90​ರ ಅದೃಷ್ಟ ಕಾಂಗ್ರೆಸ್‌ಗೋ, ಜೆಡಿಎಸ್‌ಗೋ..? ಅಭ್ಯರ್ಥಿಗಳ ಭವಿಷ್ಯ  ಕೆಲ ಕ್ಷಣದಲ್ಲಿ ನಿರ್ಧಾರ ಬಿಜೆಪಿಗೆ ಠೇವಣಿ ಕಳೆದುಕೊಳ್ಳುವ ಭೀತಿ

 ಮಂಡ್ಯ (ಡಿ.14):  ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ (MLC Election) ನಡೆದ ಚುನಾವಣಾ ಫಲಿತಾಂಶ ಕೆಲ ಕ್ಷಣದಲ್ಲಿ ಪ್ರಕಟಗೊಳ್ಳಲಿದ್ದು, ಅಭ್ಯರ್ಥಿಗಳ ಭವಿಷ್ಯ ಅಂತಿಮವಾಗಿ ನಿರ್ಧಾರವಾಗಲಿದೆ. ವಿಜಯಲಕ್ಷ್ಮಿ ಯಾರ ಕೊರಳನ್ನು ಅಲಂಕರಿಸಲಿದ್ದಾಳೆ ಎನ್ನುವುದು ಕುತೂಹಲ ಕೆರಳಿಸಿದೆ. ಈ ಚುನಾವಣೆಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ರಣೋತ್ಸಾಹದಿಂದ ಹೋರಾಟ ನಡೆಸಿವೆ. ಉಭಯ ಪಕ್ಷಗಳ ಅಭ್ಯರ್ಥಿಗಳು ಗೆಲುವಿಗೆ ಅಸಾಮಾನ್ಯ ಶಕ್ತಿ ಪ್ರದರ್ಶಿಸಿದ್ದಾರೆ. ಇಬ್ಬರೂ 90 ಅನ್ನು ತಮ್ಮ ಅದೃಷ್ಟ ಸಂಖ್ಯೆಯನ್ನಾಗಿ ಚುನಾವಣೆಯಲ್ಲಿ ಹರಿಯಬಿಟ್ಟಿದ್ದು, ಅದು ಯಾರಿಗೆ ವರವಾಗಲಿದೆಯೋ ನೋಡಬೇಕಿದೆ.

ಚುನಾವಣೆ ಘೋಷಣೆಯಾದ ನಂತರದಲ್ಲಿ ಕಾಂಗ್ರೆಸ್‌ (Congress) ಪಕ್ಷದಿಂದ ಅಂತಿಮ ಘಳಿಗೆಯಲ್ಲಿ ಅಖಾಡ ಪ್ರವೇಶಿಸಿದ ದಿನೇಶ್‌ ಗೂಳಿಗೌಡ ಪ್ರಚಾರದುದ್ದಕ್ಕೂ ಗೂಳಿಯಂತೆ ನುಗ್ಗಿ ಮತಬೇಟೆಯಾಡಿದರು. ಹೊಸ ಅಭ್ಯರ್ಥಿಯಾದರೂ ಜೆಡಿಎಸ್‌ಗೆ ನುಂಗಲಾರದ ತುತ್ತಾದರು. 90ರ ಅದೃಷ್ಟಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು ಹೊಸ ಹೊಸ ರಾಜಕೀಯ ವರಸೆಗಳನ್ನು ಪ್ರಯೋಗಿಸುವುದರೊಂದಿಗೆ ಎದುರಾಳಿ ಪಕ್ಷದೊಳಗೆ ಸಂಚಲನ ಸೃಷ್ಟಿಸಿದ ದಿನೇಶ್‌ ಗೂಳಿಗೌಡ ಕಾಂಗ್ರೆಸ್‌ (Congress)ಗೆ ಚುನಾವಣೆ ಮೂಲಕ ಹೊಸ ಇಮೇಜ್‌ ಕೊಡುವುದಕ್ಕೆ ಅವಿರತವಾಗಿ ಶ್ರಮಿಸಿದ್ದಾರೆ.

