ಕುಮಾರಸ್ವಾಮಿ ಒಳ್ಳೆಯ ತೀರ್ಮಾನ-15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು :BSY  ಲೀಡ್‌ -ಜೆಡಿಎಸ್‌ ಇಲ್ಲದ ಕಡೆ ಬಿಜೆಪಿಗೆ ಬೆಂಬಲದ ವಿಶ್ವಾಸ  ಕುಮಾರಸ್ವಾಮಿ ಒಳ್ಳೆಯ ತೀರ್ಮಾನ: ಯಡಿಯೂರಪ್ಪ ಸ್ವಾಗತ ಕನಿಷ್ಠ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಂಪೂರ್ಣ ನಂಬಿಕೆ ಇದೆ

 ದಾವಣಗೆರೆ (ಡಿ.08): ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ಜೆಡಿಎಸ್‌ (JDS) ಸ್ಪರ್ಧಿಸದ ಕಡೆ ಬಿಜೆಪಿ (BJP) ಬೆಂಬಲಿಸುವಂತೆ ಈಗಾಗಲೇ ಕೇಳಿದ್ದೇವೆ. ಬೆಂಬಲಿಸುವುದು, ಬಿಡುವುದು ಜೆಡಿಎಸ್‌ (JDS) ವರಿಷ್ಠರಿಗೆ ಬಿಟ್ಟಿದ್ದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಹೇಳಿದರು. ನಗರದ ಜಿಎಂಐಟಿ(GMIT) ಗೆಸ್ಟ್‌ ಹೌಸ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ ಸ್ಪರ್ಧೆ ಮಾಡದ ಕಡೆಗಳಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಈಗಾಗಲೇ ನಾವು ಬೆಂಬಲ ಕೇಳಿದ್ದು, ಬೆಂಬಲಿಸುವುದು, ಬಿಡುವುದು ಆ ಪಕ್ಷದ ವರಿಷ್ಠರಿಗೆ ಬಿಟ್ಟವಿಚಾರ ಎಂದರು.

ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ. ಆಯಾ ಜಿಲ್ಲೆಯ ಕಾರ್ಯಕರ್ತರಿಗೆ ಬೆಂಬಲಿಸುವ ನಿರ್ಧಾರವನ್ನು ಬಿಟ್ಟಿರುವ ವಿಚಾರ ಸಂತೋಷ ತಂದಿದೆ. ಜಿಲ್ಲೆಯ ಜೆಡಿಎಸ್‌ ಮುಖಂಡರು, ಕಾರ್ಯಕರ್ತರಿಗೆ ನಿರ್ಧಾರ ಕೈಬಿಟ್ಟಿದ್ದನ್ನು ಸ್ವಾಗತಿಸುತ್ತೇವೆ. ಯಾವ ಕ್ಷೇತ್ರದಲ್ಲಿ ಜೆಡಿಎಸ್‌ (JDS) ಅಭ್ಯರ್ಥಿ ಇಲ್ಲವೋ ಅಂತಹ ಕಡೆ ಸಹಜವಾಗಿಯೇ ಆ ಪಕ್ಷದ ಜನ ಪ್ರತಿನಿಧಿಗಳು, ಮತದಾರರ ಬೆಂಬಲ, ಸಹಕಾರ ಸಿಗುತ್ತದೆ. ಸ್ಥಳೀಯ ಜೆಡಿಎಸ್‌ ಮುಖಂಡರು, ಆ ಪಕ್ಷದ ಮತದಾರರು ಬಿಜೆಪಿಗೆ ಬೆಂಬಲಿಸುವ ವಿಶ್ವಾಸವಿದೆ. ಎಲ್ಲಾ ಕಾಂಗ್ರೆಸ್‌ ಪ್ರಭಾವ ಹೆಚ್ಚಾಗಿದೆಯೋ ಅಂತಹ ಕಡೆ ಜೆಡಿಎಸ್‌ ಪಕ್ಷದ ಸ್ಥಳೀಯ ನಾಯಕರು ಬಿಜೆಪಿಯನ್ನು ಬೆಂಬಲಿಸುತ್ತಾರೆಂಬ ಆತ್ಮವಿಶ್ವಾಸ ನಮಗಿದೆ ಎಂದು ಹೇಳಿದರು.

