ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಆಪ್ತ ಶಾಸಕ ಡಾ. ರಂಗನಾಥ್ ಅವರು ಡಿಕೆಶಿ ಮುಖ್ಯಮಂತ್ರಿ ಆಗಲೆಂದು ನವರಾತ್ರಿಯ 9 ದಿನಗಳ ಕಾಲ ಉಪವಾಸ ವ್ರತ ಮಾಡಿದ್ದಾರೆ.

ಕುಣಿಗಲ್ : ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಆಪ್ತ ಶಾಸಕ ಡಾ. ರಂಗನಾಥ್ ಅವರು ಡಿಕೆಶಿ ಮುಖ್ಯಮಂತ್ರಿ ಆಗಲೆಂದು ನವರಾತ್ರಿಯ 9 ದಿನಗಳ ಕಾಲ ಉಪವಾಸ ವ್ರತ ಮಾಡಿದ್ದಾರೆ.

ತಾಲೂಕಿನ ವಗರಗೆರೆ ಗ್ರಾಮದ ದಲಿತ ಮಹಿಳೆ ಜಯಮ್ಮ ಎಂಬುವರ ಮನೆಯಲ್ಲಿ ಗುರುವಾರ ಮುದ್ದೆ ಸಾರು ಊಟ ಮಾಡಿ ಉಪವಾಸ ಅಂತ್ಯಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನವರಾತ್ರಿಯಂದು ಹಲವರು ಸಂಕಲ್ಪ ಮಾಡಿ ಉಪವಾಸ ಮಾಡುವ ಮೂಲಕ ಶಕ್ತಿ ದೇವತೆಗಳಿಂದ ವರ ಪಡೆಯುತ್ತಾರೆ. ಅದೇ ರೀತಿ ನಾನು 3 ಸಂಕಲ್ಪ ಮಾಡಿ 9 ದಿನಗಳ ಕಾಲ ಉಪವಾಸ ಮಾಡಿದ್ದೆ. ಅದರಲ್ಲಿ ನಮ್ಮ ಮನೆಯ ಮುಖ್ಯಸ್ಥರಿಗೆ ಈ ರಾಜ್ಯದ ಉನ್ನತ ಹುದ್ದೆ ಸಿಗಬೇಕು ಎಂಬ ಸಂಕಲ್ಪವೂ ಒಂದಾಗಿದೆ ಎಂದು ಪರೋಕ್ಷವಾಗಿ ಡಿಕೆಶಿ ಸಿಎಂ ಆಗಲು ವ್ರತ ಮಾಡಿದ್ದಾಗಿ ತಿಳಿಸಿದರು. ಕುಣಿಗಲ್ ತಾಲೂಕಿನಲ್ಲಿ ಹೆಚ್ಚಾಗಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿ, ಕುಣಿಗಲ್‌ಗೆ ಲಿಂಕ್ ಕೆನಾಲ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂಬ ಸಂಕಲ್ಪವನ್ನೂ ಮಾಡಿದ್ದಾಗಿ ಶಾಸಕರು ಹೇಳಿದರು.

ವಿಜಯದಶಮಿಯ ಸಂಕಲ್ಪಗಳು ಈಡೇರುತ್ತವೆ ಎಂಬ ನಂಬಿಕೆ ನಮ್ಮ ಹಲವಾರು ತಾಯಂದಿರಲ್ಲಿ ಇದೆ. ನಾನು ಕೂಡ ಮೊದಲು ದೇವರು, ಮಠ, ದೇಗುಲಗಳನ್ನು ನಂಬದವನಾಗಿದ್ದೆ. ಆದರೆ, ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಶ್ರದ್ಧೆ ಹೆಚ್ಚಾಗುತ್ತಿದ್ದು, ಹಿಂದೂ ಧರ್ಮದ ಸಂಪ್ರದಾಯದಂತೆ ಹಲವಾರು ದೈವಿಕ ಆಚಾರಗಳಲ್ಲಿ ತೊಡಗಿದ್ದೇನೆ ಎಂದರು.

ದಲಿತರ ಮನೆಯಲ್ಲಿ ಉಪವಾಸ ಅಂತ್ಯಗೊಳಿಸಿ, ಇವರ ಮನೆ ಮುದ್ದೆ ಸಾರು ನನಗೆ ತೃಪ್ತಿ ತಂದಿದೆ, ಈ ತಾಯಿಯ ಸಮಸ್ಯೆಯನ್ನು ನೇರವಾಗಿ ಅರಿತು ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಎಲ್ಲಾ ರೀತಿಯ ಸಹಕಾರ ಮಾಡುತ್ತೇನೆ ಎಂದು ಹೇಳಿದರು.