ಸಿಎಂಗೆ ಲೆಟರ್‌: ಸಚಿವರ ವಿರುದ್ಧ ಶಾಸಕರ ನಕಲಿ ಪತ್ರ ವೈರಲ್‌..!

ಈ ನಕಲಿ ಪತ್ರ ವೈರಲ್‌ ಆಗುತ್ತಿದ್ದಂತೆಯೇ ಪತ್ರದಲ್ಲಿ ಸಹಿಯಿರುವ ಶಾಸಕರು ಸ್ಪಷ್ಟನೆ ನೀಡಿದ್ದು, ಈ ಪತ್ರ ನಮ್ಮದಲ್ಲ. ಸಚಿವರು ಮತ್ತು ಶಾಸಕರ ನಡುವೆ ಕಂದಕ ಸೃಷ್ಟಿಸಲು ಬಿಜೆಪಿಯವರು ಮಾಡಿರುವ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.

MLAs Fake Letter Against Ministers Goes Viral in Karnataka grg

ಬೆಂಗಳೂರು/ಕಲಬುರಗಿ(ಜು.26):  ಶಾಸಕಾಂಗ ಪಕ್ಷದ ಸಭೆಗೆ ಕೋರಿ ಕೆಲ ಶಾಸಕರು ಮುಖ್ಯಮಂತ್ರಿಗೆ ಪತ್ರ ಬರೆದ ಬೆನ್ನಲ್ಲೇ, ರಾಜ್ಯದ 20 ಸಚಿವರ ಕಾರ್ಯ ವೈಖರಿಗೆ ಆಕ್ಷೇಪಿಸಿ 11 ಶಾಸಕರು ಮುಖ್ಯಮಂತ್ರಿಯವರಿಗೆ ಬರೆದಿದ್ದಾರೆ ಎನ್ನುವ ‘ನಕಲಿ’ ಪತ್ರ ವೈರಲ್‌ ಆಗಿದೆ.

ಈ ನಕಲಿ ಪತ್ರ ವೈರಲ್‌ ಆಗುತ್ತಿದ್ದಂತೆಯೇ ಪತ್ರದಲ್ಲಿ ಸಹಿಯಿರುವ ಶಾಸಕರು ಸ್ಪಷ್ಟನೆ ನೀಡಿದ್ದು, ಈ ಪತ್ರ ನಮ್ಮದಲ್ಲ. ಸಚಿವರು ಮತ್ತು ಶಾಸಕರ ನಡುವೆ ಕಂದಕ ಸೃಷ್ಟಿಸಲು ಬಿಜೆಪಿಯವರು ಮಾಡಿರುವ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿಗೆ ಯಾರಾಗ್ತಾರೆ ನೂತನ ಸಾರಥಿ..?: ಅಭಿಪ್ರಾಯ ಸಂಗ್ರಹಿಸಿದ ಬಿ.ಎಲ್‌. ಸಂತೋಷ್‌

ಆಳಂದ ಶಾಸಕ ಬಿ.ಆರ್‌.ಪಾಟೀಲ್‌ ಅವರ ಲೆಟರ್‌ ಹೆಡ್‌ನಲ್ಲಿ ಇಂತಹದ್ದೊಂದು ಪತ್ರ ಬರೆಯಲಾಗಿದ್ದು, ಅದರಲ್ಲಿ ನರೇಂದ್ರಸ್ವಾಮಿ, ಸಿ.ಎಸ್‌. ನಾಡಗೌಡ ಸೇರಿದಂತೆ 11 ಶಾಸಕರ ಸಹಿ ಇದೆ. ಈ ಪತ್ರದಲ್ಲಿ ಸಚಿವ ಸಂಪುಟದ 20 ಸಚಿವರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ. ಅನುದಾನ ಬಿಡುಗಡೆ ಮಾಡುವುದಕ್ಕೆ ಮೂರನೇ ವ್ಯಕ್ತಿಯಿಂದ ಹಣಕ್ಕೆ ಬೇಡಿಕೆಯಿಡುತ್ತಾರೆ ಎಂಬ ಆರೋಪ ಒಳಗೊಂಡಿದೆ.

ಈ ಪತ್ರ ವೈರಲ್‌ ಆಗುತ್ತಿದ್ದಂತೆಯೇ ಕಲಬುರಗಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಬಿ.ಆರ್‌.ಪಾಟೀಲ್‌, ‘ಇಂತಹ ಯಾವುದೇ ಪತ್ರವನ್ನು ನಾನು ಬರೆದಿಲ್ಲ. ಯಾರೋ ಕಿಡಿಗೇಡಿಗಳು ನಮ್ಮ ಲೆಟರ್‌ ಹೆಡ್‌ ಮತ್ತು ನಮ್ಮ ಸಹಿಯನ್ನು ಕಟ್‌ ಅಂಡ್‌ ಪೇಸ್ಟ್‌ ಮಾಡಿ ನಕಲಿ ಪತ್ರ ಸೃಷ್ಟಿಸಿ ಹರಿಬಿಟ್ಟಿದ್ದಾರೆ’ ಎಂದು ಆರೋಪಿಸಿದ್ದಾರೆ.

