Asianet Suvarna News Asianet Suvarna News

Council Election karnataka :ಮೈಸೂರಲ್ಲಿ ತೀವ್ರ ಪೈಪೋಟಿ - ಜೊತೆಗೆ ವಾಟಾಳ್ ಪ್ರಯತ್ನ

  • ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೇಲ್ಮನೆಗೆ ಚುನಾವಣೆ -  ಹಳ್ಳಿ ಹಳ್ಳಿ ಸುತ್ತುತ್ತಿರುವ ಮುಖಂಡರು 
  •  ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ನಡುವೆ ತ್ರಿಕೋನ ಪೈಪೋಟಿ
  •  ಇಂದಿನಿಂದ ಮತ್ತಷ್ಟು ರಂಗು, ಚಾಮರಾಜನಗರದಲ್ಲಿ ಕೈ ಸಮಾವೇಶ
     
MLC Election Karnataka Tough Fight Between Congress JDS BJP in Mysore snr
Author
Bengaluru, First Published Nov 29, 2021, 2:40 PM IST

ವರದಿ :  ಅಂಶಿ ಪ್ರಸನ್ನಕುಮಾರ್‌

 ಮೈಸೂರು (ನ.29):  ಮೈಸೂರು- ಚಾಮರಾಜನಗರ (Mysuru - chamarajanagar) ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ಡಿ.10 ರಂದು ಮೇಲ್ಮನೆಗೆ ನಡೆಯುವ ಚುನಾವಣಾ ಪ್ರಚಾರ ನಿಧಾನವಾಗಿ ರಂಗೇರುತ್ತಿದೆ. ಅಭ್ಯರ್ಥಿಗಳು ತಮ್ಮ ಪಕ್ಷದ ಶಾಸಕರು, ಮಾಜಿ ಶಾಸಕರ ಜೊತೆ ಹಳ್ಳಿ ಹಳ್ಳಿ ಸುತ್ತಿ, ಮತಬೇಟೆ ಆರಂಬಿಸಿದ್ದಾರೆ.  ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddatamaiah) ಅವರ ನೇತೃತ್ವದಲ್ಲಿ ಇಂದು ಚಾಮರಾಜನಗರದಲ್ಲಿ ಕಾಂಗ್ರೆಸ್‌ (Congress) ಜನಜಾಗೃತಿ ಸಮಾವೇಶ ಏರ್ಪಡಿಸಿದೆ. ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ- ಈ ಮೂರು ಪ್ರಮುಖ ಪಕ್ಷಗಳ ಮತ್ತಷ್ಟು ನಾಯಕರು ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ.

ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಿ, ನಿಯಮಿತವಾಗಿ ಚುನಾವಣೆ (Election) ನಡೆಸಲು ಆರಂಭಿಸಿದ ನಂತರ ಈವರೆಗೆ ಐದು ಚುನಾವಣೆಗಳು ನಡೆದಿದ್ದು, ಮೊದಲ ಬಾರಿ ಕಾಂಗ್ರೆಸ್‌ನ ಟಿ.ಎನ್‌. ನರಸಿಂಹಮೂರ್ತಿ- ಜನತಾಪಕ್ಷದ ವಿ.ಎಚ್‌. ಗೌಡ, ಎರಡನೇ ಬಾರಿ ಕಾಂಗ್ರೆಸ್‌ನ ಸಿ. ರಮೇಶ್‌- ಜನತಾದಳದ ವೈ. ಮಹೇಶ್‌, ಮೂರನೇ ಬಾರಿ ಕಾಂಗ್ರೆಸ್‌ನ (Congress) ಎನ್‌. ಮಂಜುನಾಥ್‌- ಜೆಡಿಎಸ್‌ನ ಬಿ. ಚಿದಾನಂದ, ನಾಲ್ಕನೇ ಬಾರಿ ಜೆಡಿಎಸ್‌ನ ಸಂದೇಶ್‌ ನಾಗರಾಜ್‌- ಬಿಜೆಪಿಯ ಪ್ರೊ.ಕೆ.ಆರ್‌. ಮಲ್ಲಿಕಾರ್ಜನಪ್ಪ ಗೆದ್ದಿದ್ದರು. ಮಲ್ಲಿಕಾರ್ಜನಪ್ಪ ಅವರು 2013ರ ವಿಧಾನಸಭಾ ಚುನಾವಣೆಯಲ್ಲಿ (Assembly Election) ಚಾಮರಾಜನಗರ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಿಂದ ಇನ್ನೂ ಎರಡೂವರೆ ವರ್ಷ ಇರುವಾಗಲೇ ರಾಜಿನಾಮೆ ನೀಡಿದ್ದರಿಂದ ಉಪ ಚುನಾವಣೆ ನಡೆಯಿತು. ಆಗ ಕಾಂಗ್ರೆಸ್‌ನ ಆರ್‌. ಧರ್ಮಸೇನ ಚುನಾಯಿತರಾಗಿದ್ದರು. ಬಿಜೆಪಿ ಹಾಗೂ ಜೆಡಿಎಸ್‌ ಸ್ಪರ್ಧಿಸಿರಲಿಲ್ಲ. ಕೆಜೆಪಿಯಿಂದ ಯು.ಎಸ್‌. ಶೇಖರ್‌ ಕಣದಲ್ಲಿದ್ದರು. 2015ರಲ್ಲಿ ನಡೆದ ಐದನೇ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್‌. ಧರ್ಮಸೇನ ಹಾಗೂ ಜೆಡಿಎಸ್‌ನ ಸಂದೇಶ್‌ ನಾಗರಾಜ್‌ ಪುನಾರಾಯ್ಕೆಯಾಗಿದ್ದರು. ಬಿಜೆಪಿಯ (BJP) ಆರ್‌. ರಘು ಪರಾಭವಗೊಂಡಿದ್ದರು. ಈ ಬಾರಿ ಧರ್ಮಸೇನ ಹಾಗೂ ಸಂದೇಶ್‌ ನಾಗರಾಜ್‌ ಅವರಿಗೆ ಆಯಾ ಪಕ್ಷಗಳು ಟಿಕೆಟ್‌ ನಿರಾಕರಿಸಿವೆ. ಆದರೆ ರಘುಗೆ ಬಿಜೆಪಿ ಮತ್ತೊಂದು ಅವಕಾಶ ನೀಡಿದೆ.

