ಪದೇ ಪದೇ ಮುಂದಿನ ಸಿಎಂ ಹೇಳಿಕೆ ನೀಡುವ ಜೊತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಹಿರಂಗ ಹೇಳಿಕೆಗಳನ್ನ ನೀಡುತ್ತಿರುವ ಶಾಸಕ ಜಮೀರ್ ಅಹಮದ್‌ಗೆ ಹೈಕಮಾಂಡ್ ಶಾಕ್ ಕೊಟ್ಟಿದೆ.

ಬೆಂಗಳೂರು, (ಜುಲೈ.25): ಮುಂದಿನ ಸಿಎಂ ವಿಚಾರದಲ್ಲಿ ಬಹಿರಂಗ ಹೇಳಿಕೆ ನೀಡುತ್ತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ತಿಕ್ಕಾಟಕ್ಕಿಳಿದಿರುವ ಸಿದ್ದರಾಮಯ್ಯನವರ ಆಪ್ತ ಶಾಸಕ ಜಮೀರ್ ಅಹಮದ್ ಖಾನ್‌ಗೆ ಹೈಕಮಾಂಡ್ ಶಾಕ್ ಕೊಟ್ಟಿದದೆ.

ಬಹಿರಂಗವಾಗಿ ಅಧ್ಯಕ್ಷರ ವಿರುದ್ಧ ಬಹಿರಂಗ ಹೇಳಿಕೆ ನೀಡಿ ಪಕ್ಷಕ್ಕೆ ತೀವ್ರ ಇರಿಸು ಮುರಿಸು ಉಂಟು ಮಾಡಿದ ಆರೋಪದ ಮೇಲೆ ಶಾಸಕ ಜಮೀರ್ ಅಹಮದ್ ಖಾನ್‌ಗೆ ಇಂದು(ಸೋಮವಾರ) ಎಐಸಿಸಿ ನೋಟಿಸ್ ನೀಡಿದೆ.

ಮುಂದಿನ ಮುಖ್ಯಮಂತ್ರಿ ಹೇಳಿಕೆಗೆ ಸಂಬಂಧಿಸಿ ಜಮೀರ್ ಅಹಮದ್ ಗೆ ರಾಜ್ಯ ಉಸ್ತುವಾರಿ ಸುರ್ಜೆವಾಲ ಎಚ್ಚರಿಕೆ ಪತ್ರ ನೀಡಿದ್ದು, ಪಕ್ಷದ ಶಿಸ್ತು, ಲಕ್ಷಣ ರೇಖೆ ದಾಟದಂತೆ ಸೂಚಿಸಲಾದ್ದು , ಇತ್ತೀಚೆಗಿನ ಹೇಳಿಕೆಯಿಂದ ತಪ್ಪು ಸಂದೇಶ ರವಾನೆಯಾಗಿದೆ ಎಂದು ನೋಟಿಸ್ ನೀಡಲಾಗಿದೆ.

ಕೈ ಕೋಟೆಯೊಳಗೆ ಬೆಂಕಿ: ಮತ್ತೆ ಭುಗಿಲೆದ್ದು ಸ್ಫೋಟಿಸಿದ್ದೇಕೆ ಡಿಕೆ-ಜಮೀರ್ ಜ್ವಾಲಾಮುಖಿ?

ಭವಿಷ್ಯದಲ್ಲಿ ಹೇಳಿಕೆ ನೀಡುವಾಗ ಎಚ್ಚರ ವಹಿಸಬೇಕು ಮತ್ತು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳಿಗೆ ದೃಢವಾಗಿ ಅಂಟಿಕೊಳ್ಳಬೇಕು ಎಂದು ನೋಟಿಸ್‌ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನೋಟಿಸ್ ಬಗ್ಗೆ ಜಮೀರ್ ಪ್ರತಿಕ್ರಿಯೆ
ಇನ್ನು ನೋಟಿಸ್ ಬಗ್ಗೆ ದಾವಣಗೆರೆಯಲ್ಲಿ ಮಾಧ್ಯಮಗಳ ಪ್ರತಿಕ್ರಿಯೆ ಕೇಳಿದ್ದಕ್ಕೆ ಜಮೀರ್ ಮಾತನಾಡಿದ್ದು, ನನಗೆ ಎಐಸಿಸಿಯಿಂದ ಯಾವುದೇ ನೋಟೀಸ್ ಬಂದಿಲ್ಲ. ಇದುವರೆಗೂ ಯಾವುದೇ ಬಂದಿಲ್ಲ. ನೋಟಿಸ್ ಬರುವಂತಹದ್ದು ನಾನೇನು ಮಾಡಿದೀನಿ. ನಾನು ಯಾವ ಜಾತಿ ಬಗ್ಗೆ ಮಾತನಾಡಿಲ್ಲ. ಯಾವ ಜಾತಿ ವಿರುದ್ದ ಮಾತನಾಡಿದ್ದೇನೆ ಹೇಳಿ‌ ಎಂದು ಪ್ರಶ್ನಿಸಿದರು.