ಆದರೆ, ‘ಕೆಲಸ ಶಾಸಕರು ಸೇರಿ ಶಾಸಕಾಂಗ ಪಕ್ಷದ ಸಭೆಗೆ ಒತ್ತಾಯಿಸಿ ಸಿಎಂಗೆ ಪತ್ರ ಬರೆದಿದ್ದು ನಿಜ. ಅದರಲ್ಲಿ ಯಾವುದೇ ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದಿಲ್ಲ. ಇಂತಹ ಅಂಶಗಳನ್ನು ಸೇರಿಸಿ ನಕಲಿ ಪತ್ರ ಸೃಷ್ಟಿಸಲಾಗಿದೆ. ಜೊತೆಗೆ ಈ ಪತ್ರವನ್ನು ಸೃಷ್ಟಿಸಿದವರು ಯಾರು ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಕೋರಿ ಕಲಬುರಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ’ ಎಂದು ಹೇಳಿದ್ದಾರೆ.

‘ವೈರಲ್‌ ಆಗಿರುವ ಪತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಎಂಬ ಪದ ಬಳಕೆಯಾಗಿದೆ, ಜೊತೆಗೇ ಸಚಿವರು ಮಧ್ಯವರ್ತಿಗಳಿಂದ ಹಣದ ಬೇಡಿಕೆ ಇಡುತ್ತಿದ್ದಾರೆ ಎಂಬುದು ಇದೆ. ಇದ್ಯಾವುದೂ ತಮ್ಮ ಅಸಲಿ ಪತ್ರದಲ್ಲಿಲ್ಲ. ತಮ್ಮ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಮಧ್ಯೆ ಕಂದಕ ಸೃಷ್ಟಿಸಲು ತಮಗೆ ಆಗದವರು ಇಂತಹ ಕೆಲಸ ಮಾಡಿದ್ದಾರೆ’ ಎಂದು ಪಾಟೀಲ್‌ ದೂರಿದ್ದಾರೆ.

ಬರ ಮಾನದಂಡ ಬದಲಿಸಲು ಕೇಂದ್ರಕ್ಕೆ ಪತ್ರ: ಸಚಿವ ಕೃಷ್ಣಬೈರೇಗೌಡ

ಶಾಸಕರು ಇಂತಹ ಪತ್ರ ಬರೆದಿಲ್ಲ-ಸಿಎಂ:

ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೂಡ ನಮ್ಮ ಯಾವುದೇ ಶಾಸಕರು ಆ ರೀತಿ ಸಚಿವರ ವಿರುದ್ಧ ಪತ್ರ ಬರೆದಿಲ್ಲ. ನಮ್ಮ ಶಾಸಕರ ಹೆಸರಲ್ಲಿ ಯಾರೋ ನಕಲಿ ಪತ್ರ ಮಾಡಿದ್ದಾರೆ ಎಂದು ಪ್ರತ್ಯೇಕ ಹೇಳಿಕೆ ನೀಡಿದ್ದಾರೆ. ಸಚಿವ ಎಚ್‌.ಸಿ.ಮಹದೇವಪ್ಪ, ಬಿ.ಆರ್‌.ನಾಗೇಂದ್ರ ಸೇರಿದಂತೆ ಕೆಲ ಸಚಿವರೂ ಈ ಬಗ್ಗೆ ಹೇಳಿಕೆ ನೀಡಿ ಇಂತಹ ಪತ್ರದ ಬಗ್ಗೆ ನಮಗೇನೂ ಮಾಹಿತಿ ಇಲ್ಲ ಎಂದಿದ್ದಾರೆ.

ನಕಲಿ ಎನ್ನುತ್ತಿರುವ ಪತ್ರದಲ್ಲೇನಿದೆ?

‘ನಮ್ಮನ್ನು ಆರಿಸಿ ಕಳುಹಿಸಿದ ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ವಿವಿಧ ಇಲಾಖೆಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಸಚಿವರಿಗೆ ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಇದರಿಂದ ಜನರ ಆಶೋತ್ತರ ಈಡೇರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಅನುದಾನ ಬಿಡುಗಡೆ ಮಾಡುವುದಕ್ಕೂ ಸಚಿವರು ಮೂರನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಸ್ಥಳೀಯ ಶಾಸಕರು ನಾವು ಆಗಿದ್ದರೂ ಅನುದಾನಕ್ಕಾಗಿ ಮೂರನೇ ವ್ಯಕ್ತಿಯ ಮೊರೆ ಹೋಗಬೇಕಾಗಿರುವುದು ಅತ್ಯಂತ ಬೇಸರದ ವಿಷಯ’ ಎಂದು ಸಚಿವರ ಕಾರ್ಯವೈಖರಿ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವ ಅಂಶಗಳು ‘ನಕಲಿ’ ಎಂದು ಆರೋಪಿಸಲಾಗುತ್ತಿರುವ ಪತ್ರದಲ್ಲಿವೆ.

Latest Videos
Follow Us:
Download App:
  • android
  • ios