ಸಿದ್ದರಾಮೋತ್ಸವ ಪೂರ್ವಭಾವಿ ಸಭೆಗೆ ಗೈರಾದ ಸ್ಥಳೀಯ ಕಾಂಗ್ರೆಸ್‌ ಶಾಸಕ ಪ್ರಸಾದ ಅಬ್ಬಯ್ಯ ವಿರುದ್ಧ ಅದೇ ಪಕ್ಷದ ಮಾಜಿ ಸಚಿವ, ಶಾಸಕ ಜಮೀರ್‌ ಅಹ್ಮದಖಾನ್‌ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಹುಬ್ಬಳ್ಳಿ (ಜು.26): ಸಿದ್ದರಾಮೋತ್ಸವ ಪೂರ್ವಭಾವಿ ಸಭೆಗೆ ಗೈರಾದ ಸ್ಥಳೀಯ ಕಾಂಗ್ರೆಸ್‌ ಶಾಸಕ ಪ್ರಸಾದ ಅಬ್ಬಯ್ಯ ವಿರುದ್ಧ ಅದೇ ಪಕ್ಷದ ಮಾಜಿ ಸಚಿವ, ಶಾಸಕ ಜಮೀರ್‌ ಅಹ್ಮದ್ ಖಾನ್‌ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಬಹಿರಂಗ ಸಮಾವೇಶದಲ್ಲೇ ಅಬ್ಬಯ್ಯಗೆ ಚುನಾವಣೆಯಲ್ಲಿ ಪಾಠ ಕಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಕರೆ ನೀಡುವ ರೀತಿ ಮಾತನಾಡಿದ್ದಾರೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ನಗರದ ಹೊರವಲಯದ ಕಚ್ಚಿ ಗಾರ್ಡನ್‌ನಲ್ಲಿ ಭಾನುವಾರ ರಾತ್ರಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. 

ಸಭೆಯಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ, ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ ಸೇರಿದಂತೆ ಹಲವು ಪ್ರಮುಖರು ಇದ್ದರು. ಈ ವೇಳೆ ಮಾತನಾಡಿದ ಜಮೀರ್‌, ಸಿದ್ದರಾಮೋತ್ಸವಕ್ಕೆ ಎಲ್ಲರೂ ಆಗಮಿಸಬೇಕು. ಅದರ ಪೂರ್ವಭಾವಿ ಸಭೆಯಿದು. ಇಡೀ ರಾಜ್ಯಾದ್ಯಂತ ಸಂಚರಿಸಿ ಜನರನ್ನು ಸಂಘಟಿಸುತ್ತಿದ್ದೇವೆ ಎಂದರು. ಬಳಿಕ ‘ಈ ಸಭೆಗೆ ಶಾಸಕ ಪ್ರಸಾದ ಅಬ್ಬಯ್ಯ ಬಂದಿಲ್ಲ. ಅವರ ಮಗನಿಗೇನೋ ಜ್ವರ ಬಂದಿದೆಯಂತೆ. ಅದಕ್ಕೆ ಬಂದಿಲ್ಲವಂತೆ. ಮಗನಿಗೆ ಜ್ವರ ಬಂದಿದೆಯೋ? ಅಬ್ಬಯ್ಯಗೆ ಜ್ವರ ಬಂದಿದೆಯೋ ?’ ಎಂದಿದ್ದಾರಲ್ಲದೇ, ‘ಚುನಾವಣೆ ವೇಳೆಯಲ್ಲಿ ಹೀಗೆ ಜ್ವರ ಬಂದರೆ ಸಭೆಗೆ ಬರುತ್ತಿರಲಿಲ್ಲವೇ?’ ಎಂದು ಖಾರವಾಗಿ ಪ್ರಶ್ನಿಸಿದರು.