ಆರು ವರ್ಷಗಳ ಹಿಂದೆ ನಡೆದ ಚುನಾವಣೆಯ (election) ನಂತರ ರಾಜಕೀಯವಾಗಿ ಸಾಕಷ್ಟುಬದಲಾವಣೆಗಳಾಗಿವೆ. ಮೊದಲೆಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆ ಎಂದರೇ ಕಾಂಗ್ರೆಸ್‌ ಹಾಗೂ ಜನತಾ ಪರಿವಾರಕ್ಕೆ ತಲಾ ಒಂದೊಂದು ಸ್ಥಾನ ಎಂಬಂತಿತ್ತು. ಇದು 2010 ರಲ್ಲಿ ಸುಳ್ಳಾಗಿದೆ. ನಾನಾ ಕಾರಣಗಳಿಂದ ಬಿಜೆಪಿ ಕೂಡ ಈಗ ಪೈಪೋಟಿ ಕೊಡುವ ಮಟ್ಟಕ್ಕೆ ಬೆಳೆದಿದೆ. ಈ ಬಾರಿ ಗೆಲ್ಲಲು ಬಿಜೆಪಿ ಭಾರಿ ಪ್ರಯತ್ನ ಮಾಡುತ್ತಿದೆ.

ಕಾಂಗ್ರೆಸ್‌ನಿಂದ ಆರೋಗ್ಯ ಇಲಾಖೆಯ (Health Department) ನಿವೃತ್ತ ಯೋಜನಾ ನಿರ್ದೇಶಕ, ದಲಿತರಲ್ಲಿ ಎಡಗೈ ಸಮೂದಾಯದ ಡಾ.ಡಿ. ತಿಮ್ಮಯ್ಯಅವರಿಗೆ ಟಿಕೆಟ್‌ ನೀಡಿದೆ. ಬಿಜೆಪಿಯಿಂದ ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹಿಂದುಳಿದ ಸೂಕ್ಷ್ಮಾತಿಸೂಕ್ಷ್ಮ ಮಡಿವಾಳ ಜನಾಂಗಕ್ಕೆ ಸೇರಿದ ಆರ್‌. ರಘು ಎರಡನೇ ಬಾರಿ ಅದೃಷ್ಟಪರೀಕ್ಷಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿದ ಗ್ರಾಪಂ, ತಾಪಂ ಮಾಜಿ ಸದಸ್ಯ, ಕೇಂದ್ರ ಪರಿಹಾರ ಸಮಿತಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಎನ್‌. ಮಂಜೇಗೌಡ ಟಿಕೆಟ್‌ ಗಿಟ್ಟಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಜೆಡಿಎಸ್‌ ಪರವಾಗಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪಕ್ಷದ ಮುಖಂಡರ ಸಭೆ ನಡೆಸಿದ್ದರು.

