Asianet Suvarna News Asianet Suvarna News

Council Election Karnataka : ಬಹು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದೆ ಕಾಂಗ್ರೆಸ್ : ಭಾರಿ ಅಂತರಕ್ಕೆ ತಂತ್ರ

  • ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆ
  •  ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹು ಎಚ್ಚರಿಕೆಯ ಹೆಜ್ಜೆ
MLC Election  Congress Leaders Plan To win Mysuru Chamarajanagar  snr
Author
Bengaluru, First Published Dec 7, 2021, 10:53 AM IST

ವರದಿ :  ಅಂಶಿ ಪ್ರಸನ್ನಕುಮಾರ್‌

 ಮೈಸೂರು (ಡಿ.07):  ಮೈಸೂರು - ಚಾಮರಾಜನಗರ (Mysuru - Chamarajanagar) ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ (Election) ಕಾಂಗ್ರೆಸ್‌ (Congress) ಬಹು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದೆ. ಅಲ್ಲದೇ ಉಭಯ ಜಿಲ್ಲೆಗಳಲ್ಲಿ ಒಗ್ಗಟ್ಟಿನ ಹೋರಾಟವನ್ನು ಪ್ರದರ್ಶಿಸುತ್ತಿದೆ. ಇದಕ್ಕೆ 2009ರ ಚುನಾವಣೆಯಲ್ಲಿ ಆದ ಸೋಲು ಕಾರಣ. 1988 ರಿಂದ ಈವರೆಗೆ ಈ ಕ್ಷೇತ್ರದಿಂದ ಒಂದು ಉಪ ಚುನಾವಣೆ(By Election) ಸೇರಿದಂತೆ ಆರು ಚುನಾವಣೆಗಳು ನಡೆದಿವೆ. ಕಾಂಗ್ರೆಸ್‌ 2009 ರಲ್ಲಿ ಮಾತ್ರ ಸೋತಿದೆ. 1997ರ ಚುನಾವಣೆಯಲ್ಲಿ ಎಂ. ವೆಂಕಟರಾಮು ಬಂಡಾಯದ ಬಾವುಟ ಹಾರಿಸಿದ್ದರಿಂದ ಗೆಲುವಿಗಾಗಿ ಎರಡನೇ ಸುತ್ತಿನವರೆಗೆ ಕಾಯಬೇಕಾಯಿತು. ಉಳಿದೆಲ್ಲಾ ಚುನಾವಣೆಗಳಲ್ಲೂ(Election) ಪ್ರಥಮ ಸುತ್ತಿನಲ್ಲಿಯೇ ಜಯಭೇರಿ ಬಾರಿಸಿದೆ.

ಮೊದಲ ಮೂರು ಚುನಾವಣೆಗಳಲ್ಲಿ (Election) ಹಣ, ಜಾತಿ ಅಷ್ಟಾಗಿ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಕಾಂಗ್ರೆಸ್‌ (Congress) ಹಾಗೂ ಜನತಾ ಪರಿವಾರದಿಂದ ನಾಮಪತ್ರ ಸಲ್ಲಿಸಿದರೆ ಸಾಕು ಗೆಲವು ಖಚಿತವಾಗಿತ್ತು. ಆದರೆ ನಾಲ್ಕನೇ ಚುನಾವಣೆ (Election) ವೇಳೆಗೆ ‘ರಾಜಕೀಯ ಹವಾಮಾನ‘ ಬದಲಾಗಿತ್ತು. ಇಡೀ ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ ರಾಜ್ಯದಲ್ಲಿ ಬಿಜೆಪಿ (BJP) ಅಧಿಕಾರ ಹಿಡಿದಿತ್ತು. ಈ ಚುನಾವಣೆಯಲ್ಲಿ ಜಾತಿಯ ಪ್ರಭಾವದ ಜೊತೆಗೆ ಹಣ, ಆಣೆ- ಪ್ರಮಾಣ ಚಾಲ್ತಿಗೆ ಬಂದವು. 15 ಸಾವಿರ, 10 ಸಾವಿರ ಹಂಚಿದವರು ಗೆದ್ದರು. 5 ಸಾವಿರದೊಳಗೆ ನೀಡಿದವರು ಸೋತರು. ಇದು ಕಾಂಗ್ರೆಸ್‌ಗೆ ತೀವ್ರ ಆಪಾತ ನೀಡಿತು. ಹೀಗಾಗಿ ಪಾಠ ಕಲಿತ ಕಾಂಗ್ರೆಸ್‌ ಅಲ್ಲಿಂದ ಇಲ್ಲಿಯವರೆಗೆ ಈ ಕ್ಷೇತ್ರದಿಂದ ನಡೆಯುವ ಪ್ರತಿ ಚುನಾವಣೆಯಲ್ಲೂ (Election) ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. 2013ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ (Congress) ಅಧಿಕಾರದಲ್ಲಿತ್ತು. ಅಲ್ಲದೇ ಏಕ ಸ್ಥಾನಕ್ಕೆ ಚುನಾವಣೆ ನಡೆದಿದ್ದರಿಂದ ಸುಲಭವಾಗಿ ಗೆದ್ದಿತು. 2015 ರಲ್ಲೂ ಚುನಾವಣೆ ನಡೆದಾಗಲೂ ಪಕ್ಷ ಅಧಿಕಾರದಲ್ಲಿತ್ತು. ಅಲ್ಲದೇ ‘ಸಂಪನ್ಮೂಲ’ದ ಕೊರತೆ ಕಾಡಲಿಲ್ಲ.