ಕುಮಾರಸ್ವಾಮಿಯವರು ಇವತ್ತು ಅಭಿಪ್ರಾಯ ತಿಳಿಸುತ್ತೇವೆಂದಿದ್ದರು. ಆಯಾ ಜಿಲ್ಲೆಗಳ ಮುಖಂಡರಿಗೆ ನಿರ್ಧರಿಸಲು ಅವಕಾಶ ಮಾಡಿಕೊಟ್ಟಿದ್ದಾರೆಂಬ ವಿಚಾರ ಗೊತ್ತಾಗಿದೆ. ಪರಿಷತ್‌ ಚುನಾವಣೆಯಲ್ಲಿ (MLC Election) 15 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ. ಇನ್ನೂ ಹೆಚ್ಚು ಕ್ಷೇತ್ರ ಗೆಲ್ಲುವ ಗುರಿ ಇದೆ. 25 ಕ್ಷೇತ್ರಗಳ ಪೈಕಿ ಜೆಡಿಎಸ್‌ ಸ್ಪರ್ಧಿಸದ ಕಡೆ ಬಿಜೆಪಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದೇವೆ. ಜೆಡಿಎಸ್‌ ವರಿಷ್ಠರು, ಮುಖಂಡರು, ಆ ಪಕ್ಷದ ಮತದಾರರೂ ನಮ್ಮನ್ನು ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪರಿಷತ್‌ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja bommai), ಸಚಿವರು, ಸಂಸದರು, ಶಾಸಕರು, ಪಕ್ಷದ ಮುಖಂಡರು ಪ್ರಚಾರ ಕೈಗೊಂಡಿದ್ದಾರೆ. ನಾನೂ ಸಹ ಅನೇಕ ಕಡೆ ಪ್ರಚಾರ ಮಾಡುತ್ತಿದ್ದೇನೆ. ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ, ಮತಯಾಚನೆ ನಡೆಸಿದ್ದೇನೆ. ಬಿಜೆಪಿಗೆ ಪೂರಕ ವಾತಾವರಣ ಇದೆ ಎಂದು ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಸಂಪುಟದಲ್ಲಿ ವಿಜಯೇಂದ್ರ; ವರಿಷ್ಠರಿಗೆ ಬಿಟ್ಟ ವಿಚಾರ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಬಿ.ವೈ.ವಿಜಯೇಂದ್ರಗೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಸಲಹೆ, ಸೂಚನೆ ನೀಡಿಲ್ಲ. ಕೇಂದ್ರದ ನಾಯಕರು, ಪಕ್ಷದ ವರಿಷ್ಟರು ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. ರಾಜ್ಯದ ಎಲ್ಲಾ ಕಡೆಗೆ ನಾನು ಸಂಚಾರ ಮಾಡಿ, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದ ಜೊತೆಗೆ ಬಿಜೆಪಿ ಸಂಘಟನೆಗೆ ಒತ್ತು ನೀಡಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯನವರ (Siddaramaiah) ಕ್ಷೇತ್ರ ಬಾದಾಮಿಯಲ್ಲಿ ನಿನ್ನೆ ಆದ ಘಟನೆ, ಬೆಳವಣಿಗೆಗಳನ್ನು ಮಾಧ್ಯಮಗಳಲ್ಲಿ ನೋಡಿದೆ. ಸಿದ್ದರಾಮಯ್ಯ ಕ್ಷೇತ್ರದ ಗೊಂದಲದ ವಿಚಾರದಲ್ಲಿ ನಾನು ಪ್ರತಿಕ್ರಿಯಿಸುವುದಿಲ್ಲ. ಕಾದು ನೋಡೋಣ ಏನಾಗುತ್ತದೆ ಅಂತಾ.

- ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ.

  • ಕುಮಾರಸ್ವಾಮಿ ಒಳ್ಳೆಯ ತೀರ್ಮಾನ-15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು :BSY
  •  ಲೀಡ್‌ -ಜೆಡಿಎಸ್‌ ಇಲ್ಲದ ಕಡೆ ಬಿಜೆಪಿಗೆ ಬೆಂಬಲದ ವಿಶ್ವಾಸ
  •  ಕುಮಾರಸ್ವಾಮಿ ಒಳ್ಳೆಯ ತೀರ್ಮಾನ: ಯಡಿಯೂರಪ್ಪ ಸ್ವಾಗತ
  • ಕನಿಷ್ಠ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಂಪೂರ್ಣ ನಂಬಿಕೆ ಇದೆ