ಶಾಸಕರಾದ ಸಾ.ರಾ. ಮಹೇಶ್‌, ಕೆ. ಮಹದೇವ್‌, ಎಂ. ಅಶ್ವಿನ್‌ಕುಮಾರ್‌ ಮೊದಲಾದವರು ಭಾಗವಹಿಸಿದ್ದರು. ಮತ್ತೊರ್ವ ಶಾಸಕ ಜಿ.ಟಿ. ದೇವೇಗೌಡ ಜೆಡಿಎಸ್‌ನಿಂದ ದೂರ ಉಳಿದಿದ್ದಾರೆ.

ಕಾಂಗ್ರೆಸ್‌ ನಾಮಪತ್ರ ಸಲ್ಲಿಕೆಗೂ ಮೊದಲು ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖಂಡರ ಸಭೆ ನಡೆಸಿದ್ದರು. ನಂತರ ಕಳೆದ ಮೂರು ದಿನಗಳಿಂದ ನಗರದಲ್ಲಿಯೇ ಉಳಿದು ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ತಂತ್ರ ರೂಪಿಸುತ್ತಿದ್ದಾರೆ.

ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ , ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಕೆ. ವೆಂಕಟೇಶ್‌, ತನ್ವೀರ್‌ ಸೇಠ್‌, ಸಿ. ಪುಟ್ಟರಂಗಶೆಟ್ಟಿ, ಶಾಸಕರಾದ ಆರ್‌. ನರೇಂದ್ರ, ಎಚ್‌.ಪಿ. ಮಂಜುನಾಥ್‌, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್‌ ಚಿಕ್ಕಮಾದು, ಮಾಜಿ ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್‌, ಕಳಲೆ ಕೇಶವಮೂರ್ತಿ, ಮುಖಂಡರಾದ ಡಿ. ರವಿಶಂಕರ್‌, ಸುನೀಲ್‌ ಬೋಸ್‌, ನಗರಾಧ್ಯಕ್ಷ ಆರ್‌. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ಚಾಮರಾಜನಗರ ಜಿಲಾಧ್ಯಕ್ಷ ಮರಿಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಆರ್‌. ಧರ್ಮಸೇನ ಮೊದಲಾದವರು ಪಾಲ್ಗೊಂಡಿದ್ದರು.

ಬಿಜೆಪಿ ಉಭಯ ಜಿಲ್ಲೆಗಳಲ್ಲಿ ಜನ ಸ್ವರಾಜ್‌ ಯಾತ್ರೆ (Jan swaraj Yatra) ನಡೆಸಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸಚಿವರಾದ ಕೆ.ಎಸ್‌. ಈಶ್ವರಪ್ಪ, ಆರ್‌. ಅಶೋಕ್‌, ಎಸ್‌.ಟಿ. ಸೋಮಶೇಖರ್‌ ಮೊದಲಾದವರು ಪ್ರಚಾರ ನಡೆಸಿದ್ದಾರೆ. ಅಲ್ಲದೇ ಶಾಸಕರಾದ ಎಸ್‌.ಎ. ರಾಮದಾಸ್‌, ಎಲ್‌. ನಾಗೇಂದ್ರ, ಬಿ. ಹರ್ಷವರ್ಧನ್‌, ಸಿ.ಎಸ್‌. ನಿರಂಜನಕುಮಾರ್‌ ಹಾಗೂ ಎನ್‌.ಮಹೇಶ್‌, ಮಾಜಿ ಶಾಸಕರಾದ ಡಾ.ಎನ್‌.ಎಲ್‌.ಭಾರತಿಶಂಕರ್‌, ಸಿ. ರಮೇಶ್‌ ಮೊದಲಾದವರು ಕೆಲಸ ಮಾಡುತ್ತಿದ್ದಾರೆ. ಸಂಸದರಾದ ಪ್ರತಾಪ್‌ ಸಿಂಹ, ವಿ. ಶ್ರೀನಿವಾಸಪ್ರಸಾದ್‌ ಅವರು ಕೂಡ ಸಾಥ್‌ ನೀಡಲಿದ್ದಾರೆ.

ಸೋಮವಾರದಿಂದ ಮೂರು ಪಕ್ಷಗಳ ಬೇರೆ ಬೇರೆ ನಾಯಕರು ಕೂಡ ಪ್ರಚಾರಕ್ಕೆ ಬರಲಿದ್ದಾರೆ. ಅಭ್ಯರ್ಥಿಗಳಾದ ರ್‌. ರಘು, ಡಾ.ಡಿ. ತಿಮ್ಯಯ್ಯ, ಸಿ.ಎನ್‌. ಮಂಜೇಗೌಡ ಕೂಡ ಉಭಯ ಜಿಲ್ಲೆಗಳಲ್ಲಿ ಓಡಾಡುತ್ತಿದ್ದಾರೆ.