ಈ ಬಾರಿ ಕೂಡ ವಿಧಾನಸಭಾ ಚುನಾವಣೆಯಲ್ಲಿ (Assembly Election) ಟಿಕೆಟ್‌ ನೀಡಲು ಸಾಧ್ಯವಾಗದ ದಲಿತರಲ್ಲಿ ಎಡಗೈ ಸಮೂದಾಯಕ್ಕೆ ಆದ್ಯತೆ ನೀಡಿದೆ. ‘ಸಂಪನ್ಮೂಲ’ ನೋಡಿಕೊಂಡೆ ಆರೋಗ್ಯ ಇಲಾಖೆ (Health Department) ನಿವೃತ್ತ ಯೋಜನಾ ನಿರ್ದೇಶಕ ಡಾ.ಡಿ.ತಿಮ್ಮಯ್ಯ (D thimmaiah) ಅವರಿಗೆ ಟಿಕೆಟ್‌ ನೀಡಿದೆ.

ಇದಲ್ಲದೇ ಮಾಜಿ ಮುಖ್ಯಮಂತ್ರಿ, ಹಾಲಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ನಾಯಕತ್ವದಿಂದಾಗಿ ಎಲ್ಲರನ್ನು ಒಗ್ಗಟ್ಟಾಗಿ ಕರೆದಕೊಂಡು ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಪ್ರವೃತ್ತಿ ತೋರುತ್ತಿದೆ. ಪರಿಣಾಮ ಕಾಂಗ್ರೆಸ್‌ (Congress) ವಲಯದಲ್ಲಿ ಈ ಬಾರಿ ಕೂಡ ಯಾವುದೇ ಒಳೇಟು ಇಲ್ಲದಿದ್ದಲ್ಲಿ ಪ್ರಥಮ ಸುತ್ತಿನಲ್ಲಿಯೇ ಅತ್ಯಂತ ಅಂತರದಿಂದ ಗೆಲ್ಲುವ ಆತ್ಮವಿಶ್ವಾಸ ಕಂಡು ಬಂದಿದೆ.

ಕಾಂಗ್ರೆಸ್‌ನಿಂದ ಈವರೆಗೆ ಗೆದ್ದವರು- ಸೋತವರು

1988- ಟಿ.ಎನ್‌. ನರಸಿಂಹಮೂರ್ತಿ (ಪ್ರಥಮ ಸುತ್ತಿನಲ್ಲಿ ಜಯ)

1997- ಸಿ. ರಮೇಶ್‌ (ಎರಡನೇ ಸುತ್ತಿನಲ್ಲಿ ಜಯ)

2003- ಎನ್‌. ಮಂಜುನಾಥ್‌ (ಪ್ರಥಮ ಸುತ್ತಿನಲ್ಲಿ ಜಯ)

2009- ಎನ್‌. ಮಂಜುನಾಥ್‌ (ಸೋಲು)

2013- ಉಪ ಚುನಾವಣೆ- ಆರ್‌. ಧರ್ಮಸೇನ (ಪ್ರಥಮ ಸುತ್ತಿನಲ್ಲಿ ಜಯ)

2015- ಆರ್‌. ಧರ್ಮಸೇನ (ಪ್ರಥಮ ಸುತ್ತಿನಲ್ಲಿ ಜಯ)

 

  • ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆ
  •  ಬಹು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದೆ ಕಾಂಗ್ರೆಸ್ ಭಾರಿ ಅಂತರಕ್ಕೆ ತಂತ್ರ
  • ಉಭಯ ಜಿಲ್ಲೆಗಳಲ್ಲಿ ಒಗ್ಗಟ್ಟಿನ ಹೋರಾಟವನ್ನು ಪ್ರದರ್ಶಿಸುತ್ತಿದೆ
Follow Us:
Download App:
  • android
  • ios