ಸತತ ಎರಡನೇ ಬಾರಿಗೆ ವಿಧಾನಪರಿಷತ್‌ ಪ್ರವೇಶಿಸುವ ಕನಸಿನೊಂದಿಗೆ ಚುನಾವಣಾ ರಣರಂಗ ಪ್ರವೇಶಿಸಿದ ಜೆಡಿಎಸ್‌ನ ಎನ್‌.ಅಪ್ಪಾಜಿಗೌಡರು ಗೆಲುವಿನ ವಿಶ್ವಾಸದಲ್ಲಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್‌ (JDS) ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿದ 90ರ ಅದೃಷ್ಟಸಂಖ್ಯೆ ಆ ಮತಗಳೆಲ್ಲವೂ ತಮಗೆ ಹರಿದುಬಂದಿರುವ ಖಚಿತತೆಯನ್ನು ಹೊಂದಿದ್ದಾರೆ. ಒಮ್ಮೆ ಅವರು ಚುನಾವಣೆಯಲ್ಲಿ ಜಯ ಸಾಧಿಸಿದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಲಿದ್ದಾರೆ.

ಒಳೇಟು ಬಿದ್ದಿದ್ದರೆ ಕಷ್ಟ!

ಜೆಡಿಎಸ್‌ (JDS) ಮತದಾರರು ಪಕ್ಷ ನಿಷ್ಠೆಗೆ ಶರಣಾಗಿ ಎಲ್ಲ ಮತಗಳನ್ನು ಎನ್‌.ಅಪ್ಪಾಜಿಗೌಡರ ಪರ ಚಲಾಯಿಸಿದ್ದರೆ ಗೆಲುವಿಗೆ ಯಾವುದೇ ತೊಂದರೆ ಇಲ್ಲ. ಒಮ್ಮೆ ಏನಾದರೂ ಆ ಮತಗಳು ಅತ್ತಿತ್ತ ಹರಿದಾಡಿದ್ದರೆ ಜಯ ಸಾಧನೆ ಕಷ್ಟವಾಗಲಿದೆ ಎನ್ನುವ ಮಾತುಗಳು ಚುನಾವಣೆಯ ನಂತರದ ದಿನಗಳಲ್ಲಿ ಕೇಳಿಬಂದಿವೆ.

ಪಕ್ಷ ನಿಷ್ಠೆಗೆ ಜೆಡಿಎಸ್‌ ಮತದಾರರು ಹೆಸರುವಾಸಿಯಾಗಿದ್ದಾರೆ. ಆ ನಿಷ್ಠೆ ಈ ಚುನಾವಣೆಯಲ್ಲಿ ಹೇಗೆ ಕೆಲಸ ಮಾಡಿದೆ ಎನ್ನುವುದು ಸುಲಭವಾಗಿ ಗ್ರಹಿಸಲಾಗುತ್ತಿಲ್ಲ. ಜೆಡಿಎಸ್‌ನ ಒಂದಷ್ಟುಮತಗಳು ಅಡ್ಡದಾರಿ ಹಿಡಿದುಹೋಗಿವೆ ಎನ್ನುವ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಅದು ಕೇವಲ ವದಂತಿಯೋ, ಸತ್ಯವೋ ಎನ್ನುವುದು ಮಂಗಳವಾರ ಗೊತ್ತಾಗಲಿದೆ.

ಚುನಾವಣೆ ಪ್ರಚಾರದುದ್ದಕ್ಕೂ ಜೆಡಿಎಸ್‌ ಶಾಸಕರು (MLA) ಸಂಘಟಿತವಾಗಿಯೇ ಹೋರಾಟ ನಡೆಸಿದ್ದಾರೆ. ಅಪ್ಪಾಜಿಗೌಡರ ಬಗ್ಗೆ ಎಲ್ಲ ಶಾಸಕರು ವಿಶ್ವಾಸದಿಂದ ಇದ್ದರು. ಯಾರೂ ಕೂಡ ಬಹಿರಂಗವಾಗಿ ಮುಖಮುನಿಸು ಪ್ರದರ್ಶಿಸಿದ ಉದಾಹರಣೆಗಳಿಲ್ಲ. ಇದರ ನಡುವೆಯೂ ಸದ್ದಿಲ್ಲದೆ ಒಳೇಟೇನಾದರೂ ಕೊಟ್ಟಿದ್ದರೆ ಅಪ್ಪಾಜಿಗೌಡರಿಗೆ ಗೆಲುವು ಕಷ್ಟವಾಗಲಿದೆ.