ಗ್ರಾಪಂ ಸದಸ್ಯರೇ ನಿರ್ಣಾಯಕರು

ಮೈಸೂರು ಜಿಲ್ಲೆಯಲ್ಲಿ (Myduru District) ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ, ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಭದ್ರ ನೆಲೆ ಇದೆ. ಈ ಚುನಾವಣೆಯಲ್ಲಿ ಮತದಾರರೆಲ್ಲಾ ಚುನಾಯಿತ ಪ್ರತಿನಿಧಿಗಳು. ಈ ಬಾರಿ ಜಿಲ್ಲಾ ಹಾಗೂ ತಾಪಂ ಸದಸ್ಯರು ಇಲ್ಲ. ಉಳಿದವರು ನಗರಪಾಲಿಕೆ, ನಗರಸಭೆ, ಪುರಸಭೆ, ಗ್ರಾಪಂ ಸದಸ್ಯರು. ಈ ಪೈಕಿ ಗ್ರಾಪಂ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಪಂ ಚುನಾವಣೆ ಪಕ್ಷಾತೀತವಾಗಿ ನಡೆದಿದ್ದರೂ ಅವರೆಲ್ಲಾ ಒಂದಲ್ಲ ಒಂದು ಪಕ್ಷದಲ್ಲಿ ಗುರುತಿಸಿಕೊಂಡವರೇ. ಹೀಗಾಗಿ ಗೆಲ್ಲಲು ಮೂರು ಪ್ರಮುಖ ಪಕ್ಷಗಳ ಇಬ್ಬರಿಗೆ ಅವಕಾಶ. ಆದರೆ ಈ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತ ಹಾಕುವ ಅವಕಾಶ ಇರುವುದರಿಂದ ಗ್ರಾಪಂ ಸದಸ್ಯರು ಎಲ್ಲಾ ಪಕ್ಷಗಳಿಗೂ ಬೇಕು. ಹೀಗಾಗಿ ಯಾರು, ಯಾರ ಮತಬುಟ್ಟಿಗೆ ಕೈಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮರಳಿ ಯತ್ನ ಮಾಡುತ್ತಿರುವ ವಾಟಾಳ್‌ ನಾಗರಾಜ್‌

2008 ರಲ್ಲಿ ಚಾಮರಾಜನಗರ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ವಾಟಾಳ್‌ ನಾಗರಾಜ್‌ (Vatal Nagara) ಅವರು ವಿಧಾನಸಭೆ ಅಥವಾ ವಿಧಾನ ಪರಿಷತ್‌ ಪ್ರವೇಶಿಸಲು ಹರಸಾಹಸ ಮಾಡುತ್ತಿದ್ದಾರೆ. ಎಲ್ಲಾ ಚುನಾವಣೆಗಳಿಗೂ ಸ್ಪರ್ಧಿಸುತ್ತಿದ್ದಾರೆ. ಬೆಳಗಾವಿಯಿಂದಲೂ ಮೇಲ್ಮನೆ ಚುನಾವಣೆಯಲ್ಲಿ ಅದೃಷ್ಟಪರೀಕ್ಷೆ ಮಾಡಿದ್ದಾರೆ. ಪದವೀಧರ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು. ಇದೀಗ ಮೂರನೇ ಬಾರಿ ಸ್ಥಳೀಯ ಸಂಸ್ಥೆಗಳ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅವರು 2010 ರಲ್ಲಿ 57, 2016 ರಲ್ಲಿ 11 ಮತಗಳನ್ನು ಮಾತ್ರ ಪಡೆದಿದ್ದರು.

ಕಣದಲ್ಲಿರುವ ಇತರೆ ಅಭ್ಯರ್ಥಿಗಳು

ಕೆ.ಸಿ. ಬಸವರಾಜಸ್ವಾಮಿ, ಗುರುಲಿಂಗಯ್ಯ, ಆರ್‌. ಮಂಜುನಾಥ್‌

(ಎಲ್ಲರೂ ಪಕ್ಷೇತರರು)

ಮತದಾರರು ಹಾಗೂ ಮತಗಟ್ಟೆಗಳ (ಆವರಣದಲ್ಲಿರುವುದು) ವಿವರ

ಒಟ್ಟು ಮತದಾರರು- 6792 (393)

ಮೈಸೂರು ಜಿಲ್ಲೆ- 4,517 (259)

ಚಾಮರಾಜನಗರ ಜಿಲ್ಲೆ- 2,275 (134)

Follow Us:
Download App:
  • android
  • ios