ಸಂಕ್ರಾಂತಿ ಬಳಿಕ ರಾಜ್ಯ ಸಚಿವ ಸಂಪುಟದ ಪುನಾರಚನೆ ಸಾಧ್ಯತೆಯಿದೆ. ಉತ್ತಮವಾಗಿ ಕಾರ್ಯನಿರ್ವಹಿಸಿದ ಶೇ. 50ರಷ್ಟು ಸಚಿವರಿಗೆ ಪಕ್ಷದ ಜವಾಬ್ದಾರಿ ನೀಡಿ, ಹೊಸಬರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದ ವಿಧಾನಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್,
ಹುಬ್ಬಳ್ಳಿ : ಸಂಕ್ರಾಂತಿ ಬಳಿಕ ರಾಜ್ಯ ಸಚಿವ ಸಂಪುಟದ ಪುನಾರಚನೆ ಸಾಧ್ಯತೆಯಿದೆ. ಉತ್ತಮವಾಗಿ ಕಾರ್ಯನಿರ್ವಹಿಸಿದ ಶೇ. 50ರಷ್ಟು ಸಚಿವರಿಗೆ ಪಕ್ಷದ ಜವಾಬ್ದಾರಿ ನೀಡಿ, ಹೊಸಬರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದ ವಿಧಾನಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ತಾವೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದರು.
ಸಂಪುಟ ಪುನಾರಚನೆ ಕುರಿತು ಪಕ್ಷದ ಹೈಕಮಾಂಡ್ ಚಿಂತನೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಚಿವ ಸಂಪುಟ ಪುನಾರಚನೆ ಕುರಿತು ಪಕ್ಷದ ಹೈಕಮಾಂಡ್ ಚಿಂತನೆ ನಡೆಸಿದೆ. ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. 22 ವರ್ಷಗಳಿಂದ ಕಿತ್ತೂರ ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ದೊರೆತಿಲ್ಲ. ಈ ಹಿಂದೆಯೇ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಈ ಬಾರಿ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ಈ ನಿರ್ಧಾರ ಕೈಗೊಳ್ಳಲಿದೆ ಎಂದರು.
ದೇಶಾದ್ಯಂತ ಹೋರಾಟ:
ಮನರೇಗಾ ಯೋಜನೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಹೆಸರು ತೆಗೆದು ಹಾಕಿರುವುದು ಖಂಡನಾರ್ಹ. ಈ ಹೆಸರು ಬದಲಿಸುವ ಔಚಿತ್ಯ ಏನಿತ್ತು? ಬಿಜೆಪಿಯವರು ನೆಹರು, ರಾಜೀವ ಗಾಂಧಿ, ಇಂದಿರಾ ಗಾಂಧಿ ಅವರನ್ನೂ ಬಿಡಲಿಲ್ಲ. ಈಗ ಮಹಾತ್ಮ ಗಾಂಧಿಯನ್ನು ಬಿಡುತ್ತಿಲ್ಲ. ಇವರು ಗಾಂಧಿ ವಿರೋಧಿಗಳು. ಹಾಗಾಗಿ ಅವರ ಹೆಸರು ಬದಲಾವಣೆ ಮಾಡಿದೆ. ಇದನ್ನು ಕಾಂಗ್ರೆಸ್ ಖಂಡಿಸಿದ್ದು ಇದರ ವಿರುದ್ಧ ಜ. 5ರಿಂದ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.


