ಪರಿಷತ್‌ : ಹಾಲಿ 6 ಸದಸ್ಯರ ಪೈಕಿ ಐವರಿಗೆ ಟಿಕೆಟ್‌ ಖಾತ್ರಿ - ಕೊಡಗಿನ ಸುನೀಲ್‌ ಸುಬ್ರಮಣಿಗೆ ಮಾತ್ರ ಅನುಮಾನ - ಶಿವಮೊಗ್ಗದಿಂದ ಶಂಕರಮೂರ್ತಿ ಪುತ್ರ ಅರುಣ್‌ಗೆ ಅವಕಾಶ - ಮೈಸೂರಿನಿಂದ ರಘು ಕೌಟಿಲ್ಯಗೆ ಟಿಕೆಟ್‌

ಬೆಂಗಳೂರು (ನ.11) : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ (MlC) ನಡೆಯುವ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯಿಂದ (BJP) ನಿವೃತ್ತಿಯಾಗುವ ಆರು ಹಾಲಿ ಸದಸ್ಯರ ಪೈಕಿ ಐದು ಮಂದಿಗೆ ಮತ್ತೆ ಟಿಕೆಟ್‌ (Ticket) ಸಿಗುವುದು ಬಹುತೇಕ ಖಾತ್ರಿಯಾಗಿದೆ.

ಕೊಡಗು (Kodagu) ಕ್ಷೇತ್ರದ ಸುನೀಲ್‌ ಸುಬ್ರಮಣಿ ಅವರಿಗೆ ಮತ್ತೆ ಟಿಕೆಟ್‌ ನೀಡಬೇಕೊ ಅಥವಾ ಅವರ ಸಹೋದರ ಸುಜಾ ಕುಶಾಲಪ್ಪ ಅವರಿಗೆ ನೀಡಬೇಕೊ ಎಂಬ ಗೊಂದಲ ಇತ್ಯರ್ಥವಾಗಬೇಕಾಗಿದೆ.

ಹಾಲಿ ಸದಸ್ಯರ ಪೈಕಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಪಸಭಾಪತಿ ಎಂ.ಕೆ.ಪ್ರಾಣೇಶ್‌, ಸರ್ಕಾರದ ಮುಖ್ಯ ಸಚೇತಕ ಮಹಂತೇಶ್‌ ಕವಟಗಿಮಠ, ಬಿ.ಟಿ.ಪಾಟೀಲ್‌, ಪ್ರದೀಪ್‌ ಶೆಟ್ಟರ್‌ ಅವರಿಗೆ ಟಿಕೆಟ್‌ ನೀಡಬೇಕು ಎಂದು ಬಿಜೆಪಿ ರಾಜ್ಯ ಘಟಕ ತೀರ್ಮಾನಿಸಿದೆ. ಕಳೆದ ಚುನಾವಣೆ ವೇಳೆ ತಾಂತ್ರಿಕ ಕಾರಣದಿಂದ ಕೊಡಗು ಕ್ಷೇತ್ರದ ಟಿಕೆಟ್‌ ತಪ್ಪಿಸಿಕೊಂಡ ಸುಜಾ ಕುಶಾಲಪ್ಪ ಅವರಿಗೆ ಈ ಬಾರಿ ನೀಡುವ ಮೂಲಕ ಅವರ ಸೇವೆಗೆ ಮನ್ನಣೆ ನೀಡಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಆ ವೇಳೆ ಸುಜಾ ಬದಲು ಸುನೀಲ್‌ ಅವರನ್ನು ಕಣಕ್ಕಿಳಿಸಲಾಗಿತ್ತು.

ಇನ್ನು ಮೈಸೂರಿನಿಂದ ಕಳೆದ ಬಾರಿ ಸ್ಪರ್ಧಿಸಿ ಅತ್ಯಲ್ಪ ಮತಗಳ ಅಂತರದಿಂದ ಸೋಲುಂಡಿದ್ದ ರಘು ಕೌಟಿಲ್ಯ ಅವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲು ಪಕ್ಷದ ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ. ಅದೇ ರೀತಿ ಶಿವಮೊಗ್ಗ ಕ್ಷೇತ್ರದಿಂದ ಪಕ್ಷದ ಹಿರಿಯ ನಾಯಕ ಡಿ.ಎಚ್‌.ಶಂಕರಮೂರ್ತಿ ಪುತ್ರ ಅರುಣ್‌ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಮೂರು ಪಕ್ಷಗಳಿಂದ ಪೈಪೋಟಿ

