ಕಾಂಗ್ರೆಸ್ ಜಯಗಳಿಸುವುದೇ ಪ್ರಮುಖ ಉದ್ದೇಶವಾಗಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆ ಕಣಕ್ಕೆ ಯಾರು ನಿಲ್ಲಬೇಕು ಎಂಬ ತೀರ್ಮಾನವನ್ನು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರುಗಳು ತಿಳಿಸಬೇಕೆಂದು ಶಾಸಕ ಆರ್. ನರೇಂದ್ರ ತಿಳಿಸಿದರು.
ಹನೂರು (ನ.13): ಕಾಂಗ್ರೆಸ್ ಜಯಗಳಿಸುವುದೇ ಪ್ರಮುಖ ಉದ್ದೇಶವಾಗಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆ ಕಣಕ್ಕೆ ಯಾರು ನಿಲ್ಲಬೇಕು ಎಂಬ ತೀರ್ಮಾನವನ್ನು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರುಗಳು ತಿಳಿಸಬೇಕೆಂದು ಶಾಸಕ ಆರ್. ನರೇಂದ್ರ ತಿಳಿಸಿದರು. ಕೆಪಿಸಿಸಿ ಆದೇಶದ ಮೇರೆಗೆ ಹನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷಿಗಳ ಅರ್ಜಿ ಸಲ್ಲಿಸುವ ಸಂಬಂಧ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಜನ ಬಲ, ಅಭಿವೃದ್ಧಿ ಕಾರ್ಯವೇ ಮುಖ್ಯ ಎಂದು ನಂಬಿದ್ದೇನೆ. ಆದರೆ, ಪ್ರಸ್ತುತ ಕ್ಷೇತ್ರದ ರಾಜಕೀಯ ಪರಿಸ್ಥಿತಿಯಲ್ಲಿ ಹಣದ ಆಮಿಷ ಒಡ್ಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆ ಇಲ್ಲವಾದರೆ ನಮ್ಮ ಪಕ್ಷದಿಂದ ಹಣವಂತರನ್ನು ಕರೆತಂದು ಸ್ಪರ್ಧಿಸಲಾಗುವುದು ಎಂದು ಮಾರ್ಮಿಕವಾಗಿ ನುಡಿದ ಅವರು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ತಮ್ಮ ದೃಢವಾದ ನಿರ್ಧಾರವನ್ನು ಕಾಯ, ವಾಚ, ಮನಸ್ಸಿನಿಂದ ತಿಳಿಸಬೇಕೆಂದು ಮನವಿ ಮಾಡಿದರು.
Chamarajanagar: ಸಚಿವ ಸುಧಾಕರ್ ರಾಜೀನಾಮೆಗೆ ವಾಟಾಳ್ ನಾಗರಾಜ್ ಆಗ್ರಹ
ಈ ವೇಳೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ವಿವಿಧ ಸಮುದಾಯಗಳನ್ನು ಪ್ರತಿನಿಧಿಸುವ ಮುಖಂಡರು ಸೇರಿದಂತೆ ವಿವಿಧ ಗ್ರಾಮಗಳ ಕಾರ್ಯಕರ್ತರು ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಸದೃಢವಾಗಿ ಇರಬೇಕಾದರೆ. ಜಿ. ರಾಜುಗೌಡರ ಕುಟುಂಬ ಪ್ರಮುಖ ಕಾರಣ. ಅದರಲ್ಲೂ ಕಳೆದ ಮೂರು ಅವಧಿಗಳಲ್ಲಿ ಉತ್ತಮ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾವಿರಾರು ಕೋಟಿ ರೂ. ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡು ಇಂದಿಗೂ ತಮ್ಮದೇ ಆದ ಜನಪ್ರಿಯತೆ ಗಳಿಸಿರುವ ಶಾಸಕ ಆರ್.ನರೇಂದ್ರ ಅವರೇ ನಮ್ಮ ಏಕೈಕ ಅಭ್ಯರ್ಥಿ ಅವರನ್ನು ಹೊರತುಪಡಿಸಿ ಬೇರೆ ಯಾರು ಇಲ್ಲ ಎಂದು ಒಕ್ಕೊರಲ್ಲಿನಿಂದ ಸಹಮತ ವ್ಯಕ್ತಪಡಿಸಿದರು.
ದುಡ್ಡಿಗೆ ಮಾರಿಕೊಳ್ಳುವ ಜನ ನಾವಲ್ಲ: ಸಭೆಯಲ್ಲಿ ದುಡ್ಡಿನ ಬಗ್ಗೆ ಪ್ರಸ್ತಾಪಿಸಿದ ವಿವಿಧ ಮುಖಂಡರು, ಯಾರು ಎಷ್ಟೇ ಆಮಿಷ ಒಡ್ಡಿದರೂ ಹಣಕ್ಕೆ ಮಾರಿಕೊಳ್ಳುವ ಜನ ನಾವಲ್ಲ. ನಮಗೆ ಅಭಿವೃದ್ಧಿ ಮುಖ್ಯ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಾಲ್ಕನೇ ಬಾರಿಗೆ ಶಾಸಕ ಆರ್.ನರೇಂದ್ರ ಅವರು ವಿಜಯಶಾಲಿಗಳಾಗಿ ಸಚಿವರಾಗುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುವುದರ ಜೊತೆಗೆ ಬಿಜೆಪಿಯ ದುರಾಡಳಿತ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದ ಬಹುಗ್ರಾಮ ಕುಡಿವ ನೀರಿನ ಯೋಜನೆ, ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬುವ ಯೋಜನೆ, ಕೆಶಿಫ್ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿ ಶಾಸಕ ಆರ್.ನರೇಂದ್ರ ಅವರ ಬಗ್ಗೆ ಗುಣಗಾನ ಮಾಡಿದರು.
Chamarajanagar: ಕೆರೆಗೆ ನೀರು ತುಂಬಿಸುವ ಯೋಜನೆಗೆ ಸಚಿವ ಸೋಮಣ್ಣ ಸೂಚನೆ
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಜಿ.ಪಂ. ಮಾಜಿ ಉಪಾಧ್ಯಕ್ಷ ಬಸವರಾಜು, ತಾ.ಪಂ. ಮಾಜಿ ಅಧ್ಯಕ್ಷ ಮುರುಡೇಶ್ವರ ಸ್ವಾಮಿ, ಮದುವನಹಳ್ಳಿ ಶಿವಕುಮಾರ್, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ವೆಂಕಟರಮಣೆಗೌಡ, ಚಿಕ್ಕ ತಮ್ಮೆಗೌಡ, ಮಂಗಲ ಪುಟ್ಟರಾಜು, ಎಸ್.ಸಿ.ಘಟಕದ ನಾಗರಾಜು, ಎಸ್.ಟಿ. ಘಟಕದ ಪಾಳ್ಯ ಕೃಷ್ಣ, ಉದ್ನೂರು ಸಿದ್ದರಾಜು, ಚೇತನ್ ದೊರೆರಾಜು, ಅಜ್ಜಿಪುರ ನಾಗರಾಜು ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