ಮಳವಳ್ಳಿ, ಮಂಡ್ಯ (Mandya), ಮದ್ದೂರು ಹಾಗೂ ಕೆ.ಆರ್‌.ಪೇಟೆಯಲ್ಲಿ ಅತಿ ಹೆಚ್ಚು ಮತಗಳಿವೆ. ಸದ್ಯಕ್ಕೆ ನಾಗಮಂಗಲ ಮತ್ತು ಮಳವಳ್ಳಿಯಲ್ಲಿ ಕಾಂಗ್ರೆಸ್‌ ಹೆಚ್ಚಿನ ಮತಗಳನ್ನು ಹೊಂದಿದ್ದರೆ, ಶ್ರೀರಂಗಪಟ್ಟಣದಲ್ಲಿ ಎರಡೂ ಪಕ್ಷಗಳು ಸಮನಾದ ಮತಗಳನ್ನು ಹೊಂದಿರುವುದಾಗಿ ಹೇಳಲಾಗಿದೆ. ಮೇಲುಕೋಟೆ, ಕೆ.ಆರ್‌.ಪೇಟೆ, ಮದ್ದೂರು, ಮಂಡ್ಯ ತಾಲೂಕುಗಳಲ್ಲಿ ಜೆಡಿಎಸ್‌ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮತದಾರರ ಲೆಕ್ಕಾಚಾರದಂತೆ ಎಲ್ಲ ಮತಗಳು ಜೆಡಿಎಸ್‌ಗೆ ದೊರಕಿದ್ದಲ್ಲಿ ನಿರಾಯಾಸವಾಗಿ ಗೆಲುವು ದೊರಕಲಿದೆ. ಜೆಡಿಎಸ್‌ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಪಕ್ಷದ ಮತಗಳೇನಾದರೂ ಕಾಂಗ್ರೆಸ್‌ ಕೈಗೇನಾದರೂ ಸಿಕ್ಕಿದ್ದರೆ ಗೂಳಿಗೌಡರಿಗೆ ವರವಾಗಲಿದೆ.

ಒಟ್ಟಾರೆ ಫಲಿತಾಂಶ ಎಲ್ಲರಲ್ಲೂ ಕುತೂಹಲವನ್ನು ಹುಟ್ಟಿಹಾಕಿದೆ. ಗೆಲುವಿನ ಬಗ್ಗೆ ಎರಡೂ ಪಕ್ಷದವರು ವಿಶ್ವಾಸ ಹೊಂದಿದ್ದಾರೆ. ಮತದಾರರ ಅಂತರಾಳವನ್ನು ಬಲ್ಲವರು ಯಾರೂ ಇಲ್ಲ. ಅವರ ತೀರ್ಪು ಹೇಗಿರಲಿದೆ ಎನ್ನುವುದು ಮಂಗಳವಾರ ಮಧ್ಯಾಹ್ನದ ವೇಳೆಗೆ ಬಹಿರಂಗಗೊಳ್ಳಲಿದೆ.

ಕಾಂಗ್ರೆಸ್‌ ಕಡೆಗೆ ಬಿಜೆಪಿ ಮತಗಳು?

ಈ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ (BJP ) ಒಳ ಒಪ್ಪಂದದ ಮಾತುಗಳು ಆರಂಭದಲ್ಲಿ ಜೋರಾಗಿಯೇ ಕೇಳಿಬಂದಿದ್ದವು. ಆನಂತರದಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪನವರು (BS Yediyurappa) ಮಂಡ್ಯಕ್ಕೆ ಬಂದಾಗ ಜಿಲ್ಲೆಯಲ್ಲಿ ಯಾವುದೇ ಮೈತ್ರಿ ಇಲ್ಲ ಎಂದರೆ, ಹೆಚ್‌.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲ, ಸಹಕಾರವಷ್ಟೇ ಎಂದು ಹೇಳಿ ಹೋದರು.

ಚುನಾವಣೆಗೆ (Election) ಇನ್ನೊಂದು ದಿನವಿರುವಾಗ ಬಿಜೆಪಿ ಅಭ್ಯರ್ಥಿ ದಿಢೀರನೆ ಶಸ್ತ್ರತ್ಯಾಗ ಮಾಡಿದ್ದು, ಆನಂತರದಲ್ಲಿ ನಡೆದ ಬೆಳವಣಿಗೆಗಳಿಂದ ಜೆಡಿಎಸ್‌ ಕಡೆ ಮುಖ ಮಾಡಬೇಕಿದ್ದ ಬಿಜೆಪಿ ಮತಗಳು ಕಾಂಗ್ರೆಸ್‌ನತ್ತ ಹರಿದುಬಂದಿವೆ ಎಂಬ ಬಗ್ಗೆಯೂ ದಟ್ಟವಾಗಿ ಕೇಳಿಬರುತ್ತಿವೆ. ಇದು ನಿಜವೇ ಆಗಿದ್ದಲ್ಲಿ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿಕೊಟ್ಟಂತಾಗಲಿದೆ.