ಮಂಡ್ಯ ಕ್ಷೇತ್ರದಿಂದ ಜೆಡಿಎಸ್‌ನಿಂದ ಹಾಲಿ ವಿಧಾನ ಪರಿಷತ್‌ ಸದಸ್ಯ ಎನ್‌.ಅಪ್ಪಾಜಿಗೌಡ ಅಭ್ಯರ್ಥಿಯಾಗುವುದು ಬಹುತೇಕ ಅಂತಿಮವಾಗಿದೆ. ಕಾಂಗ್ರೆಸ್‌ನಿಂದ ಮಾಜಿ ಎಂಎಲ್ಸಿ ಸದಸ್ಯ ಬಿ.ರಾಮಕೃಷ್ಣ, ಎಂ.ಪುಟ್ಟೇಗೌಡ, ಎಂ.ಎಚ್‌.ಶಿವಕುಮಾರ್‌ ಪೈಪೋಟಿ ನಡೆಸುತ್ತಿದ್ದರೆ, ಬಿಜೆಪಿಯಿಂದ ಸಿ.ಪಿ.ಉಮೇಶ್‌, ಎಲೆಚಾಕನಹಳ್ಳಿ ಬಸವರಾಜು, ಬೂಕಳ್ಳಿ ಮಂಜುನಾಥ್‌, ಶೀಳನೆರೆ ಅಂಬರೀಶ್‌ ಅವರ ಹೆಸರುಗಳು ಚಲಾವಣೆಯಲ್ಲಿವೆ.

ಮೈಸೂರು- ಚಾಮರಾಜನಗರ: ಧರ್ಮಸೇನಗೆ ಮತ್ತೆ ಟಿಕೆಟ್‌?
ಕಾಂಗ್ರೆಸ್‌ನಿಂದ ಹಾಲಿ ಸದಸ್ಯ ಆರ್‌.ಧರ್ಮಸೇನ ಮತ್ತೆ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಈ ನಡುವೆ ಕೆ.ಮರೀಗೌಡ, ಸಿ.ಎನ್‌.ಮಂಜೇಗೌಡ, ಡಾ.ಡಿ. ತಿಮ್ಮಯ್ಯ, ಮಹದೇವ್‌, ಟಿ.ಮರಯ್ಯ, ಮುನಾವರ್‌ ಪಾಷ, ಚಲುವರಾಜು, ಪ್ರದ್ಯಮ್ನ ಆಲನಹಳ್ಳಿ ಟಿಕೆಟ್‌ ಕೇಳುತ್ತಿದ್ದಾರೆ. ಬಿಜೆಪಿಯಲ್ಲಿ ಸಿ.ಬಸವೇಗೌಡ, ಕಳೆದ ಬಾರಿ ಸೋಲುಂಡಿದ್ದ ಆರ್‌.ರಘು ಕೌಟಿಲ್ಯ ಅವರ ಹೆಸರಿದೆ. ಇದಲ್ಲದೇ ಇನ್ನೂ ತಾಂತ್ರಿಕವಾಗಿ ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯರಾಗಿರುವ ಸಂದೇಶ್‌ ನಾಗರಾಜ್‌ ಸಹ ಟಿಕೆಟ್‌ ಕೇಳುತ್ತಿದ್ದಾರೆ. ಜೆಡಿಎಸ್‌ನಲ್ಲಿ ಎನ್‌.ನರಸಿಂಹಸ್ವಾಮಿ, ಅಭಿಷೇಕ್‌, ವಿವೇಕಾನಂದ ಆಕಾಂಕ್ಷಿಗಳಾಗಿದ್ದಾರೆ.