ಆರ್‌ಎಸ್‌ಎಸ್‌ನವರು ಬ್ರಿಟಿಷರ ಏಜೆಂಟರಾಗಿ ಕೆಲಸ ಮಾಡಿದವರು: ಜಮೀರ್ ಅಹ್ಮದ್

‘1 ಲಕ್ಷ ಜನ ಅಲ್ಪಸಂಖ್ಯಾತರು ಹುಬ್ಬಳ್ಳಿಯಲ್ಲಿದ್ದಾರೆ. ಪ್ರಸಾದ ಅಬ್ಬಯ್ಯ ಯಾವತ್ತಾದರೂ ನಮ್ಮ ಬಳಿಗೆ ಬರಲೇಬೇಕು, ಆವಾಗ ಮಾತನಾಡುವೆ. ಚುನಾವಣೆ ವೇಳೆ ನಮಗೂ ಜ್ವರ ಬರಬಹುದು. ನಾವೆಲ್ಲ ಒಟ್ಟಾಗಿ ಇರೋಣ’ ಎನ್ನುವ ಮೂಲಕ ಪ್ರಸಾದ ಅಬ್ಬಯ್ಯಗೆ ಟಾಂಗ್‌ ನೀಡಿದರು ಜಮೀರಹ್ಮದ್‌. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಸಾದ ಅಬ್ಬಯ್ಯ, ‘ಸ್ಥಳೀಯ ಮುಖಂಡರು ಜಮೀರ್‌ ಅವರಿಗೆ ಸರಿಯಾದ ಮಾಹಿತಿ ನೀಡಿಲ್ಲ. ನನ್ನ ಮಗನಿಗೆ ವೈರಲ್‌ ಫಿವರ್‌ ಇತ್ತು. ಅದಕ್ಕಾಗಿ ನಾನು ಹೋಗಿರಲಿಲ್ಲ. ಕಾಂಗ್ರೆಸ್‌ ಪಕ್ಷದ ಚಿಂತನಾ ಸಭೆಯಲ್ಲೂ ನಾನು ಪಾಲ್ಗೊಂಡಿರಲಿಲ್ಲ’ ಎಂದು ಸ್ಪಷ್ಟನೆ ನಿಡಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಬೇಕು: ಸಿದ್ದರಾಮಯ್ಯ ಅವರು ಎಂದೂ ತಮ್ಮ ಜನ್ಮದಿನವನ್ನು ಆಚರಿಸಿಕೊಂಡವರಲ್ಲ. ಅಭಿಮಾನಿಗಳ ಒತ್ತಡಕ್ಕೆ ಮಣಿದು ಒಪ್ಪಿದ್ದಾರೆ. ಅದರಲ್ಲಿ ಎಲ್ಲರೂ ಕಾಂಗ್ರೆಸ್‌ನವರೇ ಇದ್ದಾರೆ. ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಮಾಜಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು. ಸಿದ್ದರಾಮೋತ್ಸವದ ಪೂರ್ವಭಾವಿ ಸಭೆಗೆ ಸೋಮವಾರ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮೋತ್ಸವಕ್ಕೆ ಕೆಪಿಸಿಸಿ ಅಧ್ಯಕ್ಷರು, ಡಾ.ಪರಮೇಶ್ವರ್‌, ಸುರ್ಜೆವಾಲಾ, ರಾಹುಲ್ ಗಾಂಧಿ, ಎಂ.ಬಿ. ಪಾಟೀಲ್‌, ಆರ್‌.ವಿ. ದೇಶಪಾಂಡೆ, ಮಲ್ಲಿಕಾರ್ಜುನ ಖರ್ಗೆ ಹೀಗೆ ಅನೇಕರು ಬರುತ್ತಾರೆ. 

ಡಿಕೆಶಿ ಜೊತೆ ಕಿತ್ತಾಟ, ಸಿದ್ದು ಆಪ್ತ ಜಮೀರ್ ಅಹಮದ್‌ಗೆ ಹೈಕಮಾಂಡ್ ಶಾಕ್

ಸಿದ್ದರಾಮಯ್ಯನವರ ಅಭಿಮಾನಿಗಳೇ ಸೇರಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದರಲ್ಲಿ ಕಾಂಗ್ರೆಸ್‌ನವರೇ ಇದ್ದಾರಲ್ಲ ಎಂದು ಹೇಳಿದರು. ಡಿ.ಕೆ. ಶಿವಕುಮಾರ-ಜಮೀರ್‌ ನಡುವಿನ ಪೊಲಿಟಿಕಲ್‌ ವಾರ್‌ಗೆ ಇದು ಮುನ್ನುಡಿಯಾ ಎಂದು ಕೇಳಿದ ಪ್ರಶ್ನೆಗೆ, ಇದೆಲ್ಲ ಮಾಧ್ಯಮದವರ ಸೃಷ್ಟಿ. ಸಿದ್ದರಾಮೋತ್ಸವಕ್ಕೆ ಡಿ.ಕೆ. ಶಿವಕುಮಾರ್‌ ಅವರೂ ಬರುತ್ತಾರೆ ಎಂದು ಪ್ರತಿಕ್ರಿಯಿಸಿದರು.