದ್ದರಾಮಯ್ಯ ಅವರ ಕೊಡುಗೆಗಳಿಂದ ಆರ್ಥಿಕತೆ ಅಧೋಗತಿಗೆ ಬಂದು ನಿಂತಿದೆ ಎಂದು ಅವರು ಟೀಕಿಸಿದರು.