ಪಕ್ಷದಲ್ಲಿ ಸಂಪುಟ ಪುನರಚನೆಯ ಬಗ್ಗೆ ಮಾತ್ರ ಚರ್ಚೆಗಳು ನಡೆಯುತ್ತಿದೆಯಷ್ಟೇ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್‌ ಸೇಠ್‌ ಹೇಳಿದರು. ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿದರು.

ಮೈಸೂರು (ನ.01): ಪಕ್ಷದಲ್ಲಿ ಸಂಪುಟ ಪುನರಚನೆಯ ಬಗ್ಗೆ ಮಾತ್ರ ಚರ್ಚೆಗಳು ನಡೆಯುತ್ತಿದೆಯಷ್ಟೇ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್‌ ಸೇಠ್‌ ಹೇಳಿದರು. ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಅವರು, ನವೆಂಬರ್‌ ಕ್ರಾಂತಿಯ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಕ್ರಾಂತಿಯ ಬಗ್ಗೆ ಸುಮ್ಮನೆ ಚರ್ಚೆಗಳು ನಡೆಯುತ್ತಿದೆ ಅಷ್ಟೇ. ಸಂಪುಟ ಪುನಾರಚನೆ ಬಗ್ಗೆ ಮಾತ್ರ ಚಿಂತನೆ ನಡೆದಿದೆ. ಈ ತಿಂಗಳ ಅಂತ್ಯದಲ್ಲಿ ಸಂಪುಟ ಪುನಾರಚನೆ ಆಗಬಹುದು. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಇದ್ದೇನೆ ಎಂದರು.

ನನಗೂ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ಸಿಎಂ ಸ್ಥಾನದ ಬಗ್ಗೆ ಮುಂದಿನ ನಾಯಕತ್ವದ ಬಗ್ಗೆ ಯಾರು ಏನೇ ಮಾತನಾಡಿದರು ಅದು ಅವರ ವೈಯಕ್ತಿಕ ಹೇಳಿಕೆ. ಯಾರೂ ಕೂಡ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಬಾರದು ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದ್ದಾರೆ. ಕೆಲವರು ದಲಿತ ಸಿಎಂ ಬಗ್ಗೆ ಮಾತನಾಡುತ್ತಾರೆ. ಕೆಲವರು ಮತ್ತೊಬ್ಬರ ಹೆಸರು ಮಾತನಾಡುತ್ತಾರೆ. ಅದು ಅವರ ಅಭಿಪ್ರಾಯ ಅಷ್ಟೇ. ಯತೀಂದ್ರ ನೀಡಿರುವ ಹೇಳಿಕೆಯೂ ಅದು ಅವರ ವೈಯಕ್ತಿಕವಾದದ್ದು ಎಂದು ಅವರು ಹೇಳಿದರು.

ಕೇಸ್‌ ಪಡೆದವರ ಮೇಲೆ ತನಿಖೆಯಾಗಲಿ

ಧರ್ಮಸ್ಥಳ ಪ್ರಕರಣ ಹಿಂದಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ತನ್ವೀರ್‌ಸೇಠ್‌ ಅವರು, ಕೇಸ್ ಪಡೆದವರ ಮೇಲೆ ತನಿಖೆಯಾಗಬೇಕು. ಯಾವ ಉದ್ದೇಶಕ್ಕಾಗಿ ದೂರು ಕೊಟ್ಟರು, ಈಗ ಯಾವ ಉದ್ದೇಶಕ್ಕಾಗಿ ಪ್ರಕರಣ ಹಿಂದಕ್ಕ ತೆಗೆದುಕೊಳ್ಳುತ್ತಿದ್ದಾರೆ. ಅವರ ಉದ್ದೇಶ ಏನು? ಅವರಿಗೆ ಯಾರು ಫಂಡ್ ಮಾಡಿದ್ದಾರೆ. ಇವೆಲ್ಲಾ ಸತ್ಯ ಹೊರಬರಬೇಕಿದೆ ಎಂದರು. ಸುಮ್ಮನೆ ಒಂದು ಧಾರ್ಮಿಕ ಕ್ಷೇತ್ರದ ಮೇಲೆ ಈ ರೀತಿ ಆರೋಪ ಮಾಡಿ ಸುಮ್ಮನೆ ಬಿಡುವುದನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇದು ಧಾರ್ಮಿಕ ನಂಬಿಕೆಯ ಪ್ರಶ್ನೆ. ಹೀಗಾಗಿ ಅವರ ಮೇಲೆ ತನಿಖೆಯಾಗಲಿ ಎಂದು ಅವರು ಒತ್ತಾಯಿಸಿದರು.