ವಿಪಕ್ಷ ನಾಯಕನಿಲ್ಲದೇ ಬಜೆಟ್ ಮಂಡನೆ, ಬಿಜೆಪಿಯವರಿಗೆ ನಾಚಿಕೆಗೇಡಿನ ಸಂಗತಿ: ಎಚ್.ವಿಶ್ವನಾಥ್
ರಾಜ್ಯದ ಇತಿಹಾಸದಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ ಎರಡೂ ಸದನಗಳಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ಇದೇ ಮೊದಲ ಬಾರಿಗೆ ಬಜೆಟ್ ಮಂಡನೆಯಾಗಿರುವುದು ನಾಚಿಕೆಗೇಡಿನ ಸಂಗತಿ. ಇದು ಬಿಜೆಪಿಯಲ್ಲಿನ ಅಸಂಘಟನೆ, ಅಸಹಾಯಕತೆಯನ್ನು ತೋರಿಸುತ್ತದೆ. ಸದ್ಯ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯೇ ವಿರೋಧ ಪಕ್ಷದ ನಾಯಕರಾಗಿದ್ದಾರೆ ಎಂದು ವ್ಯಂಗ್ಯವಾಡಿದ ಎಚ್. ವಿಶ್ವನಾಥ್
ಮೈಸೂರು(ಜು.10): ಈ ಬಾರಿಯ ರಾಜ್ಯ ಬಜೆಟ್ ವಿರೋಧ ಪಕ್ಷದ ನಾಯಕನಿಲ್ಲದೇ ಮಂಡನೆ ಆಗಿದ್ದು, ಇದು ಬಿಜೆಪಿಯವರಿಗೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಕಿಡಿಕಾರಿದರು.
ರಾಜ್ಯದ ಇತಿಹಾಸದಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ ಎರಡೂ ಸದನಗಳಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ಇದೇ ಮೊದಲ ಬಾರಿಗೆ ಬಜೆಟ್ ಮಂಡನೆಯಾಗಿರುವುದು ನಾಚಿಕೆಗೇಡಿನ ಸಂಗತಿ. ಇದು ಬಿಜೆಪಿಯಲ್ಲಿನ ಅಸಂಘಟನೆ, ಅಸಹಾಯಕತೆಯನ್ನು ತೋರಿಸುತ್ತದೆ. ಸದ್ಯ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯೇ ವಿರೋಧ ಪಕ್ಷದ ನಾಯಕರಾಗಿದ್ದಾರೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
ಪೆನ್ ಡ್ರೈವ್ ಹೆಸರಿನಲ್ಲಿ ಕುಮಾರಸ್ವಾಮಿ ದಂಧೆ: ಸಚಿವ ಕೆ.ಎನ್. ರಾಜಣ್ಣ
ಬಜೆಟ್ ಸಮರ್ಥನೆ
ಈ ಬಾರಿಯ ಬಜೆಟ್‌ನಲ್ಲಿ 5 ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಪಾಲಿಗೆ ಆಶಾದಾಯಕವಾಗಿದೆ. ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಹೆಚ್ಚು ಪ್ರವಾಸ ಮಾಡುವುದರಿಂದ ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತದೆ. ಒಂದು ಕುಟುಂಬ ಯಾವುದೋ ಪ್ರವಾಸಿ ತಾಣಕ್ಕೊ, ದೇವಸ್ಥಾನಕ್ಕೊ ಹೋದರೆ ಅರಿಶಿಣ, ಕುಂಕುಮ, ತೆಂಗಿನ ಕಾಯಿ, ಕಡ್ಲೆಪುರಿ, ಬಟ್ಟೆಸೇರಿದಂತೆ ಅನೇಕ ಪದಾರ್ಥಗಳನ್ನು ಕೊಂಡುಕೊಳ್ಳುತ್ತಾರೆ. ಇದರಿಂದ ಸಣ್ಣಪುಟ್ಟವ್ಯಾಪಾರ ಮಾಡುವವರ ಹೊಟ್ಟೆ ತುಂಬುತ್ತದೆ. ಜೊತೆಗೆ ಸರ್ಕಾರಕ್ಕೂ ಆದಾಯ ಬರುತ್ತದೆ ಎಂದು ಅವರು ಸಮರ್ಥಿಸಿಕೊಂಡರು.
Karnataka Budget 2023: ಹಳೇ ಮೈಸೂರಿಗೆ ಸಿದ್ದರಾಮಯ್ಯ ಬಂಪರ್ ಕೊಡುಗೆ..!
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಜನಾಂಗದ ಬಜೆಟ್ ಮಂಡಿಸಿದ್ದಾರೆ. ಅನ್ನ, ಅಕ್ಷರ, ದಾಸೋಹದ ಜೊತೆಗೆ ಮಹಿಳಾ ಸಬಲೀಕರಣ, ಸಮಾಜ ಕಲ್ಯಾಣಕ್ಕೆ ಒತ್ತುಕೊಟ್ಟಿರುವುದು ಉತ್ತಮ ಬೆಳವಣಿಗೆ. ಇದರ ಜೊತೆಗೆ ಇದೇ ಮೊದಲ ಬಾರಿಗೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಅನುದಾನ ನೀಡಿರುವುದು ಮೆಚ್ಚುವಂತದ್ದಾಗಿದೆ ಎಂದು ಅವರು ಹೇಳಿದರು.
ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಮಾಜಿ ಪ್ರಧಾನಿ ಮಗನಾಗಿ ಜೇಬಿನಲ್ಲಿ ಪೆನ್‌ಡ್ರೈವ್ ಇಟ್ಟುಕೊಂಡು ಇದನ್ನು ಹೊರಗೆ ಬಿಡುತ್ತೇನೆ ಎಂದು ತೋರಿಸಿ ಹೆದರಿಸುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಶೋಭಾಯಮಾನವಲ್ಲ. ಪೆನ್ ಡ್ರೈವ್ ಇಟ್ಟುಕೊಂಡು ಇದರಲ್ಲಿ ಹಲವು ದಾಖಲೆಗಳಿವೆ ಎಂದು ಹೆದರಿಸುವುದು ಓರ್ವ ದೊಡ್ಡ ರಾಜಕಾರಣಿಗೆ ಗೌರವ ತರುವುದಿಲ್ಲ. ಅದೇನಿದೆ ಎಂಬುದನ್ನು ಕೂಡಲೇ ಹೊರಗೆ ಬಿಡಲಿ ಎಂದು ಅವರು ಆಗ್ರಹಿಸಿದರು.