ತುಮಕೂರು ಉಳಿಸಿಕೊಳ್ಳಲು ಜೆಡಿಎಸ್‌ ಇನ್ನಿಲ್ಲದ ಕಸರತ್ತು
ಕಳೆದ ಬಾರಿ ತುಮಕೂರು ಜಿಲ್ಲೆಯಿಂದ ಬೆಮೆಲ್‌ ಕಾಂತರಾಜು ಅವರು ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಈಗ ಅವರು ಕಾಂಗ್ರೆಸ್‌ ಪಕ್ಷದತ್ತ ಕಾಲಿಟ್ಟಿದ್ದಾರೆ. ಆದರೆ ಅವರು ಈ ಬಾರಿ ಸ್ಪರ್ಧಿಸುತ್ತಿಲ್ಲ. ಕಾಂಗ್ರೆಸ್‌ ಪಕ್ಷದಿಂದ ಮಾಜಿ ಶಾಸಕ ಕೆ.ಎನ್‌. ರಾಜಣ್ಣರ ಪುತ್ರರಾಜೇಂದ್ರ ಹೆಸರು ಮುಂಚೂಣಿಯಲ್ಲಿದೆ. ಇನ್ನು ಬಿಜೆಪಿಯಿಂದ ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಆರ್‌.ಹುಲಿನಾಯ್ಕರ್‌ ಅಥವಾ ಅವರ ಪುತ್ರಿ ಅಂಬಿಕಾರನ್ನು ಕಣಕ್ಕಿಳಿಸಲು ಪಕ್ಷ ಯೋಚಿಸುತ್ತಿದೆ. ಅರ್ಧಕ್ಕೂ ಹೆಚ್ಚು ಮಹಿಳಾ ಮತದಾರರಿರುವುದರಿಂದ ಮಹಿಳಾ ಮತವನ್ನು ಒಗ್ಗೂಡಿಸುವ ಸಲುವಾಗಿ ಅಂಬಿಕಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ಗಂಭೀರವಾಗಿ ಯೋಜಿಸುತ್ತಿದೆ. ಇನ್ನು ಕಳೆದ ಬಾರಿ ಈ ಕ್ಷೇತ್ರವನ್ನು ಗೆದ್ದಿದ್ದ ಜೆಡಿಎಸ್‌ ಮತ್ತೆ ಸ್ಥಾನ ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದೆ. ಈ ಹಿಂದೆ ಜಿ.ಪಂ. ಸದಸ್ಯರಾಗಿದ್ದ ರಾಮಾಂಜಿನಪ್ಪ ಅಥವಾ ಅವರ ಪುತ್ರ ಅನಿಲ್‌ರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.

ಕೋಲಾರದಲ್ಲಿ ಹೊಸಮುಖಕ್ಕೆ ಜೆಡಿಎಸ್‌ ಹುಡುಕಾಟ
ಕೋಲಾರದಲ್ಲಿ ಜೆಡಿಎಸ್‌ನ ಸಿ.ಆರ್‌.ಮನೋಹರ್‌ ಅವಧಿ ಪೂರ್ಣಗೊಳ್ಳಲಿದ್ದು, ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳು ಕಸರತ್ತು ಆರಂಭಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಎಂ.ಎಲ್‌.ಅನಿಲ್‌ ಕುಮಾರ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಅನಂದರೆಡ್ಡಿ, ಮ್ಯಾಕಲ ನಾರಾಯಣ ಸ್ವಾಮಿ, ಊರುಬಾಗಿಲು ಶ್ರೀನಿವಾಸ್‌ ಕೂಡ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಸೂಚಿಸಿದವರಿಗೆ ಕಾಂಗ್ರೆಸ್‌ ಟಿಕೆಟ್‌ ಗ್ಯಾರಂಟಿ ಎನ್ನಲಾಗಿದೆ.

ಇನ್ನು ಚಿಕ್ಕಬಳ್ಳಾಪುರದಿಂದ ಕಾಂಗ್ರೆಸ್‌ನ ಕೇಶವರೆಡ್ಡಿ, ಚೇತನಗೌಡ, ಮುನೇಗೌಡ ಕೂಡ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ ಮನೋಹರ್‌ ಗೆದ್ದ ನಂತರ ಕೋಲಾರದತ್ತ ತಲೆ ಹಾಕಿದ್ದೇ ಅಪರೂಪ. ಹೀಗಾಗಿ ಕ್ಷೇತ್ರದಲ್ಲಿ ಹೊಸ ಮುಖಂಡನಿಗಾಗಿ ಜೆಡಿಎಸ್‌ ಪರಿಶೀಲನೆ ನಡೆಸಿದೆ. ಬಿಜೆಪಿಯಲ್ಲಿ ಇನ್ನೂ ಆಕಾಂಕ್ಷಿಗಳು ಕಂಡುಬಂದಿಲ್ಲ. ಬೆಂಗಳೂರಿನ ಒಂದಿಬ್ಬರು ಟಿಕೆಟ್‌ ಕೋರಿ ಸಂಸದ ಮುನಿಸ್ವಾಮಿ, ಸಚಿವ ಡಾ.ಸುಧಾಕರ್‌ಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