ಶಾಸಕರ ಸಮಸ್ಯೆಗಳನ್ನು ಆಲಿಸಲೆಂದೇ ಶಾಸಕಾಂಗ ಪಕ್ಷದ ಸಭೆ ಕರೆಯುವುದು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಶಾಸಕರಿಗೆ ಇರುವ ವೇದಿಕೆಯದು. ಅನುದಾನ ಸೇರಿದಂತೆ ಎಲ್ಲಾ ವಿಚಾರಗಳನ್ನೂ ಅಲ್ಲೇ ಚರ್ಚಿಸಬೇಕು. 

ಬೆಂಗಳೂರು (ಜು.31): ಶಾಸಕರ ಸಮಸ್ಯೆಗಳನ್ನು ಆಲಿಸಲೆಂದೇ ಶಾಸಕಾಂಗ ಪಕ್ಷದ ಸಭೆ ಕರೆಯುವುದು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಶಾಸಕರಿಗೆ ಇರುವ ವೇದಿಕೆಯದು. ಅನುದಾನ ಸೇರಿದಂತೆ ಎಲ್ಲಾ ವಿಚಾರಗಳನ್ನೂ ಅಲ್ಲೇ ಚರ್ಚಿಸಬೇಕು. ಈ ನಿಟ್ಟಿನಲ್ಲಿ ಶಾಸಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿರುತ್ತಾರೆ. ಆದರೆ ಯಾವ ಶಾಸಕರದ್ದೂ ಅಸಮಾಧಾನ ಇಲ್ಲ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು. 

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 15ರಿಂದ 20 ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಗುರಿ ಹೊಂದಿದ್ದೇವೆ. ಇದನ್ನು ಸಾಧಿಸುತ್ತೇವೆ ಮುಂಬರುವ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ತೋರುವ ಬಗ್ಗೆ ಚರ್ಚೆ ಮಾಡಿದ್ದೇವೆ. ಕಳೆದ ಬಾರಿ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಅವರು ಬೆಂಗಳೂರಿಗೆ ಬಂದಾಗಲೇ ಇಲ್ಲಿ ಸಭೆ ನಡೆಯಬೇಕಾಗಿತ್ತು. ಆದರೆ ಕೇರಳ ಮಾಜಿ ಮುಖ್ಯಮಂತ್ರಿಗಳಾದ ಊಮ್ಮನ್‌ ಚಾಂಡಿ ಅವರ ನಿಧನದಿಂದ ಮುಂದೂಡಲಾಗಿತ್ತು. ಎಐಸಿಸಿಯ ಎಲ್ಲ ಪ್ರಮುಖರ ಜತೆಗೂಡಿ ಸಭೆ ನಡೆಸಬೇಕಿದೆ ಎಂದು ಹೇಳಿದರು.

ಹಣ ಹಾಗೂ ಹೆಣದ ಮೇಲೆ ಕಾಂಗ್ರೆಸ್‌ ರಾಜಕಾರಣ: ಎನ್‌.ರವಿಕುಮಾರ್‌

ಬೆಂಗಳೂರು ಸುತ್ತಲಿನ ನಗರಗಳಿಗೂ ಸಬರ್ಬನ್‌ ರೈಲು ವಿಸ್ತರಣೆ: ಬೆಂಗಳೂರಿನ ಸುತ್ತಮುತ್ತಲ ನಗರಗಳಿಗೆ ಉಪನಗರ ರೈಲು ಯೋಜನೆಯನ್ನು ವಿಸ್ತರಿಸಲು ಅನುಕೂಲವಾಗುವಂತೆ ಕಾರ್ಯಸಾಧ್ಯತಾ ವರದಿ ಕೈಗೆತ್ತಿಕೊಳ್ಳಲು ಅನುಮತಿ ನೀಡುವಂತೆ ಕೋರಿ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ ಎಂದು ಬೃಹತ್‌ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