ಒಂದು ಜಾತಿ ಓಟ್ ತೆಗೆದುಕೊಂಡು ಸಿಎಂ ಆಗೋಕೆ ಸಾಧ್ಯ ಇಲ್ಲ ಎಂದು ಹೇಳಿದ್ದೇನೆ. ಎಲ್ಲಾ ಜಾತಿಯವರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಾಗುತ್ತೆ ಎಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

‘ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ’ ಎಂಬ ಡಿ.ಕೆ.ಶಿವಕುಮಾರ್ ಎಚ್ಚರಿಕೆಗೆ ಜಮೀರ್ ಸಡ್ಡು ಹೊಡೆದು ''ನನಗೆ ವ್ಯಕ್ತಿ ಪೂಜೆಯೂ ಮುಖ್ಯ, ಪಕ್ಷ ಪೂಜೆಯೂ ಮುಖ್ಯ' ಎಂದಿದ್ದರು. ನಾನೇ ಮುಂದಿನ ಮುಖ್ಯಮಂತ್ರಿ ಎಂಬ ಹೇಳಿಕೆಗೆ ಚಾಲನೆ ಕೊಟ್ಟಿದ್ದೇ ಡಿ.ಕೆ.ಶಿವಕುಮಾರ್. ಇದಾದ ಬಳಿಕ ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ ಎಂದು ತಿರುಗೇಟು ನೀಡಿದ್ದರು.

ನೋಟಿಸ್ ನೀಡಲು ಡಿಕೆಶಿ ಆಪ್ತರು ಆಗ್ರಹಿಸಿದ್ರು
ಪದೇ ಪದೇ ಮುಂದಿನ ಸಿಎಂ ಹೇಳಿಕೆ ಕೊಡುತ್ತಿರುವ ಶಾಸಕ ಜಮೀರ್ ಅಹಮ್ಮದ್ ಖಾನ್ ಈಗ ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಸವಾಲು ಹಾಕಿದ್ದಾರೆ.

ಜಮೀರ್ ಸವಾಲಿನಿಂದ ಸಿಟ್ಟಿಗೆದ್ದ ಡಿಕೆಶಿ ಟೀಂ ಜಮೀರ್‌ಗೆ ನೋಟಿಸ್ ಕೊಡಿ ಎಂದು ಆಗ್ರಹಿಸಿದ್ದರು. ಶತಾಯಗತಾಯ ಈ ಬಾರಿ ಶಾಸಕ ಜಮೀರ್‌ ಶೋಕಾಸ್ ನೋಟಿಸ್ ಜಾರಿ ಮಾಡಲೇಬೇಕು ಅವರಿಗೆ ಶಿಸ್ತು ಕ್ರಮದ ಬಿಸಿ ಮುಟ್ಟಿಸಲೇಬೇಕು ಎಂಬ ಹಟಕ್ಕೆ ಬಿದ್ದಿದ್ರು. ಶಿಸ್ತುಪಾಲನ ಸಮಿತಿ ಅಧ್ಯಕ್ಷ ರಹೆಮಾನ್ ಖಾನ್‍ಗೆ ಸ್ವತಹ ಕೆಪಿಸಿಸಿ ಅಧ್ಯಕ್ಷರೆ ಸೂಚನೆ ನೀಡಿದ್ದರು ಎಂದು ತಿಳಿದುಬಂದಿತ್ತು.