ಉಪನಗರ ರೈಲು ಯೋಜನೆಯ ಪ್ರಗತಿ ಕುರಿತು ನಗರದಲ್ಲಿ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತದ (ಕೆ-ರೈಡ್‌) ಉನ್ನತ ಅಧಿಕಾರಿಗಳೊಂದಿಗೆ ಅವರು ಸೋಮವಾರ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ರಾಜಧಾನಿಯಲ್ಲಿನ ಸಂಚಾರ ದಟ್ಟಣೆ ನಿವಾರಣೆಯ ಗುರಿಯೊಂದಿಗೆ ಕೈಗೆತ್ತಿಕೊಂಡಿರುವ ಉಪನಗರ ರೈಲು ಯೋಜನೆಯನ್ನು ಸುತ್ತಮುತ್ತಲಿನ ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಾಗಡಿ, ಗೌರಿಬಿದನೂರು, ಬಂಗಾರಪೇಟೆಗೆ ವಿಸ್ತರಿಸಲು ಅನುಕೂಲವಾಗುವಂತೆ ಕಾರ್ಯಸಾಧ್ಯತಾ ವರದಿ ಕೈಗೆತ್ತಿಕೊಳ್ಳಲು ರೈಲ್ವೆ ಸಚಿವಾಲಯವು ಅನುಮತಿ ನೀಡಬೇಕೆಂದು ಕೋರಿ ನೈಋುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಹಂತ-1ರಲ್ಲಿ ಉಪನಗರ ರೈಲು ಯೋಜನೆ ಕಾಮಗಾರಿ (148.17 ಕಿ.ಮೀ.) ನಡೆಯುತ್ತಿದೆ. ಇದರಲ್ಲಿ ಒಟ್ಟು ನಾಲ್ಕು ಕಾರಿಡಾರ್‌ಗಳಿವೆ. ಬೆಂಗಳೂರು ನಗರ ರೈಲು ನಿಲ್ದಾಣದಿಂದ ದೇವನಹಳ್ಳಿ (41.4 ಕಿ.ಮೀ), ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ (25.01 ಕಿ.ಮೀ), ಕೆಂಗೇರಿಯಿಂದ ವೈಟ್‌ಫೀಲ್ಡ್‌ (35.32 ಕಿ.ಮೀ) ಮತ್ತು ಹೀಳಲಿಗೆಯಿಂದ ರಾಜಾನುಕುಂಟೆವರೆಗೆ (46.25 ಕಿ.ಮೀ) ಉದ್ದವಿದೆ. ಇದನ್ನು ಎರಡನೇ ಹಂತದಲ್ಲಿ ದೇವನಹಳ್ಳಿಯಿಂದ ಕೋಲಾರ (107 ಕಿ.ಮೀ.), ಚಿಕ್ಕಬಾಣಾವರದಿಂದ ಡಾಬಸ್‌ಪೇಟೆ ಮೂಲಕ ತುಮಕೂರು (55 ಕಿ.ಮೀ), ಚಿಕ್ಕಬಾಣಾವರದಿಂದ ಮಾಗಡಿ (45 ಕಿ.ಮೀ), ಕೆಂಗೇರಿಯಿಂದ ಮೈಸೂರು (125 ಕಿ.ಮೀ), ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ (45 ಕಿ.ಮೀ), ಹೀಳಲಿಗೆಯಿಂದ ತಮಿಳುನಾಡಿನ ಹೊಸೂರು (23 ಕಿ.ಮೀ) ಮತ್ತು ರಾಜಾನುಕುಂಟೆಯಿಂದ ದೊಡ್ಡಬಳ್ಳಾಪುರದ ಮಾರ್ಗವಾಗಿ ಗೌರಿಬಿದನೂರಿನವರೆಗೆ (52 ಕಿ.ಮೀ) ವಿಸ್ತರಿಸಬೇಕೆಂಬ ಚಿಂತನೆ ನಡೆದಿದೆ ಎಂದರು.

ತಿರುಪತಿ, ಗೋವಾ, ಹೈದರಾಬಾದ್‌ಗೂ ವಿಮಾನ ಹಾರಾಟಕ್ಕೆ ಅನುಮತಿ: ಸಂಸದ ರಾಘ​ವೇಂದ್ರ

ಈ ಸಂಬಂಧ ಜೂನ್‌ 6ರಂದು ಸಭೆ ನಡೆಸಲಾಗಿತ್ತು. ಕೆ-ರೈಡ್‌ ಈ ಪ್ರಸ್ತಾವನೆಗೆ ಅಂದು ತಾತ್ತ್ವಿಕ ಒಪ್ಪಿಗೆಯನ್ನೂ ನೀಡಿತ್ತು. ಹಂತ-2ಅನ್ನು 452 ಕಿ.ಮೀ.ಗಳಿಗೆ ವಿಸ್ತರಿಸಲು ಯೋಚಿಸಿದ್ದು, ಇದಕ್ಕೆ ಈಗಿನಿಂದಲೇ ಅಗತ್ಯ ಉಪಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ನಿಯಮಗಳ ಪ್ರಕಾರ ರಾಜ್ಯ ಸರ್ಕಾರದ ಸಂಸ್ಥೆಯು ಕಾರ್ಯಸಾಧ್ಯತಾ ವರದಿ ತಯಾರಿಸಲು ಸಾಧ್ಯವಿಲ್ಲ. ಇದನ್ನು ರೈಲ್ವೆ ಮಂಡಳಿಯೇ ಮಾಡಬೇಕಿದೆ ಎಂದು ತಿಳಿಸಿದರು.